ಶಿವಮೊಗ್ಗ : ಬದುಕಿನ ಯಶಸ್ಸಿನ ಅಭ್ಯುದಯಕ್ಕೆ ನಾಗರಿಕ ಕೌಶಲ್ಯತೆ ಎಂಬುದು ಅತ್ಯಗತ್ಯ ಎಂದು ಪ್ರಕೃತಿ ವಿಕೋಪ ಅಧ್ಯಯನ ತಜ್ಞ ಡಾ.ವಿ.ಎಲ್.ಎಸ್ ಕುಮಾರ್ ಹೇಳಿದರು.
ನಗರದ ಎನ್ಇಎಸ್ ಇನ್ಸ್ಟಿಟ್ಯೂಟ್ ಆಫ್ ಅಡ್ವಾನ್ಸ್ಡ್ ಸ್ಟಡೀಸ್ ಕಾಲೇಜಿನ ವತಿಯಿಂದ ಸೋಮವಾರ ಸುವರ್ಣ ಸಂಸ್ಕೃತಿ ಭವನದಲ್ಲಿ ಪ್ರಥಮ ವರ್ಷದ ಬಿಕಾಂ, ಬಿಬಿಎ, ಬಿಸಿಎ ಪ್ರವೇಶಾತಿ ಪಡೆದಿರುವ ವಿದ್ಯಾರ್ಥಿಗಳಿಗಾಗಿ ಏರ್ಪಡಿಸಿದ್ದ ‘ಅಭ್ಯುದಯ’ ಓರಿಯಂಟೇಷನ್ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.
ಜಗತ್ತಿನ ತಾಂತ್ರಿಕ ಬದಲಾವಣೆಯ ಬಗ್ಗೆ ಚರ್ಚಿಸುವಾಗ, ಯುವ ಜನತೆ ಸಾಗುತ್ತಿರುವ ರೀತಿ ನೋಡಿದರೆ ಆತಂಕವಾಗುತ್ತದೆ. ಎನ್ಇಎಸ್ ಸಂಸ್ಥೆಯ ಸಾವಿರಾರು ಹಿರಿಯ ವಿದ್ಯಾರ್ಥಿಗಳು ವಿಶ್ವದಾದ್ಯಂತ ಅನೇಕ ಸಾಧನೆಗಳನ್ನು ಮಾಡುತ್ತಿರುವುದು ಮಲೆನಾಡಿಗೆ ಒಂದು ಹೆಮ್ಮೆಯ ವಿಚಾರ ಎಂದು ಹೇಳಿದರು.
ಪದವಿಧರರಾಗಿ ಹೊರಬರುತ್ತಿರುವ ಯುವ ಸಮೂಹದಲ್ಲಿ ಕೌಶಲ್ಯತೆಯ ಕೊರತೆ ಕಾಣುತ್ತಿದೆ. ಸಾಮಾಜಿಕ ಜಾಲತಾಣಗಳು ಒಟಿಟಿ ವೇದಿಕೆಗಳು ಯುವ ಸಮೂಹವನ್ನು ಜ್ಞಾನದಲ್ಲಿ ಹಿಂದೆ ಹೋಗುವಂತೆ ಮಾಡುತ್ತಿದೆ. ಸಮಯದ ನಿರ್ವಹಣೆ, ಹೊಸತನಕ್ಕೆ ತೆರೆದುಕೊಳ್ಳುವ ಮನಸ್ಥಿತಿ, ಉತ್ತಮ ಗುರಿ ಮತ್ತು ಭಾವನೆ ನಿಮ್ಮದಾಗಲಿ.
ಇತ್ತಿಚೆಗೆ ರಸ್ತೆ ಅಪಘಾತದಲ್ಲಿ ಬಲಿಯಾಗುತ್ತಿರುವವರು ಅಪ್ರಾಪ್ತ ವಯಸ್ಸಿನ ಯುವ ಸಮೂಹ. ಅವರಲ್ಲಿ ಮಾದಕ ವ್ಯಸನವೆಂಬುದು ಅಪಾಯಕಾರಿ ವರ್ತನೆ ಮಾಡುವಂತೆ ಪ್ರೇರೆಪಿಸುತ್ತಿದೆ. ನಿಮ್ಮ ಮಕ್ಕಳ ಮೇಲೆ ಪೋಷಕರು ನಿಗಾ ವಹಿಸಿ.
