ಶಿವಮೊಗ್ಗ : ಬದುಕಿನಲ್ಲಿ ಎದುರಾಗುವ ಪ್ರತಿಯೊಂದು ಅವಮಾನಗಳನ್ನು ಮೀರಿ ನಿಲ್ಲುವ ಆತ್ಮವಿಶ್ವಾಸ ನಿಮ್ಮದಾಗಬೇಕಿದೆ ಎಂದು ಕುವೆಂಪು ವಿಶ್ವವಿದ್ಯಾಲಯದ ಪರೀಕ್ಷಾಂಗ ಕುಲಸಚಿವರಾದ ಪ್ರೊ.ಎಸ್.ಎಂ.ಗೋಪಿನಾಥ ಅಭಿಪ್ರಾಯಪಟ್ಟರು.

ನಗರದ ಎಸ್.ಆರ್.ನಾಗಪ್ಪಶೆಟ್ಟಿ ಸ್ಮಾರಕ ರಾಷ್ಟ್ರೀಯ ಅನ್ವಯಿಕ ವಿಜ್ಞಾನ ಕಾಲೇಜಿನ ವತಿಯಿಂದ ಅಂಬೇಡ್ಕರ್ ಭವನದಲ್ಲಿ ಪ್ರಥಮ ವರ್ಷದ ಬಿಸಿಎ ಹಾಗೂ ಬಿಎಸ್ಸಿ ವಿದ್ಯಾರ್ಥಿಗಳಿಗಾಗಿ ಏರ್ಪಡಿಸಿದ್ದ ಅಭಿವಿನ್ಯಾಸ (ಓರಿಯಂಟೇಷನ್) ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಅನುಭವದಿಂದ ಮಾತ್ರ ಬದುಕಿನಲ್ಲಿ ನಿಜವಾದ ಪರಿಪಕ್ವತೆ ಸಾಧ್ಯ. ಅಂತಹ ಪರಿಪಕ್ವತೆಯನ್ನು ಯಾವುದೇ ಪುಸ್ತಕಗಳು ನೀಡಲಾರದು. ಅವಮಾನಕ್ಕೆ ಒಳಗಾದ ವ್ಯಕ್ತಿ ಮಾತ್ರ ಸನ್ಮಾನಕ್ಕೆ ನಿಜವಾಗಿಯೂ ಅರ್ಹ. ಅಂತಹ ಅವಮಾನಗಳನ್ನು ಸಮರ್ಥವಾಗಿ ಎದುರಿಸಿ.

ಕಲಿಕೆಯಲ್ಲಿ ಯಾರು ದಡ್ಡರಲ್ಲ, ಕಲಿಕೆಯ ಸ್ಥಿತಿ ನಿಧಾನವಾಗಿರುತ್ತದೆ. ಅಂತಹ ಕಲಿಕಾ ಗುಣಮಟ್ಟವನ್ನು ಪೋಷಕರು ಮತ್ತು ಶಿಕ್ಷಕ ವರ್ಗ ಅವಲೋಕಿಸಿ ಕಲಿಕೆಯ ಪ್ರೇರಣಾ ವಿಧಾನಗಳನ್ನು ಬಳಸಿ.

ಪದವಿ ಹಂತದಲ್ಲಿ ನಿಮ್ಮ ಗುರಿಯನ್ನು ಸೇರುವ ತವಕ‌ ನಿಮ್ಮದಾಗಬೇಕಿದೆ. ಪೋಷಕರ ಕಷ್ಟಗಳಿಗೆ ಹೆಗಲು ನೀಡುವ ಜವಾಬ್ದಾರಿ ನಿಮ್ಮಲ್ಲಿ ಬರಬೇಕು. ಸಮಾಜಮುಖಿ ಚಿಂತನೆಗಳ ಮನೋಭೂಮಿಕೆ ನಿಮ್ಮದಾಗಲಿ ಎಂದು ವಿದ್ಯಾರ್ಥಿಗಳಿಗೆ ಹೇಳಿದರು.

ರಾಷ್ಟ್ರೀಯ ಶಿಕ್ಷಣ ಸಮಿತಿ ಅಧ್ಯಕ್ಷರಾದ ಜಿ.ಎಸ್.ನಾರಾಯಣರಾವ್ ಮಾತನಾಡಿ, ಹೇಗೆ ದೀಪ ತಾನು ಬೆಳಗಿ ಇತರರಿಗೆ ಬೆಳಕು ನೀಡುತ್ತದೆಯೊ, ಹಾಗೆಯೇ ಶಿಕ್ಷಕರು ತಾನು ಕಲಿತು ಇತರರಿಗೂ ಕಲಿಸುತ್ತಾರೆ. ಅಂತಹ ಶಿಕ್ಷಕರಿಗೆ ಸದಾ ಕೃತಜ್ಞರಾಗಿರಬೇಕು.

ತಂದೆ ತಾಯಿಯ ಕೊಡುಗೆ ಎಂದಿಗೂ ಮರೆಯಲಾಗದು. ತಾಯಿ ತನ್ನ ಮಕ್ಕಳಿಗೆ ಆ ಹೊತ್ತಿನ ಅವಶ್ಯಕತೆ ಪೂರೈಸಿದರೆ, ತಂದೆ ನಾಳೆಯ ಅವಶ್ಯಕತೆಗಳನ್ನು ಪೂರೈಸುತ್ತಾರೆ. ಪೋಷಕರು ಹೆಮ್ಮೆ ಪಡುವ ಮಕ್ಕಳಾಗಿ ಬಾಳಿ. ಉತ್ತಮ ಸಂಸಾರ ಮತ್ತು ಸಂಸ್ಕಾರ ನಿಮ್ಮದಾಗಲಿ.

ವಿದ್ಯಾರ್ಥಿಗಳು ಸಮಾಜವನ್ನು ದೀರ್ಘವಾಗಿ ಅಧ್ಯಯನ ಮಾಡಬೇಕಿದೆ. ವೃತ್ತ ಪತ್ರಿಕೆಗಳು ನಮ್ಮ ಬದುಕಿಗೆ ನಿಜವಾದ ಪ್ರೇರಣೆ ನೀಡುತ್ತದೆ. ಪ್ರಾಮುಖ್ಯತೆ ಅಧಾರಿತ ಸುದ್ದಿಗಳನ್ನು ನೀಡುವ ವೃತ್ತ ಪತ್ರಿಕೆಗಳು ಸಮಾಜದ ಅಧ್ಯಯನಕ್ಕೆ ಪೂರಕವಾಗಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಎಸ್.ಆರ್.ಎನ್.ಎಂ ಕಾಲೇಜಿನ ಪ್ರಾಂಶುಪಾಲರಾದ ಡಾ.ಕೆ‌.ಎಲ್.ಅರವಿಂದ ಅಧ್ಯಕ್ಷತೆ ವಹಿಸಿದ್ದರು. ವಿದ್ಯಾರ್ಥಿನಿ ಸಂಗೀತ ಪ್ರಾರ್ಥಿಸಿ, ಉಪನ್ಯಾಸಕರಾದ ಲಕ್ಷ್ಮಣ್ ಸ್ವಾಗತಿಸಿ, ಡಾ.ಮುಕುಂದ ನಿರೂಪಿಸಿದರು

By admin

ನಿಮ್ಮದೊಂದು ಉತ್ತರ

error: Content is protected !!