ಸಾಗರ : ಮಕ್ಕಳ ಸರ್ವಾಂಗೀಣ ಅಭಿವೃದ್ದಿಗೆ ಪಾಠದ ಜೊತೆಗೆ ಆಟವೂ ಮುಖ್ಯ. ದೈಹಿಕ ಮತ್ತು ಮಾನಸಿಕ ದೃಢತೆ ಶಿಕ್ಷಣಕ್ಕೆ ಪೂರಕ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಪರಶುರಾಮಪ್ಪ ಈ. ತಿಳಿಸಿದರು.
ಇಲ್ಲಿನ ನೆಹರೂ ಮೈದಾನದಲ್ಲಿ ಮಂಗಳವಾರ ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ವಿನೋಬಾ ನಗರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ವತಿಯಿಂದ ಏರ್ಪಡಿಸಿದದ ೧೪ ವರ್ಷದೊಳಗಿನ ದಕ್ಷಿಣ ವಲಯ ಮಟ್ಟದ ಕ್ರೀಡಾಕೂಟವನ್ನು ಗುಂಡು ಎಸೆಯುವ ಮೂಲಕ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಬದಲಾದ ದಿನಮಾನಗಳಲ್ಲಿ ಮಕ್ಕಳ ಮೇಲೆ ಅತೀವ ಒತ್ತಡ ಹೇರಲಾಗುತ್ತಿದೆ. ಅಂಕದ ಹಿಂದೆ ಬೀಳುವುದು ಸರಿ. ಆದರೆ ಅಂಕ ಗಳಿಸುವ ಉದ್ದೇಶವೇ ಅಂತಿಮವಲ್ಲ. ಅಂಕದ ಜೊತೆಗೆ ಕ್ರೀಡೆ, ಸಾಂಸ್ಕೃತಿಕ, ಸಾಹಿತ್ಯಕ ಚಟುವಟಿಕೆಗಳಲ್ಲಿ ಮಕ್ಕಳು ತೊಡಗಿ ಕೊಂಡಾಗ ಹೆಚ್ಚು
ಕ್ರಿಯಾಶೀಲವಾಗಿ ಇರುತ್ತಾರೆ. ಯಶಸ್ವಿ ವಿದ್ಯಾರ್ಥಿಯಾಗಲು ಆಟ ಮತ್ತು ಪಾಠ ಎರಡೂ ಅಗತ್ಯ. ದಕ್ಷಿಣ ವಲಯ ಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸುವ ಮಕ್ಕಳು ಜಿಲ್ಲೆ, ರಾಜ್ಯ ಮಟ್ಟದಲ್ಲೂ ಉತ್ತಮ ಸಾಧನೆ ಮಾಡುವತ್ತ ಗಮನ ಹರಿಸಬೇಕು ಎಂದು ಹೇಳಿದರು.
ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಮಾಲತೇಶಪ್ಪ ಮಾತನಾಡಿ, ಕ್ರೀಡೆಯಲ್ಲಿ ಸೋಲುಗೆಲುವು ಸಾಮಾನ್ಯ. ಸ್ಪರ್ಧಾ ಸ್ಪೂರ್ತಿಯಿಂದ ಮಕ್ಕಳು ಪಾಲ್ಗೊಳ್ಳಬೇಕು. ಸೋತವರು ಮುಂದಿನ ದಿನಗಳಲ್ಲಿ ಗೆಲುವಿಗಾಗಿ ಅವಿರತ ಪ್ರಯತ್ನ ಮಾಡಬೇಕು.
ಕ್ರೀಡೆ ಸ್ಪರ್ಧಾತ್ಮಕ ಮನೋಭಾವ ಬೆಳೆಸುವ ಜೊತೆಗೆ ಸಾಮರಸ್ಯವನ್ನು ತರುತ್ತದೆ. ವಿನೋಬಾ ನಗರದ ಶರಣಪ್ಪ ಅವರ ನೇತೃತ್ವದಲ್ಲಿ ದಕ್ಷಿಣ ವಲಯ ಮಟ್ಟದ ಕ್ರೀಡಾಕೂಟ ಅತ್ಯಂತ ಅರ್ಥಪೂರ್ಣವಾಗಿ ಆಯೋಜಿಸಿದ್ದು ಅನುಕರಣೀಯವಾಗಿದೆ ಎಂದು ತಿಳಿಸಿದರು.