ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ತೀರ್ಥಹಳ್ಳಿ ಗ್ರಾಮೀಣ ಅಂಚೆ ನೌಕರರ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಕಾಂಗ್ರೆಸ್ ಬೆಂಬಲ
ತೀರ್ಥಹಳ್ಳಿ : ಕೇಂದ್ರ ಸರ್ಕಾರದ ಅಧೀನದಲ್ಲಿರುವ ಅಂಚೆ ಇಲಾಖೆಗೆ ೧೬೯ ವರ್ಷ ಕಳೆದಿದ್ದರೂ ಇಲಾಖೆಯಲ್ಲಿ ಜೀತ ಪದ್ಧತಿ, ಶೋಷಣೆ ನಡೆಯುತ್ತಿದೆ. ಬ್ರಿಟೀಷರ ಕಾಲದಲ್ಲಿ ಇದ್ದಂತಹ ಕಾನೂನು ಗ್ರಾಮೀಣ ಅಂಚೆ ನೌಕರರಿಗೆ ಆಡಳಿತ ವ್ಯವಸ್ಥೆ ಇನ್ನೂ ನಡೆಸಿಕೊಂಡು ಬರುತ್ತಿದೆ. ೪-೫ ಗಂಟೆ ನಿಗದಿಪಡಿಸಿ ೮-೧೦ ಗಂಟೆ ದಉಡಿಸಿಕೊಳ್ಳುವುದು, ೧೫ ರಿಂಧ ೧೬ ಹಳ್ಳಿಗೆ ಒಬ್ಬ ಪೋಸ್ಟ್ ರನ್ನು ನೇಮಿಸುವುದು, ಆತ ೪ ಗಂಟೆಗಳಲ್ಲಿ ೧೫ ಸೆಕೆಂಡಿನಂತೆ ೧ ಪತ್ರವನ್ನು ಬಟವಾಡೆ ಮಾಡುವಂತೆ ಕಾನೂನಿನಲ್ಲೇ ಇನ್ನೂ ಇದೆ. ಆದರೆ ಜಿಡಿಎಸ್ ನೌಕರರಿಗೆ ೩೦ ರಿಂದ ೪೦ ವರ್ಷಗಳ ಕಾಲ ಸೇವೆ ಸಲ್ಲಿಸಿದರೂ ಅವರಿಗೆ ಯಾವುದೇ ರೀತಿಯ ಸಾಮಾಜಿಕ ಭದ್ರತೆ ಇರುವುದಿಲ್ಲ ಎಂದು ಕೆಪಿಸಿಸಿ ಜಿಲ್ಲಾ ಕಾಂಗ್ರೆಸ್ ವಕ್ತಾರರಾದ ಪಡುವಳ್ಳಿ ಹರ್ಷೇಂದ್ರಕುಮಾರ್ ಹೋರಾಟಕ್ಕೆ ಬೆಂಬಲ ಸೂಚಿಸಿ ಕೇಂಧ್ರ ಬಿಜೆಪಿ ಸರ್ಕಾರದ ವಿರುದ್ಧ ಗುಡುಗಿದ್ದಾರೆ.
ಕೇಂದ್ರ ಸರ್ಕಾರ ನಮ್ಮ ಹೋರಾಟಕ್ಕೆ ಮಣಿದು ೨೦೧೬ ನೇ ಇಸವಿಯಲ್ಲಿ ಕಮಲೇಶ್ಚಂದ್ರ ಕಮಿಟಿ ಆಯೋಗ ನೇಮಕ ಮಾಡಿ ಗ್ರಾಮೀಣ ಅಂಚೆ ನೌಕರರ ಸ್ಥಿತಿಗತಿಗಳ ಬಗ್ಗೆ ವರದಿ ಕೇಳಿತು. ಆ ಕಮಿಟಿ ವರದಿ ಸಲ್ಲಿಸಿ ೬ ವರ್ಷಗಳು ಕಳೆದರೂ ಅದನ್ನು ಸಂಪೂರ್ಣವಾಗಿ ಜಾರಿಗೊಳಿಸದೇ ಕೇಂದ್ರ ಸರ್ಕಾರ ಮತ್ತು ಅಂಚೆ ಆಡಳಿತ ತಾರತಮ್ಯ ನೀತಿ ಅನುಸರಿಸುತ್ತಿದ್ದು, ಇದರ ವಿರುದ್ಧವಾಗಿ ಹೋರಾಟ ಮಾಡುವುದು ಅನಿವಾರ್ಯವಾಗಿದೆ ಎಂದು ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಡಿ. ಎಸ್. ವಿಶ್ವನಾಥ ಶೆಟ್ಟಿ ಹೇಳಿದರು.
