ಶಿವಮೊಗ್ಗ,ಏ.೨೭: ಹಾಸನಭಾಗದಲ್ಲಿ ಪ್ರತಿಷ್ಠಿತ ರಾಜಕೀಯ ಕುಟುಂಬದ ಪ್ರಭಾವಿ ರಾಜಕಾರಣಿಯೋರ್ವ ನೂರಾರು ಬಡಮಹಿಳೆಯರಿಗೆ ಲೈಂಗಿಕ ಶೋಷಣೆ ಮಾಡಿದ ಸುದ್ಧಿಗಳು ಹೊರಬರುತ್ತಿವೆ. ಇದು ಇಡೀ ನಾಗರೀಕ ಸಮಾಜವೇ ತಲೆತಗ್ಗಿಸುವಂತದ್ದು ಇದನ್ನು ಸ್ವಯಂದೂರು ದಾಖಲಿಸಿಕೊಂಡು ತನಿಖೆ ನಡೆಸಬೇಕು ಎಂದು ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ್ ಹೇಳಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ನೇಹಾ ಘಟನೆ ಕೂಡ ಇಡೀ ಸಮಾಜ ತಲೆತಗ್ಗಿಸುವಂತದ್ದೇ ಆಗಿದೆ. ಹತ್ಯೆ ಮಾಡಿದ ಪಾಪಿಷ್ಠನಿಗೆ ಶಿಕ್ಷೆ ಆಗಲೆಬೇಕು. ಅವನೊಬ್ಬ ನರ ರಾಕ್ಷಸನಾಗಿದ್ದಾನೆ. ಆ ಘಟನೆಯನ್ನು ಮರೆಯುವ ಮುನ್ನವೇ ಹಾಸನ ಭಾಗದಲ್ಲಿ ಪ್ರಭಾವಿ ರಾಜಕಾರಣಿಯ ಲೈಂಗಿಕ ಹಗರಣದ ಬಗ್ಗೆ ಎಲ್ಲೆಡೆ ಕೇಳಿಬರುತ್ತಿದೆ. ಖಾಸಗಿ ಚಾನಲ್ ಒಂದು ಕೂಡ ಈ ಬಗ್ಗೆ ಬಿತ್ತರಿಸಿದೆ ಎಂದರು.
ಆ ರಾಜಕಾರಣಿಯ ಬಲೆಗೆ ಬಿದ್ದವರು ಬಡವರು, ಮುಸುರೆ ತಿಕ್ಕಲು ಬಂದ ಕೂಲಿ ಕೆಲಸದವರು ಸೇರಿಕೊಂಡಿದ್ದಾರೆ. ಅಷ್ಟೇ ಅಲ್ಲ, ಮಹಿಳಾ ಪೋಲಿಸರೊಬ್ಬರನ್ನು ಕೂಡ ಇದಕ್ಕೆ ಬಳಸಿಕೊಳ್ಳಲಾಗಿದೆ. ರಾಜರೋಷವಾಗಿ ಅವರ ಬಟ್ಟೆಗಳನ್ನು ಬಿಚ್ಚಿಸಿದ ದೃಶ್ಯಗಳು
ಕಾಣಿಸಿಕೊಳ್ಳತೊಡಗಿವೆ. ಅನ್ಯಾಯಕೊಳಕ್ಕಾದ ಹೆಣ್ಣುಮಕ್ಕಳು ಅಸಹಾಯಕರಾಗಿರುವುದರಿಂದ ದೂರು ನೀಡಲು ಕೂಡ ಭಯ ಪಡುತ್ತಿದ್ದಾರೆ ಎಂದರು.
ಭಾರತ ಮಾತೆ ಎಂದು ಹೇಳಿಕೊಳ್ಳುವ ಬಿಜೆಪಿಗರು ಇಂತಹದೊಂದು ಸುದ್ಧಿ ಇಡೀ ರಾಜ್ಯದಲ್ಲಿ ಹರಡಿದ್ದರು ಕೂಡ ತುಟಿಪಿಟಿಕ್ ಎನ್ನುತ್ತಿಲ್ಲ. ತಮ್ಮ ಪಕ್ಷದ ಜೊತೆ ಹೊಂದಾಣಿಕೆ ಮಾಡಿಕೊಂಡಿದ್ದಾರೆ ಎಂಬ ಕಾರಣಕ್ಕಾಗಿ ಅನ್ಯಾಯಕೊಳಕ್ಕಾಗದ ಮಹಿಳೆಯರ ಪರ ಮಾತನಾಡಬಾರದೆ, ಶಿವಮೊಗ್ಗದಲ್ಲಿಯೂ ಕೂಡ ಹಿಂದೂ ಹುಲಿ ಎನಿಸಿಕೊಂಡ ಈಶ್ವರಪ್ಪ ಕೂಡ ಸುಮ್ಮನ್ನಿದ್ದಾರೆ ಎಂದರು.
