ಶಿವಮೊಗ್ಗ,ಮೇ 23: ವಾರ್ಡ್ ನಂ. 28ರ ಆರ್ಎಂಎಲ್ ನಗರದಲ್ಲಿ ಮೊನ್ನೆ ಸುರಿದ ಮಳೆಗೆ ಹಲವಾರು ಮನೆಗಳಿಗೆ ನೀರು ನುಗ್ಗಿದ್ದು, ಅಲ್ಲಿನ ನಾಗರೀಕರು ಜೀವಿಸುವುದೇ ಕಷ್ಟವಾಗಿದ್ದು, ಕೂಡಲೇ ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಆಮ್ ಆದ್ಮಿ ಪಾರ್ಟಿ ಜಿಲ್ಲಾ ಶಾಖೆಯ ವತಿಯಿಂದ ಇಂದು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಸುಮಾರು 15 ವರ್ಷಗಳಿಂದ ಮಳೆಗಾಲದಲ್ಲಿ ಈ ಭಾಗದಲ್ಲಿ ಈ ಸಮಸ್ಯೆಯಿದೆ. ಇದಕ್ಕೆ ಮುಖ್ಯ ಕಾರಣ ಭಾರತ್ ಪೌಂಡ್ರಿಯ ಒಳಗೆ ಹಾದುಹೋಗಿರುವ ರಾಜ ಕಾಲುವೆಗೆ ಅಡ್ಡಲಾಗಿ ನಿರ್ಮಿಸಿರುವ ಗೇಟ್ನ್ನು ಶಾಶ್ವತವಾಗಿ ತೆರವುಗೊಳಿಸಿದರೆ ಈ ಸಮಸ್ಯೆ ಬಗೆಹರಿಯುತ್ತದೆ. ಇದರ ಬಗ್ಗೆ ಅನೇಕ ಬಾರಿ ದೂರು ನೀಡಲಾಗಿದೆ.
ಸಂಬಂದಪಟ್ಟ ಅಧಿಕಾರಿಗಳು ಸ್ಥಳ ಪರಿಶೀಲನೆ ಮಾಡಿದ್ದರು ಯಾವುದೇ ಕ್ರಮ ಕೈಗೊಂಡಿರುವುದಿಲ್ಲ. ಶೀಘ್ರದಲ್ಲೇ ಮುಂಗಾರು ಪ್ರಾರಂಭವಾಗಲಿದ್ದು, ಮತ್ತೆ ಇಲ್ಲಿನ ನಿವಾಸಿಗಳಿಗೆ ಮಳೆಯ ಹಾನಿ ಉಂಟಾಗಲಿದೆ. ಆದ್ದರಿಂದ
ಕೂಡಲೇ ಜಿಲ್ಲಾಡಳಿತ ಮತ್ತು ಮಹಾನಗರ ಪಾಲಿಕೆ ಅಧಿಕಾರಿಗಳ ಸಭೆ ಕರೆದು ಈ ಸಮಸ್ಯೆಯನ್ನು ಶಾಶ್ವತವಾಗಿ ಬಗೆಹರಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಈ ಸಂದರ್ಭದಲ್ಲಿ ಪ್ರಧಾನ ಕಾರ್ಯದರ್ಶಿ ನಜೀರ್ ಅಹಮ್ಮದ್, ಸೈಯ್ಯದ್ ಸಮ್ಮಿವುಲ್ಲಾ, ಅಗಾಜಾನ್ ಮತ್ತಿತರರು ಇದ್ದರು.