
ಶಿವಮೊಗ್ಗ: ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಕ್ರೀಡಾ ಕೂಟ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳು ಏ. ೫ ಮತ್ತು ೬ ರಂದು ಎರಡು ದಿನಗಳ ಕಾಲ ನಗರದ ನೆಹರೂ ಕ್ರೀಡಾಂಗಣ, ಸರ್ಕಾರಿ ನೌಕರರ ಭವನ, ಅಂಬೇಡ್ಕರ್ ಭವನಗಳಲ್ಲಿ ನಡೆಯಲಿದೆ ಎಂದು ಸಂಘದ ಜಿಲ್ಲಾಧ್ಯಕ್ಷ ಆರ್. ಮೋಹನ್ ಕುಮಾರ್ ಹೇಳಿದರು.

ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಬಾರಿಯ ಕ್ರೀಡಾಕೂಟದಲ್ಲಿ ಸುಮಾರು ೨೭ಕ್ಕೂ ಹೆಚ್ಚು ಇವೆಂಟ್ಸ್ ಗಳನ್ನು ನಡೆಸಲಾಗುವುದು. ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲೂ ಕೂಡ ಪಾಶ್ಚಿಮಾತ್ಯ ಗಾಯನ, ನೃತ್ಯ ಸ್ಪರ್ಧೆಗಳು ಸೇರ್ಪಡೆಗೊಂಡಿದ್ದು, ನೌಕರರು ಇದರ ಸದುಪಯೋಗಪಡಿಸಿಕೊಳ್ಳಬೇಕು. ಮತ್ತು ಕ್ರೀಡಾ ಕೂಟದಲ್ಲಿ ಭಾಗವಹಿಸುವ ಜಿಲ್ಲೆಯ ಸರ್ಕಾರಿ ನೌಕರರಿಗೆ ಎರಡು ದಿನಗಳ ವಿಶೇಷ ಸಾಂದರ್ಭಿಕ ರಜಾ ಸೌಲಭ್ಯ ಕೂಡ ಇದೆ. ಹಾಗಾಗಿ ಸರ್ಕಾರಿ ನೌಕರರು ಹೆಚ್ಚಿನ ಸಂಖ್ಯೆಯಲ್ಲಿ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಭಾಗವಹಿಸಬೇಕು ಎಂದರು.

ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಲು ಇಚ್ಚಿಸುವ ರಾಜ್ಯ ಸರ್ಕಾರದ ಕಾಯಂ ನೌಕರರು ಏ. ೫ರ ಬೆಳಗ್ಗೆ ೯ ಗಂಟೆಯಿಂದ ನೆಹರೂ ಕ್ರೀಡಾಂಗಣದಲ್ಲಿ ನೋಂದಣಿ ಮಾಡಿಕೊಳ್ಳಬೇಕು. ಕ್ರೀಡಾ ಕೂಟವನ್ನು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಉದ್ಘಾಟಿಸುವರು.

ಸಂಸದ ಬಿ.ವೈ. ರಾಘವೇಂದ್ರ ಧ್ವಜಾರೋಹಣ ನೆರವೇರಿಸುವರು. ಶಾಸಕ ಎಸ್.ಎನ್. ಚನ್ನಬಸಪ್ಪ ಅಧ್ಯಕ್ಷತೆ ವಹಿಸುವರು. ಜಿಲ್ಲೆಯ ಶಾಸಕರು, ಜನಪ್ರತಿನಿಧಿಗಳು, ನಿಗಮ, ಮಂಡಳಿ, ಪ್ರಾಧಿಕಾರದ ಅಧ್ಯಕ್ಷರು, ಅಧಿಕಾರಿಗಳು, ಉಪಸ್ಥಿತರಿರುವರು ಎಂದರು.

ಸರ್ವೋತ್ತಮ ಸೇವಾ ಪ್ರಶಸ್ತಿಗೆ ಅರ್ಜಿ:
ಉತ್ತಮ ಸೇವೆ ಹಾಗೂ ಸಾಧನೆಗೈದ ಸರ್ಕಾರಿ ಅಧಿಕಾರಿಗಳು ಹಾಗೂ ನೌಕರರಿಗೆ ೨೦೨೪ ಮತ್ತು ೨೫ನೇ ಸಾಲಿನ ಎರಡು ವರ್ಷಗಳ ರಾಜ್ಯ ಹಾಗೂ ಜಿಲ್ಲಾ ಮಟ್ಟದ ಸರ್ವೋತ್ತಮ ಸೇವಾ ಪ್ರಶಸ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಏ. ೧೪ರೊಳಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಎರಡೂ ವರ್ಷಕ್ಕೂ ಹಾಗೂ ರಾಜ್ಯ ಮತ್ತು ಜಿಲ್ಲಾ ಮಟ್ಟದ ಪ್ರಶಸ್ತಿಗಳಿಗೆ ಪ್ರತ್ಯೇಕವಾಗಿ ಅರ್ಜಿ ಸಲ್ಲಿಸಬೇಕು ಎಂದರು.
ರಾಜ್ಯಾಧ್ಯಕ್ಷ ಸಿ.ಎಸ್. ಷಡಾಕ್ಷರಿ ಅವರ ಹೋರಾಟದ ಫಲವಾಗಿ ಡಿಫೈನ್ ಪಿಂಚಣಿ ಯೋಜೆನ ಮರು ಜಾರಿಗೊಳಿಸಿರುವ ರಾಜ್ಯಗಳಲ್ಲಿ ಅಧ್ಯಯನ ನಡೆಸಿ ವರದಿ ಸಲ್ಲಿಸುವಂತೆ ಈಗಾಗಲೇ ಮುಖ್ಯ ಕಾರ್ಯದರ್ಶಿ ಅವರ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಲಾಗಿದೆ. ವರದಿ ಬಂದ ನಂತರ ಎನ್ಪಿಎಸ್ ರದ್ದುಗೊಳಿಸಿ ಒಪಿಎಸ್ ಜಾರಿಗೊಳಿಸುವ ಬಗ್ಗೆ ಪ್ರಯತ್ನಿಸಲಾಗುವುದು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಪಾಪಣ್ಣ, ರಂಗನಾಥ್, ನರಸಿಂಹ ಮೂರ್ತಿ, ರವಿ, ದಿನೇಶ್, ಸುಮತಿ, ಸತೀಶ್, ಆಶೀರ್ ಇದ್ದರು.