ಕೆ.ಎಸ್.ಈಶ್ವರಪ್ಪನವರು ಗೀತಾಶಿವರಾಜಕುಮಾರ್ ಪ್ರಚಾರದ ವೇಳೆಯಲ್ಲಿ ಹಣೆಯ ಬೆವರಿನ ಜೊತೆ ಇದ್ದ ಕುಂಕುಮವನ್ನು ಅಳಿಸಿಕೊಂಡಿದ್ದನ್ನೇ ಬಹುದೊಡ್ಡದಾಗಿ ಪ್ರತಿಬಿಂಬಿಸಿ ಏನೇನು ಹೇಳಿದರು. ಆದರೆ ಇದೇ ಈಶ್ವರಪ್ಪ ಗುತ್ತಿಗೆದಾರ ಸಂತೋಷ ಪಾಟೀಲರ ಮಡದಿಯ ಕುಂಕುಮವನ್ನೇ ಶಾಶ್ವತವಾಗಿ ಅಳಿಸಿ ಹಾಕಿದ್ದಾರಲ್ಲ ಇದಕ್ಕೇನು ಉತ್ತರ ಕೊಡುತ್ತಾರೆ ಎಂದರು.
ಹಾಸನದ ಘಟನೆಯ ಬಗ್ಗೆ ಇಡೀ ಸಮಾಜವೇ ಮೌನವಾಗಿದೆ. ಅದರಲ್ಲೂ ಬಿಜೆಪಿಯ ರಾಜಕಾರಣಿಗಳಂತೂ ನಮಗೇನು ಸಂಬಂಧವಿಲ್ಲದಂತೆ ವರ್ತಿಸುತ್ತಿದ್ದಾರೆ. ಇದು ಒಪ್ಪಿತ ಸಂಬಂಧವೇ ಇರಬಹುದು ಆದರೆ ಒಪ್ಪಿತ ಸಂಬಂಧದ ದೃಶ್ಯಗಳನ್ನು ನೀಲಿ ಚಿತ್ರ ಮಾಡುವುದು ಎಷ್ಟು ಸರಿ ?, ಆತನೇ ನೀಲಿ ಚಿತ್ರ ಮಾಡುತ್ತಿದ್ದ ಎಂದು ಈಗಾಗಲೇ ಹೇಳಲಾಗುತ್ತಿದೆ. ಈ ಎಲ್ಲಾ ಹಿನ್ನಲೆಯಲ್ಲಿ ಆತನ ವಿರುದ್ಧ ಸ್ವಯಂದೂರು ದಾಖಲಿಸಬೇಕು ಎಂದು ಯಾರ ಹೆಸರು ಹೇಳದೆ ಹಾಸನದ ಪ್ರತಿಷ್ಠಿತ ರಾಜಕೀಯ ಕುಟುಂಬದ ವಿರುದ್ಧ ಹರಿಹಾಯ್ದರು.
