ಶಿವಮೊಗ್ಗ: ರಾಜ್ಯದ ಕಾಂಗ್ರೆಸ್ಗೆ ಇದು ದೇಶದ ಚುನಾವಣೆ ಎಂದೇ ಗೊತ್ತಿಲ್ಲ. ಸ್ಥಳೀಯ ಸಂಸ್ಥೆ ಚುನಾವಣೆ ಎಂದುಕೊಂಡಿದೆ ಎಂದು ವಿಧಾನ ಪರಿಷತ್ ಸದಸ್ಯ, ರಾಜ್ಯ ಬಿಜೆಪಿ ಕಾರ್ಯದರ್ಶಿ ಡಿ.ಎಸ್. ಅರುಣ್ ವ್ಯಂಗ್ಯವಾಡಿದ್ದಾರೆ.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಬಿಜೆಪಿಯವರು ನಮ್ಮ ದೇಶದ ಆಂತರಿಕ ವ್ಯವಸ್ಥೆ, ಸುರಕ್ಷತೆ, ಆರ್ಥಿಕ ವ್ಯವಸ್ಥೆ, ಅಂತ್ಯೋದಯದ ಬಗ್ಗೆ ಮಾತನಾಡುತ್ತಿದ್ದರೆ ಈ ಕಾಂಗ್ರೆಸ್ನವರು ಸ್ಥಳೀಯ ಸಂಸ್ಥೆ ಚುನಾವಣೆ ಎಂದುಕೊಂಡಿದ್ದಾರೆ. ಪ್ರಾದೇಶಿಕ ವಿಷಯವೇ ಇವರಿಗೆ ಮುಖ್ಯವಾಗುತ್ತದೆ. ದೇಶದ ವಿಷಯ ಇವರಿಗೆ ಗೌಣವಾಗಿದೆ ಎಂದರು.
ರಾಹುಲ್ ಗಾಂಧಿ ಅವರ ಬಗ್ಗೆ ಯಾರಿಗೂ ವಿಶ್ವಾಸವೇ ಇಲ್ಲ. ಕಾಂಗ್ರೆಸ್ನಲ್ಲಿ ನಾಯಕತ್ವವೂ ಇಲ್ಲ. ಬರೀ ಸುಳ್ಳುಗಳನ್ನೇ ಹೇಳುತ್ತಾ ಹೊರಟಿದ್ದಾರೆ. ಉದಾಹರಣೆಗೆ ಮೋದಿ ಅವರು ಪ್ರತಿಯೊಬ್ಬರಿಗೂ ೧೫ ಲಕ್ಷ ಕೊಡುತ್ತೇವೆ ಎಂದಿದ್ದರು. ಕೊಟ್ಟರಾ ಎಂದು ಹೇಳುತ್ತಾರೆ. ಅಂತಹ ಹೇಳಿಕೆಯನ್ನು ಮೋದಿ ಎಲ್ಲಿ ಹೇಳಿದ್ದಾರೆ. ಸುಳ್ಳು ಹೇಳುವುದಕ್ಕೂ ಒಂದು ಮಿತಿ ಇರುತ್ತದೆ. ಹಾಗೆಯೇ ಉದ್ಯೋಗ ಸೃಷ್ಟಿಯಾಗಿಲ್ಲ ಎನ್ನುತ್ತಾರೆ. ಒಂದು ಅಂಕಿ ಅಂಶದ ಪ್ರಕಾರ ೫ ಕೋಟಿ ಉದ್ಯಮಗಳಿದ್ದು, ಈಗ ಅದು ೬.೩ ಕೋಟಿ ಉದ್ಯಮಕ್ಕೆ ಹೆಚ್ಚಿದೆ. ಈ ಉದ್ಯಮದಿಂದ ಕನಿಷ್ಠ ೬ ಕೋಟಿ ಜನರಿಗೆ ಉದ್ಯೋಗ ಸಿಕ್ಕಂತಾಗಿದೆ ಎಂದರು.
ಬಿಜೆಪಿ ಅಧಿಕಾರಕ್ಕೆ ಬಂದ ನಂತರ ದೇಶ ಕಟ್ಟುವ ಕೆಲಸ ಮಾಡಿದೆ. ವಿಶ್ವದಲ್ಲೇ ಸಬಲ ರಾಷ್ಟ್ರವನ್ನಾಗಿ ಮಾಡಿದೆ. ಈಗ ಭಾರತ ೫ನೇ ಆರ್ಥಿಕ ಬಹುದೊಡ್ಡ ರಾಷ್ಟ್ರವಾಗಿದೆ. ಆರ್ಥಿಕ ನೀತಿ, ಸುರಕ್ಷಾ ಭಾರತ, ಅಂತ್ಯೋದಯದ ಅಡಿಯಲ್ಲಿ ನಾವು ದೇಶ ಕಟ್ಟಿದ್ದೇವೆ. ಕೃಷಿ, ವ್ಯಾಪಾರ ಮತ್ತು ಉದ್ಯೋಗಕ್ಕೆ ಆದ್ಯತೆ ಕೊಟ್ಟಿದ್ದೇವೆ. ರಾಜ್ಯ ಸರ್ಕಾರದ ಹಾಗೆ ಬೋಗಸ್ ಬಜೆಟ್ ನೀಡಿಲ್ಲ ಎಂದರು.
ಬಿ.ವೈ. ರಾಘವೇಂದ್ರ ಸೇರಿದಂತೆ ರಾಜ್ಯದ ಎಲ್ಲಾ ೨೭ ಸಂಸದರು ಕೂಡ ಅವರವರ ಕ್ಷೇತ್ರದಲ್ಲಿ ಅಭಿವೃದ್ಧಿ ಮಾಡಿದ್ದಾರೆ. ನಿಯಮದಂತೆ ಕೇಂದ್ರದಿಂದ ಅನುದಾನವನ್ನೂ ತಂದಿದ್ದಾರೆ. ಅದರಲ್ಲೂ ಬಿ.ವೈ. ರಾಘವೇಂದ್ರ ಶಿವಮೊಗ್ಗ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಮಾಡಿದ್ದಾರೆ. ಈ ಎಲ್ಲಾ ಕಾರಣಗಳಿಂದ ರಾಜ್ಯದ ಎಲ್ಲಾ ೨೮ ಕ್ಷೇತ್ರಗಳನ್ನು ಎನ್.ಡಿ.ಎ. ಅಭ್ಯರ್ಥಿಗಳು ಗೆಲ್ಲುತ್ತಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಆರ್.ಕೆ. ಸಿದ್ಧರಾಮಣ್ಣ, ಜ್ಯೋತಿಪ್ರಕಾಶ್, ರಾಮು, ಕೆ.ಜಿ. ಕುಮಾರಸ್ವಾಮಿ, ಶಿವರಾಜ್, ಕೆ.ವಿ. ಅಣ್ಣಪ್ಪ, ಶರತ್ ಕಲ್ಯಾಣಿ ಇದ್ದರು.