ಶಿವಮೊಗ್ಗ,ಜೂ.೧೧:
ಶಿಕ್ಷಣದ ಗುಣಮಟ್ಟ ಸುಧಾರಿಸಬೇಕಿದೆ. ಭಾಷೆ ಉಳಿಯಬೇಕು, ಸಾಹಿತ್ಯ ಸಮಾಜವನ್ನು ಸುಧಾರಿಸಬೇಕು. ಆದರೆ, ಇದಕ್ಕೆ ಕಲಿಕೆಯ ಆಸಕ್ತಿ, ಗುಣಮಟ್ಟ ಹೆಚ್ಚಾಗಬೇಕು ಎಂದು ಕು.ಕೆ.ಪಿ. ಮಾನ್ವಿ ಕರೂರು ಹೇಳಿದ್ದಾರೆ.
ಅವರು ಇಂದು ನಗರದ ಶ್ರೀ ಆದಿ ಚುಂಚನಗಿರಿ ಸಭಾಭವನದಲ್ಲಿ ಶ್ರೀ ಆದಿ ಚುಂಚನಗಿರಿ ಶಿಕ್ಷಣ ಟ್ರಸ್ಟ್, ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ, ಜಿಲ್ಲಾ ಸಮಿತಿ ಶಿವಮೊಗ್ಗ ಇವರ ಸಂಯುಕ್ತಾಶ್ರಯದಲ್ಲಿ ರಾಜ್ಯ ಮಟ್ಟದ ೧೯ನೇಯ ಮಕ್ಕಳ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಮಾತನಾಡಿ,
ಆತ್ಮೀಯರೇ, ಮಲೆನಾಡಿನ ಹೆಬ್ಬಾಗಿಲು, ತುಂಗಭದ್ರೆಯರ ಜಲಧಿಯ ಗೂಡು, ಸಿಹಿಮೊಗೆಯ ಸೊಗವ ಹೀರಿದ ನೆಲ, ಕದಂ ಬರು, ಗಂಗರು, ಚಾಲುಕ್ಯರು, ರಾಷ್ಟ್ರಕೂಟರು, ಹೊಯ್ಸಳರಿಂದ ಕೆಳದಿ ಅರಸರವರೆಗೆ ಆಳ್ವಿಕೆ ನಡೆಸಿದ ನಗರವಾದ ಶಿವಮೊಗ್ಗದಲ್ಲಿ ಇಂದು ೧೯ನೇ ರಾಜ್ಯ ಮಕ್ಕಳ ಸಾಹಿತ್ಯ ಸಮ್ಮೇಳನ ನಡೆಯುತ್ತಿದೆ.


ಸಾಹಿತ್ಯ ಮತ್ತು ಇತಿಹಾಸ ಒಂದು ನಾಣ್ಯದ ಎರಡು ಮುಖಗಳಿದ್ದಂತೆ ಆದರೆ ನಾವು ಓದಿದ ಇತಿಹಾಸವೇ ಬೇರೆ. ನಡೆದದ್ದೇ ಬೇರೆ ಎಂದು ನನಗನ್ನಿಸುತ್ತದೆ ನಮ್ಮ ಕರಾವಹಿಹಿನ್ನೀರಿನ ಕರೂರು ಹೋಬಳಿಯನ್ನು ೧೫ನೇ ಶತಮಾನದಲ್ಲಿ ಆಳಿದ ಹೆಸರಾಂತ ರಾಣಿ ಚೆನ್ನಭೈರಾದೇವಿ. ಸುಮಾರು ೫೪ ವರ್ಷಗಳ ಕಾಲ ಪೋರ್ಚುಗೀಸರ ಹಾಗೂ ಕೆಳದಿ ಅರಸರ ಜೊತೆ ಹೋರಾಡಿ ರಾಜ್ಯಭಾರ ಮಾಡಿದ್ದಾಳೆ.
ಈ ಸಮ್ಮೇಳನದ ಮೂಲಕ ಸರ್ಕಾರವನ್ನು ಒತ್ತಾಯಿಸುತ್ತೇನೆ, ಮಾನ್ಯ ಶಿಕ್ಷಣಮಂತ್ರಿಗಳು ನಮ್ಮ ಜಿಲ್ಲೆಯವರೇ ಆಗಿದ್ದಾರೆ. ಮಾನ್ಯ ಮಧು ಬಂಗಾರಪ್ಪನವರೇ, ನನ್ನದೊಂದು ಕೋರಿಕೆ ಇದೆ, ರಾಣಿ ಚೆನ್ನಭೈರಾದೇವಿಯ ಹಾಗೂ ರಾಣಿ ಚಂಪಕಾಳ ಬಗ್ಗೆ ಪಠ್ಯ ಹೊರಬರಲಿ. ನಾವು ಓದುವಂತಾಗಲಿ ಎಂದರು.


