ಸಾಗರ : ಕಾವೇರಿ ನದಿನೀರನ್ನು ಕಾನೂನು ಹೋರಾಟದ ಮೂಲಕ ತಮಿಳುನಾಡಿಗೆ ಹರಿಸುವುದನ್ನು ನಿಲ್ಲಿಸುವಂತೆ ಒತ್ತಾಯಿಸಿ ಶುಕ್ರವಾರ ವಕೀಲರ ಸಂಘದ ವತಿಯಿಂದ ಉಪವಿಭಾಗಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.


ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಹಿರಿಯ ನ್ಯಾಯವಾದಿ ಈಶ್ವರಪ್ಪ ನಾಯ್ಕ್, ತಮಿಳುನಾಡಿನಲ್ಲಿರುವ ಅನಧಿಕೃತ ಕೃಷಿಭೂಮಿಗೆ ನೀರು ಪಡೆಯಲು ತಮಿಳುನಾಡು ಸರ್ಕಾರ ಇನ್ನಿಲ್ಲದ ಹೋರಾಟ ನಡೆಸುತ್ತಿದೆ. ತಮಿಳುನಾಡಿನಲ್ಲಿ ಪಟ್ಟಾ ಭೂಮಿಗಿಂತ ಅನಧಿಕೃತ ಭೂಮಿಯಲ್ಲಿಯೆ ಹೆಚ್ಚು ಕೃಷಿ ಮಾಡಲಾಗುತ್ತಿದೆ. ಈ ಅನಧಿಕೃತ ಭೂಮಿಯಲ್ಲಿ ಬೆಳೆಯುತ್ತಿರುವ ಬೆಳೆಯನ್ನು ರಕ್ಷಣೆ ಮಾಡಿಕೊಳ್ಳಲು ಕಾವೇರಿ ನೀರು ಹೆಚ್ಚು ಕೇಳುತ್ತಿದೆ. ಕೇಂದ್ರ ಸರ್ಕಾರ ತಮಿಳುನಾಡಿನಲ್ಲಿರುವ ಅಧಿಕೃತ ಕೃಷಿಭೂಮಿಯನ್ನು ಅಳತೆ ಮಾಡಿಸಬೇಕು. ಯಾವುದೇ ಕಾರಣಕ್ಕೂ ತಮಿಳುನಾಡಿಗೆ ರಾಜ್ಯದ ಹಿತವನ್ನು ಮರೆತು ಒಂದು ಹನಿ ನೀರು ಹರಿಸಬಾರದು ಎಂದು ಒತ್ತಾಯಿಸಿದರು.


ಇನ್ನೋರ್ವ ನ್ಯಾಯವಾದಿ ರವೀಶ್ ಕುಮಾರ್ ಮಾತನಾಡಿ, ಕಾವೇರಿ ಜಿಲ್ಲೆಗಳಿಗೆ ಮಾತ್ರ ಹೋರಾಟ ಸೀಮಿತ ಎಂದು ನಾವು ಮೈಮರೆಯುವಂತಿಲ್ಲ. ಬೆಂಗಳೂರಿಗೆ ಕಾವೇರಿ ನದಿ ನೀರು ಹರಿಯದೆ ಹೋದರೆ

ರಾಜ್ಯದ ದೃಷ್ಟಿ ನಮ್ಮ ಜಿಲ್ಲೆಯ ಶರಾವತಿ ನದಿಯ ಮೇಲೆ ಬೀಳುವ ಅಪಾಯ ಇಲ್ಲದಿಲ್ಲ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಕಾವೇರಿ ನದಿನೀರನ್ನು ಕಾಪಾಡಿಕೊಳ್ಳುವತ್ತ ಎಷ್ಟು ಗಮನ ಹರಿಸುತ್ತಿದೆಯೋ, ತಾಲ್ಲೂಕಿನವರಾದ ನಾವು ನಮ್ಮ ಶರಾವತಿ ನದಿ ನೀರು ಬೇರೆ ಕಡೆ ಹೋಗದಂತೆ ಎಚ್ಚರಿಕೆ ವಹಿಸಲು ಇಂತಹ ಹೋರಾಟದಲ್ಲಿ ಪಾಲ್ಗೊಳ್ಳುವುದು ಅತ್ಯಾಗತ್ಯ ಎಂದರು.


ವಕೀಲರ ಸಂಘದ ಅಧ್ಯಕ್ಷ ನಾಗರಾಜ್ ಈ., ಕಾರ್ಯದರ್ಶಿ ರಮೇಶ್ ಎಚ್.ಬಿ., ಖಜಾಂಚಿ ಕಿರಣಕುಮಾರ್ ಎಸ್., ಪ್ರಮುಖರಾದ ಕೆ.ವಿ.ಪ್ರವೀಣಕುಮಾರ್, ಅಬ್ದುಲ್ ರಶೀದ್, ಜ್ಯೋತಿ ಕೋವಿ, ಪರಿಮಳ, ಕೆ.ಎನ್.ಶ್ರೀಧರ್, ಎಚ್.ಆರ್.ಶ್ರೀಧರ್, ಎಂ.ರಾಘವೇಂದ್ರ, ಸುದರ್ಶನ್, ಎಚ್.ಬಿ.ರಾಘವೇಂದ್ರ, ಪ್ರೇಮ್ ಸಿಂಗ್, ವಿನಯಕುಮಾರ್ ಇನ್ನಿತರರು ಹಾಜರಿದ್ದರು.

By admin

ನಿಮ್ಮದೊಂದು ಉತ್ತರ

You missed

error: Content is protected !!