ಯಾವುದೇ ದುರಾಭ್ಯಾಸಗಳು ಪ್ರಾರಂಭವಾಗುವುದು ಕಾಲೇಜು ದಿನಗಳಿಂದ. ಬದುಕಿನ ಅಭ್ಯುದಯಕ್ಕೆ ಪ್ರೇರಣೆ ನೀಡುವ ಸ್ನೇಹಿತರು ಹಾಗೂ ವೇದಿಕೆಗಳತ್ತ ಚಿತ್ತ ಹರಿಸಿ. ದುರಾಭ್ಯಾಸಗಳಿಂದ ಬಳಲುತ್ತಿರುವ ನಿಮ್ಮ ಸ್ನೇಹಿತರಿಗೆ ಆಪ್ತ ಸಮಾಲೋಚಕರಾಗಿ ಅವರನ್ನು ಬದಲಾಯಿಸಲು ಪ್ರಯತ್ನಿಸಿ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಕಾರ್ಯಕ್ರಮ ಉದ್ಘಾಟಿಸಿದ ಕುವೆಂಪು ವಿಶ್ವವಿದ್ಯಾಲಯ ಕಾಲೇಜು ಅಭಿವೃದ್ಧಿ ಮಂಡಳಿಯ ನಿರ್ದೇಶಕ ಡಾ.ಕೆ.ನಾಗರಾಜ ಮಾತನಾಡಿ, ಪ್ರತಿದಿನವೂ ವಿದ್ಯಾರ್ಥಿಗಳಿಂದ ಹೊಸತನವನ್ನು ಕಲಿಯುವ ಅವಕಾಶ ಉಪನ್ಯಾಸಕರಿಗಿದೆ. ಧೃಡತೆಯೆ ನಮ್ಮ ಅಭ್ಯುದಯಕ್ಕೆ ಮೂಲ ಕಾರಣ. ಅಂತಹ ಯಶಸ್ಸಿಗೆ ದಾರಿ ದೀಪವಾಗಿ ವಿದ್ಯಾಸಂಸ್ಥೆ, ಉಪನ್ಯಾಸಕರು ಸಹಕಾರಿಯಾಗಲಿದ್ದಾರೆ.
ಕನಸು ಕಾಣಲು ಪ್ರಯತ್ನಿಸಿ, ವ್ಯಕ್ತಿತ್ವ ವಿಕಸನಕ್ಕಾಗಿ ಸಿಗುವ ಎಲ್ಲಾ ಅವಕಾಶಗಳನ್ನು ಬಳಸಿಕೊಳ್ಳಿ. ನಿಮ್ಮ ಕನಸುಗಳ ಬಗ್ಗೆ ನಿಮಗೆ ತಿಳಿದಾಗ ಮಾತ್ರ ಜೀವನದ ಸೌಂದರ್ಯ ನಿಜವಾಗಿ ಗೊತ್ತಾಗುತ್ತೆ. ನಿಮ್ಮ ಜೀವನ ರೂಪಿಸಿಕೊಳ್ಳುವ ಶಿಲ್ಪಿಗಳು ನೀವೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಶಿಕ್ಷಣ ಸಮಿತಿ ಕಾರ್ಯದರ್ಶಿ ಎಸ್.ಎನ್.ನಾಗರಾಜ, ನಿರ್ದೇಶಕರಾದ ಟಿ.ಆರ್.ಅಶ್ವಥನಾರಾಯಣ ಶೆಟ್ಟಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಪ್ರಾಂಶುಪಾಲರಾದ ಡಾ.ಬಿ.ಎಸ್.ಶಿವಪ್ರಸಾದ್ ಅಧ್ಯಕ್ಷತೆ ವಹಿಸಿದ್ದರು.
ಇದೇ ವೇಳೆ ವಿವಿಧ ವಿಭಾಗಗಳಲ್ಲಿ ಅತಿ ಹೆಚ್ಚು ಅಂಕ ಪಡೆದು ಉತ್ತೀರ್ಣರಾದ ಕಾಲೇಜಿನ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.