ಕಾರ್ಮಿಕರು ಯಾವುದೇ ಕಾರಣಕ್ಕೂ ಬಿಜೆಪಿಗೆ ವೋಟು ಹಾಕಲೇಬಾರದು, ಏಕೆಂದರೆ ಬಸವರಾಜ್ಬೊಮ್ಮಾಯಿಯವರು ಮುಖ್ಯಮಂತ್ರಿಯಾಗಿದ್ದಾಗ, ಯಾವುದೋ ಹಿತಾಸಕ್ತಿಗೆ ಒಳಗಾಗಿ ಕಾರ್ಮಿಕರ ದುಡಿಯುವ ಸಮಯ ೮ ಗಂಟೆ ಇದ್ದದ್ದನ್ನು ೧೨ ಗಂಟೆಗೆ ಹೆಚ್ಚಿಸಿದ್ದರು. ಇದೊಂದು ಕಾರ್ಮಿಕ ವಿರೋಧಿ ನೀತಿಯಾಗಿತ್ತು. ಹಾಗೆಯೇ ಶಿವಮೊಗ್ಗದಲ್ಲಿ ಶಾಹಿ ಗಾರ್ಮೆಂಟ್ಸ್ಗೆ ೨೪ ಎಕರೆ ಜಮೀನನ್ನು ಕೊಟ್ಟರು. ಅಲ್ಲಿ ಕೆಲವರ ಸೈಲೆಂಟ್ ಪಾರ್ಟ್ನರ್ಸ್ ಇದ್ದಾರೆ ಎಂಬ ದೂರುಗಳಿವೆ. ಜೊತೆಗೆ ೬ ಸಾವಿರ ಮಹಿಳೆಯರು ಕೆಲಸ ಮಾಡುತ್ತಿದ್ದಾರೆ ಅಲ್ಲಿ ಮೂಲಭೂತ ಸೌಲಭ್ಯಗಳು ಇಲ್ಲ. ಮಹಿಳೆಯರಿಗೆ ಕೆಲಸಕ್ಕೆ ತಕ್ಕಂತೆ ವೇತನವು ಇಲ್ಲ. ಅಲ್ಲೂ ಕೂಡ ಕಾರ್ಮಿಕರ ಶೋಷಣೆ ನಡೆಯುತ್ತಿದೆ ಎಂದರು.
ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕೆ ಶಿವಮೊಗ್ಗದಲ್ಲಿ ಕಲ್ಲು ಸಿಗುತ್ತಿಲ್ಲ, ಆದರೆ ಇಲ್ಲಿನ ಹೆದ್ದಾರಿಗೆ ಲೋಡ್ಗಟ್ಟಲೆ ಹೊರಗಿನಿಂದ ಕಲ್ಲು ಬರುತ್ತದೆ. ಹೊಸದುರ್ಗದ ಕಡೆಯಿಂದಲೂ ಬರುತ್ತದೆ. ಆ ಕಲ್ಲು ಕ್ವಾರೆಗಳು ಯಾರವು ಎಂದು ಹೇಳಬಹುದಲ್ಲವೆ ಎಂದರು.
ರಾಜಕಾರಣಿಗಳಿಗೆ ದುರಾಸೆ ಹೆಚ್ಚಾಗುತ್ತಿದೆ. ಕಲ್ಲು ಕ್ವಾರೆಗಳು ಅವರವೇ, ಆಸ್ಪತ್ರೆಗಳು, ಅವರವೇ, ಟ್ರ್ಯಾಕ್ಟರ್, ಬೈಕ್, ಶೋರೂಂಗಳು ಅವರವೇ, ಶಿಕ್ಷಣ ಸಂಸ್ಥೆಗಳು ಅವರವೇ, ಅವರ ಮಕ್ಕಳು ರಾಜಕಾರಣಿಗಳು ಎಂದ ಅವರು ಬಿಜೆಪಿಯಲ್ಲಿ ಎಲ್ಲ ಹಿರಿಯರನ್ನು ಮುಗಿಸಿಬಿಡುವ ಒಳಸಂಚು ನಡೆಯುತ್ತಿದೆ. ಆದರಲ್ಲಿ ಈಶ್ವರಪ್ಪ ಸಹ ಒಬ್ಬರು ಅಷ್ಟೇ ಎಂದರು.
ಪತ್ರಿಕಾಗೋಷ್ಠಿಯಲ್ಲಿ, ಕಾಂಗ್ರೆಸ್ ಹಿರಿಯ ಮುಖಂಡ ಎಸ್.ಪಿ.ಶೇಷಾದ್ರಿ ಪ್ರಮುಖರಾದ ಹಿರಣ್ಣಯ್ಯ, ಧೀರರಾಜ್ ಹೊನ್ನಾವಿಲೆ, ಶಿ.ಜು.ಪಾಶ, ಪದ್ಮನಾಭ, ಆಯನೂರು ಸಂತೋಷ್, ಜಗದೀಶ್, ಶಶಿ ಮುಂತಾದವರು ಇದ್ದರು.