ರಿಪ್ಪನ್ಪೇಟೆ: ಲೋಕಸಭಾ ಚುನಾವಣೆಯ ನಂತರದ ಆರು ತಿಂಗಳಲ್ಲಿ ರಾಜ್ಯದ ಕಾಂಗ್ರೆಸ್ ಸರ್ಕಾರ ಪತನಗೊಳ್ಳಲಿದೆ ಎಂದು ಸಂಸದ ಬಿ.ವೈ. ರಾಘವೇಂದ್ರ ಹೇಳಿದರು.
ಅಮೃತ ಗ್ರಾಮದಲ್ಲಿ ಆಯೋಜಿಸಿದ್ದ ಲೋಕಸಭಾ ಚುನಾವಣೆಯ ಬಹಿರಂಗ ಪ್ರಚಾರ ಸಭೆಯಲ್ಲಿ ಮತಯಾಚಿಸಿ ಅವರು ಮಾತನಾಡಿದರು.
ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಬಡ ಮಹಿಳೆಯರಿಗೆ ಒಂದು ಲಕ್ಷ ರೂಪಾಯಿ ನೀಡುವ ಭರವಸೆ ಕೊಟ್ಟಿದೆ. ನಿಮ್ಮ ಮನೆ ಬಾಗಿಲಿಗೆ ಮತಯಾಚಿಸಲು ಬರುವ ಪಕ್ಷದ ಮುಖಂಡರಲ್ಲಿ ₹10,000 ಮುಂಗಡ ಕೇಳಿ. ಉಳಿದ ₹90,000 ಅಧಿಕಾರ ಸಿಕ್ಕ ಬಳಿಕ ಪಡೆಯಿರಿ’ ಎಂದು ಸಲಹೆ ನೀಡಿದರು.
‘ದೇಶದ ಬಜೆಟ್ ಗಾತ್ರ ₹48 ಲಕ್ಷ ಕೋಟಿ. ಆದರೆ ಕಾಂಗ್ರೆಸ್ ಚುನಾವಣಾ ಪ್ರಣಾಳಿಕೆಯಲ್ಲಿ ಮಹಿಳೆಯರಿಗೆ ಘೋಷಣೆ ಮಾಡಿದ ಗ್ಯಾರಂಟಿಗೆ ₹68 ಲಕ್ಷ ಕೋಟಿ ವೆಚ್ಚವಾಗಲಿದೆ. ಇದು ಅಸಾಧ್ಯದ ಮಾತು. ಕಾಂಗ್ರೆಸ್ ಮಹಿಳೆಯರ ಮುಗ್ಧತೆಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ’ ಎಂದು ಆರೋಪಿಸಿದರು.
ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಆಯುಷ್ಮಾನ್ ಕಾರ್ಡ್ಗೆ ನಿಗದಿಪಡಿಸಿದ 70 ವರ್ಷದ ವಯೋಮಾನವನ್ನು ಕೇಂದ್ರ ಸರ್ಕಾರ ರದ್ದುಪಡಿಸಿ, ಎಲ್ಲರಿಗೂ ಈ ಸೌಲಭ್ಯ ದೊರಕುವಂತೆ ಮಾಡಿದೆ ಎಂದರು.
ಶಾಸಕ ಆರಗ ಜ್ಞಾನೇಂದ್ರ ಮಾತನಾಡಿ, ‘ರಾಜ್ಯದಲ್ಲಿ ಅಧಿಕಾರದಲ್ಲಿರುವುದು ಕಳ್ಳತನ, ಕೊಲೆ, ಸುಲಿಗೆ ಮಾಡುವವರಿಗೆ ರಕ್ಷಣೆ ನೀಡುವ ಸರ್ಕಾರ. ನಾಗರಿಕರು, ಗೋ ಹಂತಕರು, ದರೋಡೆಕೋರರನ್ನು ಹಿಡಿಯುವ ಸಾಹಸಕ್ಕೆ ಕೈ ಹಾಕಬೇಡಿ. ಆರೋಪಿತರನ್ನು ಹಿಡಿದು ಕೊಟ್ಟವರನ್ನೇ ಜೈಲಿಗೆ ಹಾಕುತ್ತದೆ ಈ ಸರ್ಕಾರ’ ಎಂದು ಎಚ್ಚರಿಸಿದರು.
