ಶಿವಮೊಗ್ಗ : ಆಗಸ್ಟ್ ೦೭ : : ಆಡಳಿತಾರೂಢ ಸರ್ಕಾರವು ಚುನಾವಣಾ ಪೂರ್ವದಲ್ಲಿ ತನ್ನ ಪ್ರಣಾಳಿಕೆಯಲ್ಲಿ ಘೋಷಿಸಿದಂತೆ ಸರ್ಕಾರಿ ನೌಕರರ ಏಳನೇ ವೇತನ ಆಯೋಗದ ಅನುಷ್ಠಾನ ಮಾತ್ರವಲ್ಲದೇ ಅನ್ನಭಾಗ್ಯ, ಶಕ್ತಿ, ಗೃಹಜ್ಯೋತಿ, ಗೃಹಲಕ್ಷ್ಮೀ ಮತ್ತು ಯುವನಿಧಿ ಸೇರಿದಂತೆ ಒಟ್ಟು
ಐದು ಜನಪ್ರಿಯ ಗ್ಯಾರಂಟಿ ಯೋಜನೆಗಳನ್ನು ಕಾಲಮಿತಿಯೊಳಗಾಗಿ ಅನುಷ್ಠಾನಗೊಳಿಸಿ ನುಡಿದಂತೆ ನಡೆದು, ರಾಜ್ಯದ ಜನಸಾಮಾನ್ಯರ ಹಿತಕಾಯುವಲ್ಲಿ ಸಕ್ರಿಯವಾಗಿದೆ ಎಂದು ರಾಜ್ಯ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಮಧು ಎಸ್.ಬಂಗಾರಪ್ಪ ಅವರು ಹೇಳಿದರು.
ಅವರು ಇಂದು ಜಿಲ್ಲಾ ಪಂಚಾಯಿತಿ ಕಟ್ಟಡದಲ್ಲಿ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಜಿಲ್ಲಾ ಘಟಕವನ್ನು ಉದ್ಘಾಟಿಸುವ ಮುನ್ನ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.
ರಾಜ್ಯದ ಅತಿ ಹೆಚ್ಚಿನ ಜನರು ಈ ಯೋಜನೆಗಳ ಲಾಭ ಪಡೆದು ನೆಮ್ಮದಿಯ ಜೀವನ ನಡೆಸುತ್ತಿರುವುದು ಎಲ್ಲರಿಗೂ ಹರ್ಷದ ಸಂಗತಿಯಾಗಿದೆ ಎಂದ ಅವರು, ಇಂತಹ ಜನಪರ ಯೋಜನೆಗಳನ್ನು ವ್ಯವಸ್ಥಿತವಾಗಿ ಅನುಷ್ಟಾನಗೊಳಿಸಿದ ದೇಶದ ಮೊದಲ ರಾಜ್ಯ ಇದಾಗಿದೆ
ಎಂದ ಅವರು, ಅನೇಕ ಸಮಸ್ಯೆ-ಸವಾಲುಗಳ ನಡುವೆಯೂ ಸರ್ಕಾರ ಜನರ ಅಹವಾಲುಗಳಿಗೆ ಕಿವಿಯಾಗಿದೆ ಮಾತ್ರವಲ್ಲದೇ ಜನಸಾಮಾನ್ಯರ ನೆರವಿಗೆ ಧಾವಿಸುತ್ತಿದೆ, ಅಭಿವೃದ್ಧಿ ಕಾರ್ಯಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸುತ್ತಿದೆ ಎಂದರು.
