ಶಿವಮೊಗ್ಗ : ಪ್ರಜ್ಞಾವಂತ ಸಮಾಜ ನಿರ್ಮಾಣ ಮಾಡುವಲ್ಲಿ ಬಹುತ್ವದ ಭಾರತಕ್ಕೆ ಸಾರ್ವಜನಿಕ ಶಿಕ್ಷಣ ಶೋಭೆ ತರಲಿದೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಿ.ಮಂಜುನಾಥ ಅಭಿಪ್ರಾಯಪಟ್ಟರು.

ಶಿವಮೊಗ್ಗ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು, ಕರ್ನಾಟಕ ಜಾನಪದ ಪರಿಷತ್ತು, ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ವತಿಯಿಂದ ಕುಂಸಿಯ ಶ್ರೀಮತಿ ಇಂದಿರಾ ಗಾಂಧಿ ಅವರ ಸ್ಮಾರಕ ವಸತಿ ಶಾಲೆ ಸಭಾಂಗಣದಲ್ಲಿ ಶನಿವಾರ ಮತ್ತು ಭಾನುವಾರ ಏರ್ಪಡಿಸಿದ್ದ ಎರಡು ದಿನಗಳ ಗೀತ ಗಾಯನ ಕಲಿಕಾ ಶಿಬಿರವನ್ನು ಗಿಡಕ್ಕೆ ನೀರೆರೆಯುವ ಮೂಲಕ ಉದ್ಘಾಟಿಸಿ ಮಾತನಾಡಿದರು.

ಸ್ವಾತಂತ್ರ್ಯ ದಿನೋತ್ಸವದ ಸಿದ್ದತೆಯಲ್ಲಿ ದೇಶ ತಲ್ಲೀನವಾಗಿದೆ. ಬಹುತ್ವದ ಭಾರತದಲ್ಲಿ ಭಾವೈಕ್ಯತೆಗೆ ದಕ್ಕೆಬಾರದಂತೆ ಪರಸ್ಪರ ಗೌರವ, ವಿಶ್ವಾಸದಿಂದ ಬದುಕುವ ಸಹಿಷ್ಣುತೆ ಕರಗತ ಮಾಡಿಸಬೇಕಾದ ತುರ್ತು ನಮ್ಮೆದುರಿಗಿದೆ. ವಿಭಿನ್ನ ಕುಟುಂಬ, ಜಾತಿ, ಧರ್ಮ ಮೀರಿ ನಾವೆಲ್ಲರೂ ಕನ್ನಡಮ್ಮನ ಮಕ್ಕಳಾಗಿ ಭಾರತಾಂಬೆಯ ತನುಜಾತೆಯಾಗಿ ಬಾಳುತ್ತಿದ್ದೇವೆ. ಅದರೇ ನಾವೆಲ್ಲರೂ ಒಂದು, ನಾವು ಮನುಜರು ಎನ್ನುವ ಆಶಯಕ್ಕೆ ಸವಾಲುಗಳು ಎದುರಾಗಿವೆ.

ರಾಜಕಾರಣ ಸದಾ ಒಡಕು ಬಯಸುತ್ತಿದೆ. ನೀವು ವಿದ್ಯಾರ್ಥಿಗಳು ಅಂತಹ ವಿಷಯಗಳನ್ನು ಓದಿ ಕೇಳಿ ಅರಿಯಿರಿ ಮತ್ತು ಪ್ರಶ್ನೆ ಮಾಡಿ ಯೋಚಿಸಿದ ನಂತರ ತೀರ್ಮಾನ ತೆಗೆದುಕೊಳ್ಳಿ. ಆಗ ನಾವು ಪ್ರಜ್ಞಾವಂತ ಸಮಾಜ ನೋಡಲು ಸಾಧ್ಯ.

ಶಿಕ್ಷಣ ಧರ್ಮದ ಹಿತಕಾಯುವ ಅಥವಾ ಜಾತಿಯ ಹಿತಕಾಯುವ ಅಸ್ತ್ರವಾಗಬಾರದು. ಅವೆಲ್ಲವನ್ನೂ ಮೀರಿದಾಗ ಮಾತ್ರ ಮನುಜರಾಗುವ ಅರ್ಹತೆ ಬರುತ್ತದೆ. ನಾವು ನಿಜವಾದ ಮನುಷ್ಯರಾಗೋಣ. ಅದರಲ್ಲಿ ನಿಮ್ಮ ರಾಜಕಾರಣ ಬೆಸೆಯಬೇಡಿ. ಸುತ್ತಲಿನ ಆಗು ಹೋಗುಗಳನ್ನು ಸೃಜನಾತ್ಮಕವಾಗಿ ಯೋಚಿಸಿ ಎಂದು ವಿವರಿಸಿದವರು.

ಪ್ರಾಂಶುಪಾಲರಾದ ಅನಿಲ್ ಕುಮಾರ್ ವಿ.ಜಿ. ಮಾತನಾಡಿ, ನಮ್ಮ ವಸತಿ ಶಾಲೆಯಲ್ಲಿ ಹಳ್ಳಿ ಮಕ್ಕಳು ಇದ್ದಾರೆ. ಅವರಿಗೆ ಕಲಿಕೆ ಎನ್ನುವುದು ಹೋರಾಟವಾಗಿದ್ದು, ಅಂತಹ ಕಲಿಕೆಗೆ ಪ್ರೇರಣೆಯಾಗಿ ಈ ಕಾರ್ಯಕ್ರಮ ಸಾಧಕವಾಗಿದೆ ಎಂದು ಹೇಳಿದರು.

ತಾಲ್ಲೂಕು ಕಸಾಪ ಅಧ್ಯಕ್ಷರಾದ ಮಹಾದೇವಿ ಅಧ್ಯಕ್ಷತೆ ವಹಿಸಿದ್ದರು. ಗಾಯಕರಾದ ನಳಿನಾಕ್ಷಿ, ಕರ್ನಾಟಕ ಜಾನಪದ ಪರಿಷತ್ತು ಭದ್ರಾವತಿ ತಾಲ್ಲೂಕು ಅಧ್ಯಕ್ಷರಾದ ರೇವಪ್ಪ, ಗಾಯಕಿ ಸುಶೀಲಾ ಷಣ್ಮಗಂ, ತಾಲ್ಲೂಕು ಕಸಾಪ ಕಾರ್ಯದರ್ಶಿ ಅನುರಾಧಾ, ಕುಂಸಿ ಹೋಬಳಿ ಕಸಾಪ ಅಧ್ಯಕ್ಷರಾದ ಶಿವಮೂರ್ತಿ, ಉಪನ್ಯಾಸಕರಾದ ಶಿವಕುಮಾರ, ಕುಸುಮಾ ವೇದಿಕೆಯಲ್ಲಿದ್ದರು.

ಒಂಬತ್ತನೆಯ ತರಗತಿಯ ಮಕ್ಕಳು ಪ್ರಾರ್ಥಿಸಿದರು. ಉಪನ್ಯಾಸಕಿ ಪ್ರಿಯಾಂಕಾ ಸ್ವಾಗತಿಸಿ, ಕನ್ನಡ ಉಪನ್ಯಾಸಕಿ ಲತಾ ನಿರೂಪಿಸಿ, ಪ್ರಿಯಾ ವಂದಿಸಿದರು.

By admin

ನಿಮ್ಮದೊಂದು ಉತ್ತರ

error: Content is protected !!