ಶಿವಮೊಗ್ಗ: ಮೈಸೂರು ಪಾದಯಾತ್ರೆ ಬಿಜೆಪಿ, ಜೆಡಿಎಸ್ ನಾಯಕರ ಕರ್ಮಕಾಂಡಗಳ ಬಯಲಿಗೆ ಎಳೆಯುವ ದಾರಿಯಾಗಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಹೇಳಿದರು.
ಅವರು ಇಂದು ಪತ್ರಿಕಾ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ನಂಬರ್ ಒನ್ ಭ್ರಷ್ಟಾಚಾರಿಯಾದ ವಿಜಯೇಂದ್ರ ಮತ್ತು ಆತನ ಭ್ರಷ್ಟಾಚಾರದ ಗ್ಯಾಂಗ್ ಸರ್ಕಾರವನ್ನು ಅಸ್ಥಿರಗೊಳಿಸುವ ಹುನ್ನಾರ ನಡೆಸಿದೆ. ಇದು ಅವರಿಗೆ ಶಾಪವಾಗಿ ಪರಿಣಮಿಸಲಿದ್ದು, ತಿರುಗುಬಾಣವಾಗಲಿದೆ. ಮುಡಾ ಹಗರಣದಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಪಾತ್ರ ಇಲ್ಲದಿದ್ದರೂ ಕೂಡ ತನಿಖೆಗೆ ಆದೇಶ ನೀಡಿದ್ದರೂ ಕೂಡ ಬಿಜೆಪಿ ಇದನ್ನು ಸೃಷ್ಟಿಸಿ ಗೊಂದಲ ಹುಟ್ಟಿಸುತ್ತಿದೆ ಎಂದು ಆರೋಪಿಸಿದರು.
ಬಿ.ವೈ. ವಿಜಯೇಂದ್ರ ಒಬ್ಬ ಭಾರಿ ಭ್ರಷ್ಟಾಚಾರದ ಮನುಷ್ಯ. ಈತನ ಮೇಲೆ ಅನೇಕ ಕೇಸ್ ಗಳು ಇನ್ನೂ ಜೀವಂತವಾಗಿವೆ. ಚೋಟಾ ಸಹಿ ಮಾಡಿ ಅವರ ತಂದೆಯವರನ್ನೇ ಜೈಲಿಗೆ ಕಳಿಸಿದ ಮನುಷ್ಯ. ಈಗ ಸಿದ್ಧರಾಮಯ್ಯ ಅವರ ವಿರುದ್ಧ ಮಾತನಾಡುತ್ತಿದ್ದಾನೆ. ಈತನ ವಿರುದ್ಧ ಅವರದೇ ಪಕ್ಷದ ಯತ್ನಾಳ್ ಅವರು ಉಗಿಯುತ್ತಿದ್ದರೂ ಕೂಡ ಅವರಿಗೆ ಉತ್ತರ ಕೊಡದೇ ಡಿ.ಕೆ. ಶಿವಕುಮಾರ್ ಹಾಗೂ ಮುಖ್ಯಮಂತ್ರಿಗಳ ಬಗ್ಗೆ ಮಾತನಾಡುತ್ತಾನೆ. ಈತನಿಗೆ ಯಾವ ಯೋಗ್ಯತೆ ಇದೆ. ಈತನ ಎಲ್ಲಾ ಭ್ರಷ್ಟಾಚಾರಗಳನ್ನು ಬಯಲಿಗೆ ಎಳೆದೇ ಎಳೆಯುತ್ತೇವೆ. ಈತ ಕೊನೆಗೆ ಭಸ್ಮಾಸುರನಾಗುತ್ತಾನೆ. ಇಷ್ಟರಲ್ಲಿಯೇ ಈತನ ಪಿಕ್ಚರ್ ಬಿಡಿಸುತ್ತೇವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಿಜೆಪಿ ಇದ್ದಾಗಲೇ ಮುಡಾ ಸೈಟ್ ನೀಡಿದ್ದು, ಆಗ ಇದೇ ವಿಜಯೇಂದ್ರನೇ ಇದನ್ನು ನಿರ್ವಹಣೆ ಮಾಡಿದ್ದು. ಎಲ್ಲಾ ಪಕ್ಷದವರು ನಿವೇಶನವನ್ನು ತೆಗೆದುಕೊಂಡಿದ್ದಾರೆ. ಇದಾದ ನಂತರ ಅನೇಕ ಮುಖ್ಯಮಂತ್ರಿಗಳು ಈ ರಾಜ್ಯಕ್ಕೆ ಬಂದು ಹೋಗಿದ್ದಾರೆ. ಏಕೆ ಆಗ ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ಕೊಡಲಿಲ್ಲ. ಈಗ ಯಾಕೆ ಕೊಟ್ಟಿದ್ದಾರೆ. ಅವರು ಕೊಟ್ಟಿರುವ ನೋಟಿಸ್ ಅನ್ನು ಹಿಂದಕ್ಕೆ ಪಡೆಯುವಂತೆ ಈಗಾಗಲೇ ರಾಜ್ಯಪಾಲರಿಗೆ ಮನವಿ ಮಾಡಿದ್ದೇವೆ. ಇದನ್ನು ಎಲ್ಲರೂ ಒಟ್ಟಾಗಿ ಎದುರಿಸುತ್ತೇವೆ ಎಂದರು.
ಶಿವಮೊಗ್ಗದ ಸೂಡಾ ಹಗರಣಕ್ಕೆ ಸಂಬAಧಿಸಿದAತೆ ಮತ್ತೆ ತನಿಖೆಗೆ ಒತ್ತಾಯಿಸುತ್ತೇವೆ. ಇಂತಹ ಹಗರಣಗಳನ್ನು ಹೊರಗೆ ತರಬೇಕು. ಬಿ.ಎಸ್. ಯಡಿಯೂರಪ್ಪನವರು ಇನ್ನೇನು ಮುಖ್ಯಮಂತ್ರಿ ಸ್ಥಾನದಿಂದ ಹೊರಬರಬೇಕು ಎಂದಾಗ ಈ ಕೇಸ್ ವಾಪಸ್ ತೆಗೆದುಕೊಂಡಿದ್ದರು. ಈಗ ಇದನ್ನು ನಾವು ಬಿಡುವುದಿಲ್ಲ. ಇದರ ಜೊತೆಗೆ ವಿಮಾನ ನಿಲ್ದಾಣ, ಸ್ಮಾರ್ಟ್ ಸಿಟಿ ಸೇರಿದಂತೆ ನಾವು ಈ ಹಿಂದೆ ಹೇಳಿದಂತೆ ಎಲ್ಲಾ ಹಗರಣಗಳನ್ನು ಹೊರಗೆಳೆಯುತ್ತೇವ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಆರ್.ಎಂ.. ಮಂಜುನಾಥಗೌಡ, ಆಯನೂರು ಮಂಜುನಾಥ್, ಆರ್. ಪ್ರಸನ್ನಕುಮಾರ್, ಎನ್. ರಮೇಶ್, ಕಲೀಂ ಪಾಷಾ, ಚಂದ್ರಭೂಪಾಲ್, ರಮೇಶ್ ಹೆಗ್ಡೆ, ಎಸ್.ಕೆ. ಮರಿಯಪ್ಪ, ಶರತ್ ಮರಿಯಪ್ಪ, ಜಿ.ಡಿ. ಮಂಜುನಾಥ್, ಇಕ್ಕೇರಿ ರಮೇಶ್, ಶಿವಾನಂದ್, ಹಾಲಪ್ಪ, ಯಮುನಾ ರಂಗೇಗೌಡ, ವಿಜಯ್ ಕುಮಾರ್, ಶಿವಪ್ಪ ಮುಂತಾದವರಿದ್ದರು.