ರಾಜ್ಯದ ಖಾಸಗಿ ಶಾಲೆಗಳ ಬೇಕು-ಬೇಡಗಳನ್ನು ಸರ್ಕಾರದ ವತಿಯಿಂದ ಚರ್ಚಿಸಲು ನಾಳೆ ಬೆಂಗಳೂರಿನಲ್ಲಿ ಸಭೆ ಆಯೋಜಿಸಲಾಗಿದೆ. ಈಗಾಗಲೇ ಅವರು ನೀಡಿರುವ ಮನವಿಯನ್ನು ಗಮನಿಸಲಾಗಿದ್ದು, ಅವರ ಬೇಡಿಕೆಯನ್ನು ಮಾನ್ಯ ಮುಖ್ಯಮಂತ್ರಿಗಳು ಸೇರಿದಂತೆ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿ, ನಿರ್ಣಯ ಕೈಗೊಳ್ಳಲಾಗುವುದು ಎಂದರು.
ಶಿವಮೊಗ್ಗದ ವಿಮಾನ ನಿಲ್ದಾಣವನ್ನು ರಾಜ್ಯ ಸರ್ಕಾರದಿಂದ ನಿರ್ವಹಿಸಲಾಗುತ್ತಿದ್ದು, ಅಲ್ಲಿನ ಇನ್ನಷ್ಟು ರಚನಾತ್ಮಕ ಕಾರ್ಯಕ್ರಮಗಳು, ಯೋಜನೆಗಳ ಅನುಷ್ಠಾನಕ್ಕಾಗಿ ಸರ್ಕಾರ ಬದ್ದವಾಗಿದೆ ಎಂದ ಅವರು, ರಾಜ್ಯದ ಐದು ಗ್ಯಾರಂಟಿ ಯೋಜನೆಗಳ ಅನುಷ್ಠಾನಕ್ಕಾಗಿ ರಾಜ್ಯ ಸರ್ಕಾರವು ಪ್ರತಿ ಗ್ರಾಮ ಪಂಚಾಯಿತಿಗಳಿಗೆ ವಾರ್ಷಿಕವಾಗಿ ೯ಕೋಟಿ ಅನುದಾನ ವ್ಯಯ ಮಾಡಲಾಗುತ್ತಿದೆ ಎಂದರು.
ಶರಾವತಿ ಸಂತ್ರಸ್ಥರ ನೆರವಿಗೆ ಸರ್ಕಾರ ಬದ್ಧವಾಗಿದ್ದು, ಸಂತ್ರಸ್ಥರ ಹಿತಕಾಯಲು ದೇಶದ ಸರ್ವೋಚ್ಛ ನ್ಯಾಯಾಲಯದಲ್ಲಿ ಅಗತ್ಯ ಮಾಹಿತಿಯೊಂದಿಗೆ ಮೊಕದ್ದಮೆಯನ್ನು ಹೂಡಿ, ರಾಜ್ಯದ ಪರವಾಗಿ ಸಮರ್ಥವಾಗಿ ವಾದ ಮಂಡಿಸಲು ಹಿರಿಯ ವಕೀಲರೊಬ್ಬರನ್ನು ನೇಮಿಸಲು ಸರ್ಕಾರ ಕ್ರಮ ಕೈಗೊಂಡಿದೆ ಎಂದರು.
ನಂತರ ಸಚಿವರು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಜಿಲ್ಲಾ ಘಟಕವನ್ನು ಉದ್ಘಾಟಿಸಿ, ಗ್ಯಾರಂಟಿ ಯೋಜನೆಗಳ ಪ್ರಾಧಿಕಾರದ ಜಿಲ್ಲಾ ಅಧ್ಯಕ್ಷ ಚಂದ್ರಭೂಪಾಲ್ ಅವರಿಗೆ ಪುಷ್ಪಗುಚ್ಚ ನೀಡಿ ಅಭಿನಂದಿಸಿದರು.
ಈ ಸಂದರ್ಭದಲ್ಲಿ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷ ಸೂರಜ್ ಎಂ.ಎನ್.ಹೆಗಡೆ, ವಿಧಾನ ಪರಿಷತ್ ಸದಸ್ಯೆ ಶ್ರೀಮತಿ ಬಲ್ಕಿಷ್‌ಬಾನು, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎನ್.ಹೇಮಂತ್ ಮತ್ತಿತರರು ಉಪಸ್ಥಿತರಿದ್ದರು.