ಶಿವಮೊಗ್ಗ,ಏ.16: ಏ.18ರಂದು ಗುರುವಾರ ಬೆಳಿಗ್ಗೆ 11ಕ್ಕೆ ನಾನು ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಲಿದ್ದು, ನಿಜವಾದ ಹೋರಾಟ ಪ್ರಾರಂಭವಾಗಲಿದೆ. ನಮ್ಮ ಭರವಸೆಯನ್ನು ಜಾರಿಗೆ ತಂದು ಅಭಿವೃದ್ಧಿ ಮಾಡಿದ್ದೇವೆ ಆದ್ದರಿಂದ ಮತದಾರರು ನನ್ನನ್ನು ಬಹುಮತದಿಂದ ಗೆಲ್ಲಿಸಲಿದ್ದಾರೆ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅನೇಕರು ಅನೇಕ ಟೀಕೆಗಳನ್ನು ಮಾಡುತ್ತ ಇರುತ್ತಾರೆ. ಅದಕ್ಕೆ ಉತ್ತರ ಕೊಡಲು ಸಮಯವಿಲ್ಲ. ರಾಜ್ಯ ಕಾಂಗ್ರೆಸ್ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್ಗೆ ಆತ್ಮಸಾಕ್ಷಿಯಾಗಿ ನನ್ನ ಮೇಲೆ ಪ್ರೀತಿಯಿದೆ. ನನಗೆ ಆಶೀರ್ವಾದ ಮಾಡಿದ್ದಾರೆ. ಅವರ ಟೀಕೆಗೆ ನಾನು ಉತ್ತರಿಸಲ್ಲ. ಡಿ.ಕೆ.ಶಿ. ರಾಜ್ಯಾಧ್ಯಕ್ಷರಾಗಿ ಹೇಳಿಕೆ ಕೊಡಲೇ ಬೇಕಾಗುತ್ತದೆ ಎಂದರು.
ಎಂಪಿಎಂಗೆ ಕೊನೆ ಮೊಳೆ ಹೊಡೆದವರೇ ಕಾಂಗ್ರೆಸ್ ಪಕ್ಷದವರು, ಒಂದು ಬೆರಳು ಇನ್ನೊಬ್ಬನಿಗೆ ತೋರಿಸುವಾಗ ನಾಲ್ಕು ಬೆರಳು ತನ್ನಕಡೆಗೆ ಇರುತ್ತದೆ ಎಂಬುವುದನ್ನು ಮರೆಯಬಾರದು. ಈಶ್ವರಪ್ಪನವರ ಟೀಕೆಗೆ ಉತ್ತರಿಸುವಷ್ಟು ನಾನು ದೊಡ್ಡವನ್ನಲ್ಲ. ಅವರು ಏನು ಹೇಳಿದರು. ಅದು ನನಗೆ ಆಶೀರ್ವಾದ ನಾನೊಬ್ಬ ಸಾಮಾನ್ಯ ಕಾರ್ಯಕರ್ತ, ಪಕ್ಷದ ಹಿರಿಯರು ಅವರ ಹೇಳಿಕೆಗೆ ಉತ್ತರಿಸುತ್ತಾರೆ ಎಂದರು.
ನನ್ನ ಬಗ್ಗೆ ಭಯ ಎಂದು ಈಶ್ವರಪ್ಪನವರು ಹೇಳಿದ್ದಾರೆ. ಹಿರಿಯ ಬಗ್ಗೆ ಯಾವಾಗಲು ಭಯ ಭಕ್ತಿ ಇರಬೇಕು ಎಂಬುವುದನ್ನು ನಮಗೆ ಹೇಳಿ ಕೊಟ್ಟಿದ್ದಾರೆ. ಪ್ರಚಾರಕ್ಕೆ ರಾಷ್ಟ್ರೀಯ ನಾಯಕರು ಬರುತ್ತಾರೆ. ನಮಗೆ ಬುತ್ ಮಟ್ಟದ ಅಧ್ಯಕ್ಷರು ಮತ್ತು ಕಾರ್ಯಕರ್ತರುಗಳೇ ಸ್ಟಾರ್ ಕ್ಯಾಂಪಿನಿಯರ್ ಎಂದರು.
ಇಡೀ ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ನಮ್ಮ ಕಾರ್ಯಕರ್ತರು ನನ್ನ ಪರವಾಗಿ ಈಗಾಗಲೇ ಮನೆ ಮನೆಗೆ ತೆರಳಿ ಪ್ರಚಾರ ಮಾಡುತ್ತಿದ್ದು, ಅಭೂತಪೂರ್ವ ಬೆಂಬಲ ವ್ಯಕ್ತವಾಗಿದೆ. ಜನರು ನಾನು ಮಾಡಿದ ಅಭಿವೃದ್ಧಿ ಕೆಲಸಗಳನ್ನು ಗುರುತಿಸಿ ರಾಘಣ್ಣ ಮತ್ತು ಗೆಲ್ಲಬೇಕು ಎಂದು ಸ್ವಯಂಪ್ರೇರಿತರಾಗಿ ನನ ಪರವಾಗಿ ಕೆಲಸ ಮಾಡುತ್ತಿದ್ದಾರೆ. ಲಕ್ಷಾಂತರ ಅಂತರದಲ್ಲಿ ನಾನು ಗೆಲ್ಲುತ್ತೇನೆ ಎಂಬ ಭರವಸೆ ವ್ಯಕ್ತಪಡಿಸಿದರು.