ಭವಿಷ್ಯದ ದೇಶಕ್ಕೆ ಯುವಜನತೆಯ ಮತದಾನವೇ ಮುಖ್ಯ ಕೊಡುಗೆ : ಸಿಇಓ ಸ್ನೇಹಲ್ ಸುಧಾಕರ್ ಲೋಖಂಡೆ
ಶಿವಮೊಗ್ಗ,ಏ.28 : ಮಾನಸ ಟ್ರಸ್ಟ್ ನ ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜಿನ ಎನ್ಎಸ್ಎಸ್ ಘಟಕ ಹಾಗೂ ಶಿವಮೊಗ್ಗ ಜಿಲ್ಲಾ ಪಂಚಾಯತ್, ಸ್ವೀಪ್ ಶಿವಮೊಗ್ಗ ವತಿಯಿಂದ ಮತದಾನ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮವನ್ನು ಕಾಲೇಜಿನ ದತ್ತು ಗ್ರಾಮವಾದ ಕೊನಗನವಳ್ಳಿ ತಾಂಡದಲ್ಲಿ ಉದ್ಘಾಟಿಸಲಾಯಿತು. ವಿದ್ಯಾರ್ಥಿಗಳು “ಮತದಾನ ಮಹಾದಾನ” ಎಂಬ ಬೀದಿ ನಾಟಕವನ್ನು ಮಾಡುವುದರೊಂದಿಗೆ ಪ್ರತಿ ಮನೆಗೂ ಭೇಟಿ ನೀಡಿ ಮತದಾನ ಮಾಡಲು ಪ್ರೇರೇಪಿಸಿದರು.
ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜಿನಲ್ಲಿ ಜಿಲ್ಲಾ ಪಂಚಾಯತ್ ಹಾಗೂ ಸ್ವೀಪ್ ಶಿವಮೊಗ್ಗ ವತಿಯಿಂದ ಶಿವಮೊಗ್ಗ ಜಿಲ್ಲಾ ಪಂಚಾಯತ್ ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸ್ನೇಹಲ್ ಸುಧಾಕರ್ ಲೋಖಂಡೆಯವರು ಯುವ ಮತದಾರರನ್ನುದೇಶಿಸಿ ಮಾತನಾಡಿದರು ಅವರು “ನಮ್ಮ ದೇಶದಲ್ಲಿ 18 – 30 ವರ್ಷದೊಳಗಿನ ಯುವಜನರ ಸಂಖ್ಯೆಯೇ ಪ್ರಧಾನವಾಗಿದ್ದು ಯುವಜನರ ಜವಾಬ್ದಾರಿಯುತ ಮತದಾನವೇ ಭವಿಷ್ಯದಲ್ಲಿ ದೇಶದ ಅಭಿವೃದ್ಧಿಯನ್ನು ನಿರ್ಧರಿಸುತ್ತದೆ” ಎಂದು ತಿಳಿಸಿದರು. ಎಲ್ಲಾ ಯುವ ಜನರು ಕಡ್ಡಾಯವಾಗಿ ಮತದಾನ ಮಾಡುವುದರೊಂದಿಗೆ ಎಲ್ಲಾ ಅರ್ಹ ಮತದಾರರನ್ನು ಮೇ 7 ರಂದು ನಡೆಯಲಿರುವ ಚುನಾವಣೆಯಲ್ಲಿ ಮತದಾನ ಮಾಡುವಂತೆ ಪ್ರೇರೇಪಿಸಿರಿ ಎಂದು ಕರೆ ನೀಡಿದರು.
ಇದೇ ಸಂದರ್ಭದಲ್ಲಿ ರಾಜ್ಯ ಮಟ್ಟದ ಸ್ವೀಪ್ ತರಬೇತುದಾರರಾದ ಶ್ರೀ ನವೀನ್ ಅಹಮದ್ ಪರ್ವಿಜ್ ರವರು ವಿದ್ಯಾರ್ಥಿಗಳಿಗೆ ಮತದಾನದ ಮಹತ್ವದ ಕುರಿತು ಅರಿವು ಮೂಡಿಸುವುದರೊಂದಿಗೆ ಜವಾಬ್ದಾರಿಯುತ ಮತದಾನದ ಅಂಶಗಳನ್ನು ತಿಳಿಸಿಕೊಟ್ಟರು. “ಯಾವ ಕಾರಣಕ್ಕೂ ಯಾವುದೇ ಆಮಿಷಗಳಿಗೆ ಬಲಿಯಾಗದೇ ಮತದಾನ ನಡೆಸುವುದು ಜವಾಬ್ದಾರಿಯುತ ಪೌರರ ಕರ್ತವ್ಯ” ಎಂದು ತಿಳಿಸಿದರು.
ಎನ್ ಎಸ್ ಎಸ್ ವಿದ್ಯಾರ್ಥಿಗಳೇ ನಡೆಸಿದ ಕಾರ್ಯಕ್ರಮದಲ್ಲಿ ಮಂಜುನಾಥ್ ಸ್ವಾಮಿಯವರು ನಿರ್ದೇಶಿಸಿದ ಬೀದಿ ನಾಟಕವು ಎಲ್ಲರ ಗಮನ ಸೆಳೆಯಿತು. ಈ ಬೀದಿ ನಾಟಕವು ನಗರದ ಪ್ರಮುಖ ಪ್ರದೇಶಗಳಲ್ಲಿ ಪ್ರದರ್ಶಿಸಿ ಜಾಗೃತಿ ಮೂಡಿಸಲಾಗುವುದು ಎಂದು ಪ್ರಾಂಶುಪಾಲರು ತಿಳಿಸಿದರು. ಎಲ್ಲಾ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಮತದಾನ ಮಾಡುವ ಪ್ರತಿಜ್ಞೆಯನ್ನು ಕೈಗೊಂಡರು.
ಈ ಕಾರ್ಯಕ್ರಮದಲ್ಲಿ ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜಿನ ಪ್ರಾಂಶುಪಾಲರಾದ ಡಾ.ಸಂಧ್ಯಾ ಕಾವೇರಿ, ಎನ್ ಎಸ್ ಎಸ್ ಕಾರ್ಯಕ್ರಮಾಧಿಕಾರಿಗಳಾದ ಡಾ.ಸುಕೀರ್ತಿ, ರಾಬರ್ಟ್ ರಾಯಪ್ಪ, ಎಂಸಿಸಿಎಸ್ ನ ನಿರ್ದೇಶಕರಾದ ಡಾ.ರಾಜೇಂದ್ರ ಚೆನ್ನಿ, ಉಪನ್ಯಾಸಕರಾದ ಡಾ.ಅರ್ಚನಾ ಭಟ್, ಮಂಜುನಾಥ ಸ್ವಾಮಿ, ಕಾವ್ಯ, ಗೌರಿ ಶ್ರೀ, ಮೋಹನ್ ಕುಮಾರ್, ಮಾಲತಿ ಉಪಸ್ಥಿತರಿದ್ದರು.