ಪಠ್ಯ ರಚನೆಯಲ್ಲಿ ಜಾತಿ ಧರ್ಮಗಳನ್ನು ತಂದು ವಿಷ ಬೀಜವನ್ನು ಬಿತ್ತಿ ನಮ್ಮೊಳಗೆ ಆಕಂಕವನ್ನು ಸೃಷ್ಟಿಸುವ ಮನಸ್ಸುಗಳು ಹೆಚ್ಚಾಗಿವ ಈ ಸಮ್ಮೇಳನದ ಮೂಲಕ ನಾನು ತಿಳಿಸಲು ಇಚ್ಚಿಸುತ್ತೇನೆ. ಶಾಲಾ ಪಠ್ಯದ ವಿಷಯದಲ್ಲಿ ರಾಜಕೀಯ ಸಲ್ಲದು ಪಠ್ಯವನ್ನು ಪಕ್ಷ ಆದಾರಿತವಾಗಿ ಬದಲಾಯಿಸುವುದನ್ನು ತಕ್ಷಣ ನಿಲ್ಲಿಸಬೇಕು. ಪಕ್ಷದ ಹೊರತಾದ ಒಂದು ಸ್ವತಂತ್ರ ಸಮಿತಿ ಅಥವಾ ಆಯೋಗ ವನ್ನು ರಚಿಸುವಂತಾಗಬೇಕು.
ಪ್ರತಿ ಶಾಲೆಯ ಹುದ್ದೆಯ ನೇಮಕಾತಿ ಮಾಡುವಾಗ ಕನಿಷ್ಟ ಇಬ್ಬರು ಶಿಕ್ಷಕಿಯ ನ್ನಾದರೂ ಪ್ರತಿ ಶಾಲೆಯಲ್ಲಿ ಇರುವ ಹಾಗೆ ಮಾಡಿ.ಇದು ಸಮಾನತೆಯ ಹಾದಿಯೂ ಕೂಡ ಹೌದು.
ಏಕರೂಪದ ಶಿಕ್ಷಣ ವ್ಯವಸ್ಥೆ ಜಾರಿ ಯಾಗಲಿ. ಕನ್ನಡ ಕನ್ನಡ ಎಂದು ಇಂಗ್ಲೀಷನ್ನು ಅಲ್ಲಗಳೆಯುವುದು ಸರಿಯಲ್ಲ. ನಮಗೆ ಬದುಕಿನ ಪಾಠ ಕಲಿಸುವ ಗುರುಗಳನ್ನು ತಂದುಕೊಡಿ ಎಂದರು.
ಈ ಹಿಂದೆ ನಡೆದ ೧೮ ಸಮ್ಮೇಳನಗಳ ಯಾವ ಒತ್ತಾಯಗಳನ್ನೂ ಸರ್ಕಾರ ಈಡೇರಿಸಲೇ ಇಲ್ಲ. ಮಕ್ಕಳ ಸಾಹಿತ್ಯ ಸಮ್ಮೇಳನ ಹಾಗೂ ಮಕ್ಕಳ ಗ್ರಾಮಸಭೆಯ ನಿರ್ಣಯಗಳಿಗೆ ಸರ್ಕಾರ ಹೆಚ್ಚು ಒತ್ತುಕೊಡಲಿ ಎಂದು ಈ ಸಮ್ಮೇಳನದ ಮೂಲಕ ಆಗ್ರಹಿಸುತ್ತೇನೆ.


