ಶಿವಮೊಗ್ಗ,ಜ.೩೦: ಟ್ರೀ ಪಾರ್ಕ್‌ನಲ್ಲಿ ನಡೆದ ದುರಂತ ಘಟನೆಯಲ್ಲಿ ಮಗು ಸಾವು ಕಂಡಿದ್ದು, ಇದಕ್ಕೆ ಕಾರಣರಾದವರ ಮೇಲೆ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಬಾಹುಸಾರ ಕ್ಷತ್ರಿಯ ಮಹಾಜನ ಸಮಾಜ ಇಂದು ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿತು.
ಮುದ್ದಿನಕೊಪ್ಪದಲ್ಲಿರುವ ಟ್ರೀ ಪಾರ್ಕ್‌ಗೆ ಗಾಂಧೀಬಜಾರ್‌ನ ಗೀತಾಂಜಲಿ ಟೆಕ್ಸ್‌ಟೈಲ್ ಮಾಲೀಕರಾದ ಹರೀಶ್ ಅಂಭೋರೆ ಮತ್ತು ಲಕ್ಷ್ಮೀ ಅಂಭೋರೆ ದಂಪತಿಗಳು ತೆರಳಿದ್ದರು. ೬ ವರ್ಷದ ಮಗು ಸಮೀಕ್ಷ ಸಿಮೆಂಟ್ ಜಿಂಕೆ ಮೇಲೆ ಕುಳಿತಿದ್ದಳು. ಸಿಮೆಂಟ್ ಜಿಂಕೆಯ ಪ್ರತಿಮೆ ಮುರಿದು ಬಿದ್ದು ಸಮೀಕ್ಷ ಸಾವು ಕಂಡಿದ್ದಾಳೆ.
ಈ ಸಾವಿಗೆ ಅಲ್ಲಿನ ಕಳಪೆ ಕಾಮಗಾರಿಯೇ ಕಾರಣವಾಗಿದೆ. ಬಾಳಿ ಬದುಕಬೇಕಾದ ಮಗುವಿನ ಜೀವ ಹೋಗಿದೆ. ಮನೆಯವರು ತುಂಬ ನೋವಿನಲ್ಲಿದ್ದಾರೆ. ಈ ಘಟನೆ ಬಾವುಸಾರ ಸಮಾಜಕ್ಕೂ ತೀವ್ರ ನೋವು ತಂದಿದೆ. ಪ್ರತಿಮೆ ಮುರಿದುಬಿದಿದ್ದರು ಅದನ್ನು ಸರಿಪಡಿಸದೇ ಉದಾಸಿನ ಮಾಡಿದ್ದರಿಂದ ಈ ಅನಾಹುತ ನಡೆದಿದೆ. ಇದಕ್ಕೆ ಕಾರಣರಾದವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು. ಮೃತ ಮಗುವಿನ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕು ಎಂದು ಮನವಿದಾರರು ಆಗ್ರಹಿಸಿದ್ದಾರೆ.
ಇಂತಹ ನೋವಿನ ಸಂದರ್ಭದಲ್ಲೂ ಅವರ ಪೋಷಕರು ತಮ್ಮ ಮಗಳ ಕಣ್ಣನ್ನು ದಾನ ಮಾಡುವ ಮೂಲಕ ಸಾರ್ಥಕತೆಯನ್ನು ನಡೆದಿದ್ದಾರೆ. ಇನ್ನೊಬ್ಬರ ಬಾಳಿಗೆ ಬೆಳಕು ತರಲು ಮುಂದಾಗಿದ್ದಾರೆ. ಇದಕ್ಕಾಗಿ ಅವರಿಗೆ ನಮ್ಮ ಕೃತಜ್ಞತೆಗಳು ಎಂದು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಸಮಾಜದ ಅಧ್ಯಕ್ಷರಾದ ಟಿ.ವಿ.ಗಜೇಂದ್ರನಾಥ್, ಪ್ರಮುಖರಾದ ಟಿ.ಡಿ.ಮಂಜುನಾಥ್, ಸತ್ಯನಾರಾಯಣ್, ವಿನಯ್ ವಿ. ತಾಂದಳೆ, ನವೀನ್ ಸಕ್ರೆ, ಸಂತೋಷ್ ಸಕ್ರೆ, ವೆಂಟಕೇಶ್ ಎಂ.ಆರ್., ವಿನಯ್ ತೇಲ್ಕರ್, ವಿಜಯಕುಮಾರ್‌ತೇಲ್ಕರ್, ನಿಖಿಲ್ ನವಲೆ, ಕಲ್ಯಾಣ್‌ಕುಮಾರ್, ಸಂತೋಷ್ ಮಹೇಂದ್ರಕರ್ ಇದ್ದರು.