ಹತ್ತು ತಿಂಗಳಿಂದ ಯಾವುದೇ ಅಭಿವೃದ್ದಿ ಕಾರ್ಯಗಳಿಗೆ ಶಾಸಕರಿಗೆ ನಯಾ ಪೈಸೆ ಬಿಡುಗಡೆ ಮಾಡಿಲ್ಲ. ಗ್ಯಾರಂಟಿ ಹೆಸರಲ್ಲಿ ಜನರ ಜೇಬಿಗೆ ಕತ್ತರಿ ಹಾಕಿದೆ ಎಂದು ಟೀಕಿಸಿದರು.
ಜಿಲ್ಲಾ ಮುಖಂಡ ಹರಿಕೃಷ್ಣ, ತಾಲ್ಲೂಕು ಘಟಕದ ಅಧ್ಯಕ್ಷ ಸುಬ್ರಹ್ಮಣ್ಯ ಮತ್ತಿಮನೆ, ಬಿಜೆಪಿ ಮಹಾಶಕ್ತಿ ಕೇಂದ್ರದ ಆಧ್ಯಕ್ಷ ಎನ್.ಸತೀಶ್, ಶಿವಮೊಗ್ಗ ಜಿಲ್ಲಾ ಜೆಡಿಎಸ್ ಮಹಿಳಾ ಘಟಕದ ಅಧ್ಯಕ್ಷೆ ಗೀತಾ ಸತೀಶ್, ಹಿರಿಯ ಮುಖಂಡರಾದ ಉಮೇಶ್ ಕಂಚಿಗಾರ್, ಬಿ.ಎಸ್. ಪುರುಷೋತ್ತಮ್, ಜಿಲ್ಲಾ ಎಸ್.ಎಸ್.ಟಿ.ಮೋರ್ಚಾ ಅಧ್ಯಕ್ಷೆ ಉಷಾ ನಾರಾಯಣ, ಹಕ್ರೆ ಮಲ್ಲಿಕಾರ್ಜುನ, ಹಾಲಗದ್ದೆ ಉಮೇಶ್, ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ವೀರೇಶ್ ಅಲುವಳ್ಳಿ, ಹುಂಚ ಹೋಬಳಿ ಘಟಕದ ಅಧ್ಯಕ್ಷ ವಿನಾಯಕ, ಜೆಡಿಎಸ್ ತಾಲ್ಲೂಕು ಘಟಕದ ಅಧ್ಯಕ್ಷ ಎನ್.ವರ್ತೇಶ್ ಮತ್ತು ಇತರರು ಇದ್ದರು.
ಕಿಸೆಗಳ್ಳರ ಸರ್ಕಾರ: ಆಗರ ‘ಪ್ರತಿನಿತ್ಯ ಎರಡು ಕ್ವಾರ್ಟರ್ ಮದ್ಯ ಸೇವಿಸುವ ಮಧ್ಯಮ ವರ್ಗದ ವ್ಯಕ್ತಿ ರಾಜ್ಯ ಸರ್ಕಾರ ನಡೆಸಲು ತಿಂಗಳಿಗೆ ₹3000 ದೇಣಿಗೆ ನೀಡುತ್ತಿದ್ದಾನೆ. ಅದೇ ಹಣದಿಂದ ರಾಜ್ಯ ಸರ್ಕಾರ ಮಹಿಳೆಯರ ಖಾತೆಗೆ ₹2000 ಜಮಾ ಮಾಡಿ ₹1000 ಸರ್ಕಾರದ ಖಜಾನೆಗೆ ಸೇರಿಸುತ್ತಿದೆ. ಇದು ಕಿಸೆಗಳ್ಳರ ಸರ್ಕಾರ. ಈ ಸತ್ಯ ಗ್ರಾಮೀಣ ಮಹಿಳೆಯರು ತಿಳಿಯಬೇಕು’ ಎಂದು ಶಾಸಕ ಆರಗ ಜ್ಞಾನೇಂದ್ರ ಹೇಳಿದರು.