ಸಮ್ಮೇಳನ ಉದ್ಘಾಟಿಸಿ ಮಾತನಾಡಿದ, ಕು.ಪವಿತ್ರ ಎನ್. ದೇವಾಡಿಗ ಕತ್ತಲೆಯಲ್ಲಿ ದೀಪ ಬೆಳಕು ಕೊಡುವ ಹಾಗೆ, ಸಾಹಿತ್ಯ ನಮ್ಮ ಜೀವನದ ಬೆಳಕಾಗಿದೆ. ಸಾಹಿತ್ಯದಿಂದ ಮನಸ್ಸಿಗೆ ಆನಂದ, ನೆಮ್ಮದಿ ಸಿಗುತ್ತದೆ. ಸಾಹಿತ್ಯ ಯಾರ ಸೊತ್ತು ಆಗಿದೆಯೋ ಅವರು ಸುಸಂಸ್ಕೃತರಾಗುತ್ತಾರೆ. ಸಾಹಿತ್ಯ ಯಾವತ್ತೂ ಚೈತನ್ಯದಾಯಕವಾಗಿದೆ. ಒಳ್ಳೆ ಪುಸ್ತಕ ಓದಿದಾಗ ಮಾತ್ರ ಒಳ್ಳೆಯ ಬರಹಗಾರರಾಗಲು ಸಾಧ್ಯ. ಮೊಬೈಲ್ ಬಿಟ್ಟು ಪುಸ್ತಕ ಓದಿ, ಪುಸ್ತಕದಲ್ಲಿ ಸಾಧನೆಯ ಪರಿಚಯ, ಅನುಭವದ ಕಥನ, ಸಾಂಸ್ಕೃತಿಕ ಅನಾವರಣವಿರುತ್ತದೆ. ಸಾಹಿತ್ಯದ ಬಗ್ಗೆ ಎಲ್ಲರೂ ಒಲವು ಬೆಳೆಸಿಕೊಳ್ಳಿ ಎಂದರು.
ಆದಿಚುಂಚನಗಿರಿ ಶಾಖಾ ಮಠದ ಪ್ರಸನ್ನನಾಥ ಸ್ವಾಮೀಜಿ ಸಾನಿಧ್ಯವಹಿಸಿ ಮಾತನಾಡಿ, ಏಕೈಕ ಚಿಂತನೆಯಲ್ಲಿ ಕನ್ನಡ ಸಾಹಿತ್ಯ ಬೆಳೆಯಬೇಕು. ನಮ್ಮ ಮಾತೃ ಭಾಷೆ ಕನ್ನಡ, ನಮ್ಮ ರಾಜ್ಯ ಭಾಷೆ ಕನ್ನಡ, ಅದು ಬೆಳೆಯಲಿ. ಕನ್ನಡಕ್ಕೆ ಶಾಸ್ತ್ರೀಯ ಸ್ಥಾನ ಮಾನ ಸಿಕ್ಕಿದೆ. ಕೆಲವು ಭಾಷೆಗಳನ್ನು ನಾವು ಕಲಿಯಲೇಬೇಕು. ಆದರೆ ಕನ್ನಡದ ಸ್ವಾಭಿಮಾನಿಯಾಗಿ ಬಾಳಿ ಬದುಕಬೇಕು.
ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕುವೆಂಪು ಅವರು ಸಾಹಿತ್ಯದಲ್ಲಿ ದೊಡ್ಡವರು. ಎಂಥಹ ಕವಿಗಳನ್ನು ಪಡೆದಿರುವ ಜಿಲ್ಲೆ ಶಿವಮೊಗ್ಗ. ಅವರು ಅದ್ಭುತವಾದ ಕೊಡುಗೆಗಳನ್ನು ನೀಡಿದ್ದಾರೆ. ಮಹಾ ಗಣ್ಯ ವ್ಯಕ್ತಿಗಳು ಹುಟ್ಟಿರುವುದು ಶಿವಮೊಗ್ಗದಲ್ಲಿ ಎಂದರು.
ನಮ್ಮನ್ನು ನಾವು ಮೊದಲು ತಿಳಿದು ಕೊಳ್ಳಬೇಕು. ನಮ್ಮ ಹಿರಿಯರ ಚರಿತ್ರೆಯನ್ನು ಮರೆತು ಇಡೀ ವಿಶ್ವದ ಚರಿತ್ರೆಯನ್ನು ತಿಳಿದುಕೊಳ್ಳುತ್ತೇವೆ. ನಮ್ಮ ಪಠ್ಯ ಪುಸ್ತಕಗಳಲ್ಲಿ ಏನಿದೆ

