ಕ್ರೀಡೆಯಿಂದ ಶಿಸ್ತು, ಏಕಾಗ್ರತೆ ಬೆಳೆಯುವುದು ಎಂದು ಶಿವಮೊಗ್ಗದ ಶಾಸಕರಾದ ಚನ್ನಬಸಪ್ಪ ಕ್ರೀಡಾಪಟುಗಳಿಗೆ ತಿಳಿಸಿದರು.
ಅವರು ನೆಹರೂ ಕ್ರೀಡಾಂಗಣದಲ್ಲಿ ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕರ ಕಚೇರಿ, ಶಿವಮೊಗ್ಗ ಹಾಗೂ ಜಿಲ್ಲಾ ಪ್ರಾಥಮಿಕ ಶಾಲಾ ದೈಹಿಕ ಶಿಕ್ಷಣ ಶಿಕ್ಷಕರ ಸಂಘ ಶಿವಮೊಗ್ಗ ಇವರ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ
14 ವರ್ಷ ವಯೋಮಿತಿಯೊಳಗಿನ ಬಾಲಕ ಮತ್ತು ಬಾಲಕಿಯರ ಜಿಲ್ಲಾ ಮಟ್ಟದ ಪ್ರಾಥಮಿಕ ಶಾಲೆಗಳ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡುತ್ತಾ, ಓದಿನ ಜೊತೆಗೆ ಕ್ರೀಡೆಗೂ ಹೆಚ್ಚು ಒತ್ತು ಕೊಟ್ಟಾಗ ಕ್ರೀಡೆ ಬೆಳೆಯಲು ಸಾಧ್ಯವಾಗುತ್ತದೆ.
ಕ್ರೀಡೆಯಲ್ಲಿ ಕ್ರೀಡಾ ಮನೋಭಾವದಿಂದ ಭಾಗವಹಿಸಿ, ಸೋಲು – ಗೆಲುವನ್ನು ಸಮಾನವಾಗಿ ಸ್ವೀಕರಿಸಿ,ನಿರಂತರ ಅಭ್ಯಾಸದಿಂದ ಕ್ರೀಡಾಕೂಟದಲ್ಲಿ ಉತ್ತಮ ಸಾಧನೆ ಮಾಡಲು ಸಾಧ್ಯವಾಗುತ್ತದೆ ಎಂದು ಕ್ರೀಡಾಪಟುಗಳಿಗೆ ಕರೆ ನೀಡಿದರು.
ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಮಂಜುನಾಥ್ ಎಸ್. ಆರ್. ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು,ಮನಸ್ಸು ಮತ್ತು ದೇಹದ ಬೆಳವಣಿಗೆಯು ಸಮಾನವಾಗಿ ಬೆಳೆಯಲು ಕ್ರೀಡೆ ಸಹಕಾರಿ ಎಂಬುದು ನಮಗೆಲ್ಲರಿಗೂ ತಿಳಿದಿದೆ.
ಆಟಗಳು ಮತ್ತು ಕ್ರೀಡೆಗಳು ಶಿಕ್ಷಣದ ಅವಿಭಾಜ್ಯ ಅಂಗವಾಗಿದೆ, ಅದಕ್ಕಾಗಿಯೇ ದೈಹಿಕ ತರಬೇತಿ, ವ್ಯಾಯಾಮ ಮತ್ತು ಆಟಗಳಿಲ್ಲದೆ
– ಶಿಕ್ಷಣವು ಅಪೂರ್ಣವಾಗಿರುತ್ತದೆ. ಅಲ್ಲದೆ, ಶಿಕ್ಷಣದ ಜೊತೆಗೆ, ಆಟಗಳು ಸಹ ನಮ್ಮೆಲ್ಲರನ್ನೂ ಎದ್ದು ನಿಲ್ಲಲು ಮತ್ತು ಜೀವನದ ಎಲ್ಲಾ ಕಠಿಣ ಸವಾಲುಗಳನ್ನು ಎದುರಿಸಲು ಸಿದ್ಧಗೊಳಿಸುತ್ತವೆ. ಆಟಗಳನ್ನು ಆಡುವಾಗ, ವಿದ್ಯಾರ್ಥಿಗಳು ಆಮ್ಲಜನಕದ ಉತ್ತಮ ಸೇವನೆಯನ್ನು ತೆಗೆದುಕೊಳ್ಳುತ್ತಾರೆ, ಅವರ ರಕ್ತ ಪರಿಚಲನೆ ಹೆಚ್ಚಾಗುತ್ತದೆ ಎಂದರು.
ಇದೇ ಸಂದರ್ಭದಲ್ಲಿ ಜಿಲ್ಲಾ ದೈಹಿಕ ಶಿಕ್ಷಣ ಅಧಿಕಾರಿಗಳಾದ ಪ್ರಕಾಶ್ ಎಂ. ಕ್ರೀಡಾಕೂಟದ ಬಗ್ಗೆ ಪ್ರಾಸ್ತಾವಿಕ ನುಡಿಗಳನ್ನು ಮಾತನಾಡಿದರು.
ಜಿಲ್ಲಾ ಪ್ರಾಥಮಿಕ ಶಾಲಾ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷ ರವಿಕುಮಾರ್ ಡಿ.ಪಿ. ಮಾತನಾಡಿ,
ಕ್ರೀಡಾಪಟುಗಳಲ್ಲಿ ಗೆದ್ದೇ ಗೆಲ್ಲುತ್ತೇವೆ ಎಂಬ ಸಂಕಲ್ಪ ಇರಬೇಕು. ಸತತ ಪ್ರಯತ್ನದಿಂದ ಜೀವನವನ್ನು ಹಾಗೂ ಕ್ರೀಡೆಗಳಲ್ಲಿ ಎಂತಹ ಸಾಧನೆಯನ್ನಾದರೂ ಮಾಡಬಹುದು ಎಂದರು.
ಕಾರ್ಯಕ್ರಮದಲ್ಲಿ ಶಿವಮೊಗ್ಗ ಜಿಲ್ಲೆಯ ಎಲ್ಲಾ ತಾಲೂಕಿನ ದೈಹಿಕ ಶಿಕ್ಷಣ ಅಧಿಕಾರಿಗಳು, ಜಿಲ್ಲೆಯ ಎಲ್ಲಾ ತಾಲೂಕಿನ ಅಧ್ಯಕ್ಷರು ಮತ್ತು ಕಾರ್ಯದರ್ಶಿಗಳು ಇನ್ನೂ ಮುಂತಾದವರು ಉಪಸ್ಥಿತರಿದ್ದರು.
ಶಿವಮೊಗ್ಗ ತಾಲೂಕಿನ ದೈಹಿಕ ಶಿಕ್ಷಣ ಅಧಿಕಾರಿಗಳಾದ ಬಿ.ಹೆಚ್. ನಿರಂಜನ್ ಮೂರ್ತಿ ಸ್ವಾಗತಿ, ಕಾರ್ಯಕ್ರಮ ನಿರೂಪಿಸಿದರು. ಸಂಘದ ಕಾರ್ಯದರ್ಶಿ ರತನ್ ಸಿಂಗ್ ವಂದಿಸಿದರು.