ಶಿವಮೊಗ್ಗ, ಜ.30:
ಎಚ್ಚರಿಕೆಯಿಂದ ಹೆಜ್ಜೆ ಇಡಿ. ಸ್ಮಾರ್ಟ್ ಸಿಟಿ ಅವಾಂತರಕ್ಕೆ ಬಲಿಯಾಗದಿರಿ ಎಂದು ಸಾರ್ವಜನಿಕರನ್ನು ಎಚ್ಚರಿಸುವ ಕೆಲಸಕ್ಕೆ ಕರ್ನಾಟಕ ಗೆಳೆಯರ ಬಳಗ ಕೈಹಾಕಿದೆ.
ನಿನ್ನೆಯಷ್ಟೆ ಇದೇ ಸ್ಮಾರ್ಟ್ ಸಿಟಿ ವೀರಣ್ಣನ ಲೇ ಔಟ್ ನಲ್ಲಿ ಚರಂಡಿಗೆ ಹಾಕಿದ್ದ ಸ್ಲಾಬ್ ಜಾರಿ ವ್ಯಕ್ತಿ ಸಾವು ಕಂಡಿದ್ದಾರೆ. ಇದು ಸ್ಮಾರ್ಟ್ ಸಿಟಿ ಕಳಪೆಯ ನೂರಾರು ನಿದರ್ಶನಗಳಲ್ಲಿನ ಮೊದಲ ಬಲಿ. ಹಾಗಾಗಿ ಜನರು ಸ್ಮಾರ್ಟ್ ಸಿಟಿ ಮಾಡಿರುವ ಕೆಲಸವನ್ನು ಯಾವುದೇ ಕಾರಣಕ್ಕೂ ನಂಬಬೇಡಿ ಎಂದು ಗೆಳೆಯರ ಬಳಗದ ರಾಜ್ಯಾಧ್ಯಕ್ಷ ಅನಿಲ್ ಕುಂಚಿ ಶಿವಮೊಗ್ಗ ನಗರದ ಜನರಿಗೆ ಮನವಿ ಮಾಡಿದ್ದಾರೆ.
ಈ ಸ್ಮಾರ್ಟ್ ಸಿಟಿಯ ಕಳಪೆ ಕೆಲಸಗಳಿಗೆ ಈಗಾಗಲೇ ನೂರಾರು ಜನ ತುತ್ತಾಗಿ ಗಂಭೀರವಾಗಿ ಗಾಯಗೊಂಡಿರುವ ನಿದರ್ಶನಗಳು ಕಾಣಿಸುತ್ತಿವೆ. ಈ ಹಿನ್ನೆಲೆಯಲ್ಲಿ ಸ್ಮಾರ್ಟ್ ಸಿಟಿ ಕಳಪೆ ಕಾಮಗಾರಿಯ ವಿರುದ್ಧ ಹೋರಾಟ ನಡೆಸುತ್ತಿರುವ ಎಲ್ಲಾ ಸಂಘ-ಸಂಸ್ಥೆಗಳ ಜೊತೆಗೆ ಗೆಳೆಯರ ಬಳಗ ಹೋರಾಟ ನಡೆಸಲು ಹಾಗೂ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲು ಒತ್ತಾಯಿಸುವ ತೀರ್ಮಾನಕ್ಕೆ ಬಂದಿದೆ.
ಅಂತೆಯೇ ನಗರದ ಹಲವೆಡೆ ಸ್ಮಾರ್ಟ್ ಸಿಟಿಯ ಅವಾಂತರದ ಕೆಲಸದ ಜಾಗದಲ್ಲಿ ಬೋರ್ಡ್ ಗಳನ್ನು ಅಳವಡಿಸುವ ಮೂಲಕ ಎಚ್ಚರಿಕೆಯಿಂದ ಓಡಾಡಿ “ನಿಮ್ಮ ಪ್ರಾಣಕ್ಕೆ ನೀವೇ ಜವಾಬ್ದಾರರು” ಎಂಬ ಫಲಕಗಳನ್ನು ಅಳವಡಿಸುವ ಕೆಲಸಕ್ಕೆ ಮುಂದಾಗುತ್ತಿದೆ ಎಂದು ಅನಿಲ್ ಕುಂಚಿ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಕೋಟ್ಯಾಂತರ ರೂಪಾಯಿ ಖರ್ಚು ಮಾಡಿ ಶಿವಮೊಗ್ಗ ನಗರದ ಕೆಲವು ವಾರ್ಡ್ ಗಳನ್ನು ಅಭಿವೃದ್ಧಿ ಮಾಡಿರುವ ಸ್ಮಾರ್ಟ್ ಸಿಟಿ ಕೆಲಸ ಉತ್ತಮವಾದದನ್ನು ನೀಡಿದ್ದಕ್ಕಿಂತ ಹೆಚ್ಚಾಗಿ ಅವಾಂತರವನ್ನು ಜನರ ಪ್ರಾಣವನ್ನೇ ಬಲಿ ತೆಗೆದುಕೊಳ್ಳುವ ವ್ಯವಸ್ಥೆಯನ್ನು ರೂಪಿಸಿರುವುದು ದುರಂತವೇ ಹೌದು. ಇಂತಹ ಭ್ರಷ್ಟವ್ಯವಸ್ಥೆಗೆ ಕಾರಣಕರ್ತರಾದ ಎಲ್ಲರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು. ಇಡೀ ಸ್ಮಾರ್ಟ್ ಸಿಟಿಯ ಎಲ್ಲಾ ಕಾಮಗಾರಿಗಳನ್ನು ಮತ್ತೊಮ್ಮೆ ಸಂಪೂರ್ಣವಾಗಿ ಪರಿಶೀಲಿಸಿ ಜನರಿಗೆ ಸೂಕ್ತ ಹಾಗೂ ಸುಭದ್ರತೆ ಇದ್ದರೆ ಮಾತ್ರ ಜನರು ಅಲ್ಲಿ ಓಡಾಡುವಂತೆ ಅವಕಾಶ ಮಾಡಬೇಕು. ಜನರ ಜೀವದ ಜೊತೆ ಆಟವಾಡುವ ಇಂತಹ ಯೋಜನೆಗಳು ಯಾರ ಯಾವ ಉದ್ದೇಶಕ್ಕೆ ಬಂದಿವೆಯೋ ಸೂಕ್ತ ಪರಿಶೀಲನೆ ಅಗತ್ಯವಿದ್ದು, ಆ ಸಂದರ್ಭದಲ್ಲಿ ಅಧಿಕಾರಿಗಳೊಂದಿಗೆ ಗೆಳೆಯರ ಬಳಗ ಸಹ ಕೈಜೋಡಿಸಿ ಇರುವ ಸಮಸ್ಯೆಗಳನ್ನು ಅವರ ಮುಂದಿಡುವ ನಿಟ್ಟಿನಲ್ಲಿ ಕೆಲಸ ಮಾಡುತ್ತದೆ ಎಂದಿದ್ದಾರೆ.