ಎಂಬುದನ್ನು ತಿಳಿಯಬೇಕು. ಪಠ್ಯ ಪುಸ್ತಕ ರಾಜಕಾರಣಿಗಳಿಂದ ಮುಕ್ತವಾಗಬೇಕು. ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರಿಲ್ಲದ ಕೊರತೆ ಯಿಂದ ಖಾಸಗಿ ಶಾಲೆ ಮೊರೆ ಹೋಗುತ್ತಾರೆ.
ಹೆಣ್ಣು ಮಕ್ಕಳಿಗೆ ಶಿಕ್ಷಕಿಯರ ಅವಶ್ಯಕತೆ ಇದೆ. ಹಾಗಾಗಿ ಶಿಕ್ಷಕಿಯರ ಸಂಖ್ಯೆ ಹೆಚ್ಚಬೇಕು. ಪ್ರಸ್ತುತ ಅಂಕಗಳಿಸುವುದಕ್ಕಾಗಿ ಏನೆಲ್ಲಾ ಹೋರಾಟ ನಡೆಸುತ್ತಿದ್ದೇವೆ. ಶಿಕ್ಷಣಕ್ಕೆ ಹೆಚ್ಚಿನ ಹೊತ್ತು ನೀಡಿದರೆ ಮಾತ್ರ ಬೆಳೆಯಲು ಸಾಧ್ಯ. ಆ ದೃಷ್ಠಿಯಿಂದ ಮಕ್ಕಳಲ್ಲಿ ಸಾಹಿತ್ಯದ ಅಭಿರುಚಿ ಬರಬೇಕು ಎಂದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಿ.ಮಂಜುನಾಥ್ ತಮ್ಮ ಆಶಯ ನುಡಿಯಲ್ಲಿ, ಕಳೆದ ಬಾರಿ ಶಾಲಾ, ತಾಲೂಕು, ಜಿಲ್ಲಾ ಮಟ್ಟದಲ್ಲಿ ಸಾಹಿತ್ಯ ಸಮ್ಮೇಳನ ನಡೆಸಲಾಗಿದೆ. ನಾಡಿನಾದ್ಯಂತ ಸಾಹಿತ್ಯ ಕೃಷಿಯಲ್ಲಿ ತೊಡಗಿರುವವರು ಬಹಳಷ್ಟು ಜನರಿದ್ದಾರೆ. ಆದರೆ ಅವರಿಗೆ ಭಾಗವಹಿಸಲು ಅವಕಾಶ ಇಲ್ಲದಂತಾಗಿದೆ. ಇಂದು ಭಾಷೆಗೆ ಇಂಗ್ಲೀಷ್ ದೊಡ್ಡ ಸವಾಲಾಗಿದೆ. ನಮ್ಮ ಮಾತೃ ಭಾಷೆ ಕನ್ನಡ ಸೇರಿದಂತೆ ಭಾರತದ೯೦೦ಕ್ಕೂ ಹೆಚ್ಚು ಭಾಷೆಗಳು ಅಪಾಯದಲ್ಲಿವೆ. ಆಯಾಯ ಭಾಷೆಯಲ್ಲಿ ಜನಿಸಿದ ಮಕ್ಕಳು ಅದನ್ನು ಬಳಸಲು ಆಸಕ್ತಿ ತೋರುತ್ತಿಲ್ಲ. ನಮ್ಮ ಮಕ್ಕಳಿಗೆ ಕಥೆ, ಕಾದಂಬರಿ, ಕವನ ಇವುಗಳ ಬಗ್ಗೆ ಅರಿವು ಮೂಡಿಸುವುದು ಯಾವಾಗ. ಇದನ್ನು ಮೂಡಿಸಲು ಈ ರೀತಿಯ ಸಮ್ಮೇಳನ ಸಹಕಾರಿ. ಕನ್ನಡವನ್ನು ನಿಮ್ಮದಾಗಿಸಿಕೊಳ್ಳಿ. ಅಮ್ಮ ಕಲಿಸಿದ ಭಾಷೆ ಬಳಸದಿದ್ದರೆ ಅದು ಅಮ್ಮನಿಗೆ ಮಾಡಿದ ದ್ರೋಹ. ಕನ್ನಡದಲ್ಲಿ ಇರುವ ಪ್ರತಿಭೆಗಳನ್ನು ಪೋಷಿಸಬೇಕು. ಮಕ್ಕಳು ಸಾಹಿತ್ಯ ಕೃಷಿ ಮಾಡುತ್ತಿದ್ದರೆ ಅದಕ್ಕೆ ಪ್ರೋತ್ಸಾಹ ನೀಡುವ ಕೆಲಸ ಮಾಡಬೇಕು ಎಂದರು.
ಸಮ್ಮೇಳನದಲ್ಲಿ ಲೇಖಕರಾದ ಭವ್ಯ ಸುಧಾಕ

ರ್ ಜಗಮನಿ ಶಿವಮೊಗ್ಗ ಇವರ ಪುಟಾಣಿ ಸಂಚಯ ಪುಸ್ತಕ ಬಿಡುಗಡೆ ಮಾಡಲಾಯಿತು. ಮುಖ್ಯ ಅತಿಥಿಗಳಾಗಿ ಶೋಭಾ ವೆಂಕಟರಮಣ, ಅನನ್ಯ ಗಿರೀಶ್, ಡಿ. ಆರ್.ಶ್ರೀನಿವಾಸ್, ಡಿ.ವಿ. ಸತೀಶ್, ಹೇಮಾ ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ೪ ಗೋಷ್ಠಿಗಳು ನಡೆದವು. ಶಿವಮೊಗ್ಗ ಜಿಲ್ಲಾ ಸಮಿತಿಯ ಭಾರತಿ ರಾಮಕೃಷ್ಣ, ಟಿ.ಕೃಷ್ಣಪ್ಪ, ಯು.ಮಧುಸೂದನ್ ಐತಾಳ್, ಕೆ.ಎಸ್.ಮಂಜಪ್ಪ, ಬೈರಾಪುರ ಶಿವಪ್ಪಗೌಡ ಇನ್ನಿತರರಿದ್ದರು.

By admin

ನಿಮ್ಮದೊಂದು ಉತ್ತರ

You missed

error: Content is protected !!