ಕಳೆದ ದಿನಾಂಕ ೧೪-೬-೨೦೨೨ ರಂದು ದೆಹಲಿಯಲ್ಲಿ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ಸಂದರ್ಭದಲ್ಲಿ ಅದೇ ದಿನ ಪಿಜೆಸಿಎ ನಾಯಕರುಗಳೊಂದಿಗೆ ಅಂಚೆ ಅಧಿಕಾರಿಗಳು ಸಭೆ ನಡೆಸಿ ಇನ್ನು ಒಂದು ತಿಂಗಳೊಳಗಾಗಿ ಕಮಲೇಶ್ಚಂದ್ರ ಕಮಿಟಿಯ ವರದಿಯನ್ನು ಜಾರಿಗೊಳಿಸಿ ಈಡೇರಿಸುತ್ತೇವೆ ಎಂದು ಭರವಸೆ ನೀಡಿದ್ದರಿಂದ ಉಪವಾಸ ಸತ್ಯಾಗ್ರಹ ನಿಲ್ಲಿಸಿದ್ದೆವು. ಆದರೆ ಕಮಲೇಶ್ಚಂಧ್ರ ಕಮಿಟಿ ವರದಿ ಸಲ್ಲಿಸಿ ೫ ವರ್ಷಗಳು ಕಳೆದರೂ ಕೆಲವೊಂದು ಬೇಡಿಕೆಗಳನ್ನು ಈಡೇರಿಸದೇ ಇರುವುದರಿಂದ ಹೋರಾಟ ಮಾಡುವುದು ಅನಿವಾರ್ಯವಾಗಿದೆ.
ಕೇಂದ್ರ ಸರ್ಕಾರ ಮತ್ತು ಅಂಚೆ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ನಮ್ಮ ನ್ಯಾಯಯುತ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ ನಮ್ಮ ಕೇಂದ್ರ ಸಂಘಟನೆಯು, ಅಧಿಕಾರಿಗಳಿಗೆ ಸಾಕಷ್ಟು ಬಾರಿ ಮನವಿಪತ್ರ ಸಲ್ಲಿಸಿದ್ದರೂ ಸಹ ಇಲಾಖೆ ಮತ್ತು ಸರ್ಕಾರ ಯಾವುದೇ ರೀತಿಯಲ್ಲಿ ನಮಗೆ ಸ್ಪಂದಿಸುತ್ತಿಲ್ಲ. ಆದಕಾರಣ ದಿನಾಂಕ ೧೦-೮-೨೦೨೩ ರಂದು ವಿಭಾಗ ಮಟ್ಟದಲ್ಲಿ ಒಂದು ದಿನದ ಧರಣಿ ಸತ್ಯಾಗ್ರಹವನ್ನು ಮತ್ತು ದಿನಾಂಕ ೧೨-೯-೨೦೨೩ ರಂದು ಸಿಪಿಎಂಜಿ ಕಛೇರಿ ಮುಂದೆ ಒಂದು ದಿನ ಧರಣಿ ಸತ್ಯಾಗ್ರಹ ಮಾಡಲಾಯಿತು. ಆದರೂ ಸಹ ಸರ್ಕಾರ ಮತ್ತು ಇಲಾಖೆ ನಮ್ಮ ಬೇಡಿಕೆಗಳನ್ನು ಈಡೇರಿಸಿರುವುದಿಲ್ಲ.
ನಮ್ಮ ಬೇಡಿಕೆಗಳನ್ನು ಈಡೇರಿಸುವ ಸಲುವಾಗಿ ದಿನಾಂಕ ೧೨-೧೨-೨೦೨೩ ರಿಂದ ಕೇಂದ್ರ ಸಂಘಟನೆಯ ಕರೆಯ ಮೇರೆಗೆ ಅನಿರ್ದಿಷ್ಟಾವಧಿ ಮುಷ್ಕರ ನಡೆಸುತ್ತಿದ್ದು, ತೀರ್ಥಹಳ್ಳಿ ಮುಖ್ಯ ಅಂಚೆ ಕಛೇರಿ ಮುಂಭಾಗ ಅನಿರ್ದಿಷ್ಟಾವಧಿ ಮುಷ್ಕರ ನಡೆಸುತ್ತಿದ್ದು, ೩ನೇ ದಿನಕ್ಕೆ ಕಾಲಿಟ್ಟಿದೆ.
ಈ ಮುಷ್ಕರದಲ್ಲಿ ಪಾಲ್ಗೊಂಡ ರಾಷ್ಟ್ರೀಯ ಯುವ ಕಾಂಗ್ರೆಸ್ ವಕ್ತಾರರಾದ ಆದರ್ಶ ಹುಂಚದಕಟ್ಟೆ, ನ್ಯಾಯಯುತವಾದ ಈ ಬೇಡಿಕೆಗಳನ್ನು ಕೇಂದ್ರ ಸರ್ಕಾರವು ಕೂಡಲೇ ಪರಿಗಣಿಸಬೇಕು ಎಂದರು.
ವಿವಿಧ ಬೇಡಿಕೆಗಳಾದ ೧) ೮ ಘಂಟೆಗಳ ಕಾಲ ಕೆಲಸ ನೀಢುವುದು ಮತ್ತು ಪಿಂಚಣಿ ಸೇರಿದಂತೆ ಎಲ್ಲಾ ಸವಲತ್ತುಗಳನ್ನು ಒದಗಿಸುವುದು. ೨) ಸೇವಾ ಹಿರಿತನದ ಆಧಾರದ ಮೇರೆಗೆ ೧೨,೨೪,೨೬ ವರ್ಷಗಳ ಕಾಲ ಸೇವೆ ಸಲ್ಲಿಸಿದ ನೌಕರರಿಗೆ ಸೇವಾ ಹಿರಿತನದ ಆಧಾರದ ಮೇಲೆ ವಿಶೇಷ ಇನ್ಕ್ರಿಮೆಂಟ್ ನೀಡುವುದು. ೩) ಜಿ.ಡಿ.ಎಸ್. ಗ್ರಾಚ್ಯುಯಿಟಿ ಹಣ ರೂ.೧.೫ ಲಕ್ಷಗಳ ಮಿತಿ ತೆಗೆದು ಹಾಕಿ ಶ್ರೀ ಕಮಲೇಶ್ ಚಂದ್ರ ಸಮಿತಿ ಶಿಫಾರಸ್ಸು ಮಾಡಿದಂತೆ ರೂ. ೫ ಲಕ್ಷ ದವರೆಗೆ ಹೆಚ್ಚಿಸುವುದು. ೪)ಗ್ರೂಪ್ ಇನ್ಸೂರೆನ್ಸ್ ಕವರೇಜ್ ರೂ. ೫ ಲಕ್ಷ ದವರೆಗೆ ಹೆಚ್ಚಿಸುವುದು. ೫) ೧೮೦ ದಿನಗಳ ಕಾಲ ರಜೆ ಉಳಿಸಿಕೊಳ್ಳುವ ಸೌಲಭ್ಯ ಕಲ್ಪಿಸುವುದು. ೬) ಜಿ.ಡಿ.ಎಸ್. ಮತ್ತು ಅವರ ಕುಟುಂಬದ ಸದಸ್ಯರಿಗೆ ವೈದ್ಯಕೀಯ ಸೌಲಭ್ಯ ಒದಗಿಸುವುದು. ಈ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಮುಷ್ಕರ ನಡೆಸಲಾಗುತ್ತಿದೆ.
ಈ ಮುಷ್ಕರದಲ್ಲಿ ಶಿವಮೊಗ್ಗ ವಿಭಾಗೀಯ ಅಧ್ಯಕ್ಷರಾದ ಹೆಚ್. ಜಿ. ವೆಂಕಟೇಶ್, ಎಐಜಿಡಿಎಸ್ಯು ಕಾರ್ಯದರ್ಶಿ ಭಾಸ್ಕರ್ ಶೆಟ್ಟಿ, ವಿಭಾಗೀಯ ಖಜಾಂಚಿ ರಾಮಪ್ಪ ನಾಯಕ್, ಉಪಾಧ್ಯಕ್ಷರಾದ ನರೇಂದ್ರ ಎಂ. ಅಡಿಗ, ಜಾನಕಿ, ಟಿ.ಎಂ. ಶಿವಾನಂದ, ರವೀಶ, ಅರುಣ್ ಭಟ್ ೨೦೦ ಕ್ಕೂ ಹೆಚ್ಚು ಗ್ರಾಮೀಣ ಅಂಚೆ ನೌಕರರು ಪಾಲ್ಗೊಂಡಿದ್ದರು.