ಶಿವಮೊಗ್ಗ: ಏ. ೩೦ರಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರು ಶಿವಮೊಗ್ಗ ಆಗಮಿಸಲಿದ್ದು, ರಾಷ್ಟ್ರೀಯತೆಯ ಬಗ್ಗೆ ಕಾರ್ಯಕರ್ತರಲ್ಲಿ ಹುಮ್ಮಸ್ಸು ತುಂಬಲಿದ್ದಾರೆ ಎಂದು ಸಂಸದ ಬಿ.ವೈ. ರಾಘವೇಂದ್ರ ಹೇಳಿದ್ದಾರೆ.
ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಾತಾವರಣ ದಿನದಿಂದ ದಿನಕ್ಕೆ ಬಿಜೆಪಿ ಪರ ವೃದ್ಧಿಯಾಗುತ್ತಿದ್ದು, ಅತಿ ಹೆಚ್ಚಿನ ಅಂತರದಲ್ಲಿ ಗೆಲುವು ಸಾಧಿಸಲಿದ್ದೇವೆ ಎಂದರು.
ನಿನ್ನೆ ನಡೆದ ಮತದಾನದಲ್ಲಿ ಶೇಕಡವಾರು ಮತ ಚಲಾವಣೆ ಕಡಿಮೆಯಾಗಿದೆ. ಬೆಂಗಳೂರಿನಲ್ಲಿ ಒಟ್ಟಾರೆಯಾಗಿ ಶೇ. ೬ರಷ್ಟು ಕಡಿಮೆಯಾಗಿದೆ. ಇದು ಹೆಚ್ಚಾಗಬೇಕು. ಹೀಗಾಗಿ ಜನರು ಪೋಲಿಂಗ್ ಬೂತ್ ಗೆ ಬಂದು ಮತ ಚಲಾವಣೆ ಮಾಡಬೇಕಿದೆ. ಯುವಕರು ಕೂಡ ಹೆಚ್ಚಾಗಿ ಬಂದು ಮತದಾನ ಮಾಡಬೇಕು. ತುಮಕೂರಿನಲ್ಲಿ ವೃದ್ಧೆಯೊಬ್ಬರು ಮನೆಗೆ ಹೋಗಿ ಮತ ಹಾಕಿಸಲು ತೆರಳಿದಾಗ ನಿರಾಕರಿಸಿ ಮತದಾನ ಕೇಂದ್ರಕ್ಕೇ ಬಂದು ಮತ ಹಾಕಿ ಮನೆಗೆ ತೆರಳಿದ ಮೇಲೆ ನಿಧನರಾಗಿದ್ದಾರೆ. ಅವರು ಮತದಾನದ ಜಾಗೃತಿ ಮೂಡಿಸಿದ್ದಾರೆ ಎಂದರು.
ಕಾಂಗ್ರೆಸ್ ನವರು ಗ್ಯಾರಂಟಿ ಯೋಜನೆಗಳ ಮುಖಾಂತರ ತಲುಪಲು ಯತ್ನಿಸುತ್ತಿದೆ. ಆದರೆ ಅದು ಸಫಲವಾಗಲ್ಲ. ಮಹಿಳೆಯರಿಗೆ ೧ ಲಕ್ಷ ರೂ. ನೀಡುವ ಭರವಸೆ ನೀಡಿದ್ದಾರೆ. ಆದರೆ ನಮ್ಮ ದೇಶದಲ್ಲಿ ೬೮ಕೋಟಿ ಮಹಿಳೆಯರಿದ್ದು, ೬೮ ಲಕ್ಷ ಕೋಟಿ ಹಣ ಬೇಕಾಗುತ್ತದೆ. ದೇಶದ ಬಜೆಟ್ ಇರುವುದೇ ೪೮ ಲಕ್ಷ ಕೋಟಿ ರೂ. ಉಳಿದ ಹಣ ಎಲ್ಲಿಂದ ತರುತ್ತಾರೆ? ಇದು ಬೋಗಸ್ ಗ್ಯಾರಂಟಿ. ಮೋದಿ ಗ್ಯಾರಂಟಿಯೇ ಶಾಶ್ವತ ಗ್ಯಾರಂಟಿಯಾಗಿದ್ದು ರಾಷ್ಟ್ರದ ಭದ್ರತೆಯ ದೃಷ್ಟಿಯಿಂದ ಮೋದಿ ಗ್ಯಾರಂಟಿಯೇ ಬೇಕು ಎಂದರು.
ಜನರ ಮೂಗಿಗೆ ತುಪ್ಪ ಸವರುವ ಕೆಲಸ ಕಾಂಗ್ರೆಸ್ ಮಾಡುತ್ತಿದೆ. ಕಾಂಗ್ರೆಸ್ ಗ್ಯಾರಂಟಿ ಈ ಚುನಾವಣೆಯಲ್ಲಿ ನಡೆಯಲ್ಲ. ನಮ್ಮ ಚುನಾವಣಾ ಪ್ರಚಾರ ಚೆನ್ನಾಗಿ ಆಗುತ್ತಿದೆ. ಹೋದಲೆಲ್ಲಾ ಜನರು ಮೋದಿಜಿಯವರ ಪರವಾಗಿ ಮಾತನಾಡುತ್ತಿದ್ದಾರೆ. ರಾಷ್ಟ್ರೀಯ ಭದ್ರತೆ ಬಗ್ಗೆ ಮಾತನಾಡುತ್ತಾರೆ. ನಾವು ಅತಿ ಹೆಚ್ಚು ಲೀಡ್ ನಲ್ಲಿ ಗೆಲ್ಲುತ್ತೇವೆ ಎಂದರು.
ಶಿವಮೊಗ್ಗಕ್ಕೆ ರಾಹುಲ್ ಗಾಂಧಿ ಬರುವ ವಿಚಾರದ ಬಗ್ಗೆ ಮಾತನಾಡಿ, ಚುನಾವಣೆ ಇದ್ದಾಗ ಅವರವರ ಪಕ್ಷದ ನಾಯಕರು, ಮುಖಂಡರು ಬರುವುದು ಸಹಜ. ಅವರು ಬಂದು ಹೋದರೆ ನಮಗೆ ಹೆಚ್ಚೇನು ವ್ಯತ್ಯಾಸ ಆಗಲ್ಲ ಎಂದರು.
ಕಲಾವಿದರು ಬಂದರೂ ಕೂಡ ಜನ ಅವರನ್ನು ನೋಡಿ ಖುಷಿ ಪಡುತ್ತಾರೆ. ಆದರೆ ಮತವಾಗಿ ಪರಿವರ್ತನೆಯಾಗಲ್ಲ ಎಂದರು. ನಿನ್ನೆ ರಾಜ್ಯದ ೧೪ ಕ್ಷೇತ್ರಗಳಲ್ಲಿ ನಡೆದ ೧೩ ಕ್ಷೇತ್ರಗಳಲ್ಲಿ ನಿಶ್ಚಿತವಾಗಿ ಗೆಲ್ಲುತ್ತೇವೆ ಎಂದರು.