ಸಾಗರ : ನಗರದ ಜನ್ನತ ನಗರದಲ್ಲಿ ನಾಲ್ಕು ದಿನಗಳ ಹಿಂದೆ ನಡೆದಿದ್ದ ಕಳ್ಳತನ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪೊಲೀಸರು ಮಾಲುಸಹಿತ ಕಳ್ಳನನ್ನು ಮಂಗಳವಾರ ವಶಕ್ಕೆ ಪಡೆದಿದ್ದಾರೆ.
ಫೆ. ೧೭ರಂದು ಜನ್ನತ್ ನಗರದ ಜರೀನಾ ಎಂಬುವವರ ಮನೆಯ ಬೀಗ ಮುರಿದು ಕಳ್ಳತನ ನಡೆದಿತ್ತು. ಮನೆಯ ಬೀರುವಿನಲ್ಲಿದ್ದ ಬಂಗಾರದ ಆಭರಣ, ನಗದು ಹಣವನ್ನು ಕಳ್ಳರು ದೋಚಿ ಪರಾರಿಯಾಗಿದ್ದರು. ಈ ಸಂಬಂಧ ಜರೀನಾ ಅವರು ಪೇಟೆ ಠಾಣೆಗೆ ದೂರು ನೀಡಿದ್ದಾರೆ.
ಪ್ರಕರಣ ದಾಖಲಿಸಿಕೊಂಡ ನಗರ ಠಾಣೆ ಪೊಲೀಸರು ಶ್ರೀಧರ ನಗರ
ನಿವಾಸಿ ಇರ್ಫಾನ್ ಎಂಬಾತನನ್ನು ದಸ್ತಗಿರಿ ಮಾಡಿ ೬೯೩೦೦ ರೂ. ಮೌಲ್ಯದ ಚಿನ್ನಾಭರಣ, ೧೧ಸಾವಿರ ರೂ. ನಗದು ವಶಕ್ಕೆ ಪಡೆಯಲಾಗಿದೆ. ಕಳ್ಳತನ ನಡೆದ ನಾಲ್ಕೇ ದಿನಗಳಲ್ಲಿ ಕಳ್ಳನನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಡಿವೈಎಸ್ಪಿ ಗೋಪಾಲಕೃಷ್ಣ ಟಿ. ನಾಯಕ್ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ನಗರ ಠಾಣೆ ವೃತ್ತ ನಿರೀಕ್ಷಕ ಸೀತಾರಾಮ್, ಸಬ್ ಇನ್ಸ್ಪೆಕ್ಟರ್ ನಾಗರಾಜ್, ಅಪರಾಧ ವಿಭಾಗದ ಸಿಬ್ಬಂದಿಗಳಾದ ರತ್ನಾಕರ್, ಕೃಷ್ಣಮೂರ್ತಿ, ವಿಶ್ವನಾಥ್ ಪಾಲ್ಗೊಂಡಿದ್ದರು.