ಶಿವಮೊಗ್ಗ : ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮತ್ತು ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಸಹಯೋಗದಲ್ಲಿ ರಾಜ್ಯ ಮಟ್ಟದ ಮಕ್ಕಳ ಕನ್ನಡ ಸಾಹಿತ್ಯ ಸಮ್ಮೇಳನ ಮೇ. ಕೊನೆಯ ವಾರದಲ್ಲಿ ಶಿವಮೊಗ್ಗ ದಲ್ಲಿ ನಡೆಸಲು ತೀರ್ಮಾನ ಮಾಡಲಾಗಿದೆ ಎಂದು ಡಿ. ಮಂಜುನಾಥ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆಯು ಪ್ರತಿ ತಿಂಗಳು ಹುಣ್ಣಿಮೆ ದಿನವನ್ನು ಸಾಹಿತ್ಯ ಹುಣ್ಣಿಮೆ ಎಂದು ಮನೆ,ಮನ ಸಾಹಿತ್ಯ ಕಾರ್ಯಕ್ರಮ ಇನ್ನೂರ ಇಪ್ಪತೈದನೆಯ ತಿಂಗಳ ಕಾರ್ಯಕ್ರಮದ ಜೊತೆಯಲ್ಲಿ ಮಕ್ಕಳ ಸಾಹಿತ್ಯ ಸಮ್ಮೇಳನ ನಡೆಸಲು ಪೂಜ್ಯ ಶ್ರೀ ಶ್ರೀ ಪ್ರಸನ್ನನಾಥ ಸ್ವಾಮೀಜಿ ಜೊತೆಯಲ್ಲಿ ನಡೆದ ಸಮಾಲೋಚನೆ ಸಭೆಯಲ್ಲಿ ತೀರ್ಮಾನ ಮಾಡಲಾಗಿದೆ ಎಂದು ಡಿ. ಮಂಜುನಾಥ ತಿಳಿಸಿದ್ದಾರೆ.
ಕಳೆದ ಶೈಕ್ಷಣಿಕ ವರ್ಷದಲ್ಲಿ ತಾಲ್ಲೂಕು, ಜಿಲ್ಲಾ ಮಟ್ಟದ ಸಮ್ಮೇಳನಗಳು ಯಶಸ್ವಿಯಾಗಿ ನಡೆದಿದ್ದು ರಾಜ್ಯ ಮಟ್ಟದ ಸಮ್ಮೇಳನ ಮುಂದೂಡಲಾಗಿತ್ತು. ಕಳೆದ ಹದಿನೆಂಟು ವರ್ಷ ಗಳಿಂದ ನಿರಂತರವಾಗಿ ಶ್ರೀ ಆದಿಚುಂಚನಗಿರಿ ಕ್ಷೇತ್ರದಲ್ಲಿ ಏರ್ಪಡಿಸಲಾಗುತ್ತಿತ್ತು. ಈ ಬಾರಿ 19 ನೇ ವರ್ಷದ ಮಕ್ಕಳ ಕನ್ನಡ ಸಾಹಿತ್ಯ ಸಮ್ಮೇಳನ ಶಿವಮೊಗ್ಗದಲ್ಲಿ ನಡೆಯಲಿದೆ. ಶಿವಮೊಗ್ಗ ಜಿಲ್ಲೆಯ ಮಕ್ಕಳು ರಾಜ್ಯ ಮಟ್ಟಕ್ಕೆ ಆಯ್ಕೆಯಾದವರ ಮಾಹಿತಿ ಇದೆ. ಬೇರೆ ಬೇರೆ ಜಿಲ್ಲೆಯ ಮಕ್ಕಳು ಮೇ.10 ರ ಒಳಗಾಗಿ ತಾವು ಬರೆದ ಕವನ, ಹನಿಗವನ, ಕಥೆ, ಪ್ರಬಂಧಗಳ ಜೊತೆಯಲ್ಲಿ ಹೆಸರು, ವಿಳಾಸ, ದೂರವಾಣಿ ಸಂಖ್ಯೆ, ತಂದೆ, ತಾಯಿ, ಶಾಲೆ ಮುಖ್ಯಸ್ಥರ ಒಪ್ಪಿಗೆಯೊಂದಿಗೆ ನೋಂದಣಿ ಮಾಡಿಕೊಳ್ಳಲು ಕೋರಲಾಗಿದೆ.
ಆಸಕ್ತಿಯಿರುವವರು ಡಿ. ಮಂಜುನಾಥ, ಅಧ್ಯಕ್ಷರು, ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ರಿ., ಆರ್. ಟಿ. ಓ. ಕಚೇರಿ ರಸ್ತೆ, ಶಿವಮೊಗ್ಗ, ದೂರವಾಣಿ : 9449552795 ಇವರನ್ನು ಸಂಪರ್ಕ ಮಾಡಲು ಕೋರಲಾಗಿದೆ.