ಶಿವಮೊಗ್ಗ: ಅಕ್ಲಾಪುರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ನೂತನ ಕಟ್ಟಡ ನಿರ್ಮಾಣವಾಗಬೇಕುಮತ್ತು ಮೂಲಭೂತ ಸೌಕರ್ಯ ನೀಡಲು ಆಗ್ರಹಿಸಿ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವರಿಗೆ ಶಾಲಾಭಿವೃದ್ಧಿ ಸಮಿತಿ ಸದಸ್ಯರು ಮತ್ತು ಗ್ರಾಮಸ್ಥರು ಮನವಿ ಸಲ್ಲಿಸಿದರು.
ಸದರಿ ಶಾಲೆಯು ೧೯೪೬ರಲ್ಲಿ ಸ್ಥಾಪನೆಯಾಗಿದ್ದು, ಶಾಲಾ ಕಟ್ಟಡ ಶಿಥಿಲಗೊಂಡಿದ್ದು, ಶಾಲೆಗೆ ಶೌಚಾಲಯ ಹಾಗೂ ಕಾಂಪೌಂಡ್ ಇರುವುದಿಲ್ಲ. ಸದರಿ ಶಾಲೆಯಲ್ಲಿ ಬಡ ಮತ್ತು ಮಧ್ಯಮ ವರ್ಗದ ಮಕ್ಕಳೇ ವಿದ್ಯಾಭ್ಯಾಸ ಮಾಡುತ್ತಿದ್ದು, ಸುತ್ತಮುತ್ತಲ ಗ್ರಾಮಗಳಲ್ಲಿ ಬೇರೆ ಯಾವುದೇ ಶಾಲೆ ಇರುವುದಿಲ್ಲ.
ಈಗಾಗಲೇ ಶಿಕ್ಷಣ ಇಲಾಖೆ ಅಧಿಕಾರಿಗಳು ಮತ್ತು ಇನ್ನಿತರ ಆಡಳಿತ ವರ್ಗದಿಂದ ಶಾಲಾ ಕಟ್ಟಡದ ಪರಿಶೀಲನೆ ನಡೆದಿದೆ. ತಾತ್ಕಾಲಿಕ ದುರಸ್ತಿ ಮಾಡಲಾಗಿದ್ದು, ಕಟ್ಟಡ ಪೂರ್ಣವಾಗಿ ರಿಪೇರಿ ಆಗಿರುವುದಿಲ್ಲ. ತೀರ್ಥಹಳ್ಳಿ ತಾಲೂಕಿನ ಅಗ್ರಹಾರ ಹೋಬಳಿಯ ಅಕ್ಲಾಪುರ ಗ್ರಾಮದ ಸರ್ವೆ ನಂ. ೫ರಲ್ಲಿ ಈ ಶಾಲೆ ಇದ್ದು, ಶಾಲೆಯ ಮಾಲೀಕತ್ವ ಪಹಣಿಯಲ್ಲಿ ನಮೂದಾಗಿರುವುದಿಲ್ಲ.
ಕೂಡಲೇ ಶಾಲೆಗೆ ಆಧುನಿಕ ಶಿಕ್ಷಣದ ಭಾಗವಾಗಿ ಗಣಕೀಕೃತ ಶಿಕ್ಷಣ ವ್ಯವಸ್ಥೆ ಹಾಗೂ ಮೂಲಭೂತ ಸೌಕರ್ಯ ಒದಗಿಸಬೇಕು.
ನವೀನ ಕಟ್ಟಡ ಮಂಜೂರು ಮಾಡಿ ಸುಸಜ್ಜಿತ ಕಾಂಪೌಂಡ್ ಹಾಗೂ ಶೌಚಾಲಯ ನಿರ್ಮಿಸಿಕೊಡಬೇಕೆಂದು ಸಮಿತಿ ಮನವಿಯಲ್ಲಿ ಒತ್ತಾಯಿಸಿದೆ.
ಈ ಸಂದರ್ಭದಲ್ಲಿ ವಕೀಲರಾದ ಶ್ರೀಪಾಲ್, ಶಾಲಾಭಿವೃದ್ಧಿ ಸಮಿತಿ ಸದಸ್ಯರು ಉಪಸ್ಥಿತರಿದ್ದರು