ತಾಲ್ಲೂಕಿನ ಚುನಾವಣಾ ಫಲಿತಾಂಶವನ್ನು ಕಾರ್ಯಕರ್ತರು ಹಾಗೂ ಮುಖಂಡರು ಜಾತಿ ಮಾನದಂಡದಲ್ಲಿ ಅಳೆಯಬಾರದು ಎಂದು ಶಾಸಕ ಬಿ.ವೈ.ವಿಜಯೇಂದ್ರ ಕಿವಿಮಾತು ಹೇಳಿದರು.
ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಭಾನುವಾರ ವಿವಿಧ ಗ್ರಾಮಗಳಿಂದ ಬಂದಿದ್ದ ಕಾರ್ಯಕರ್ತರು ಹಾಗೂ ಮುಖಂಡರ ಸಭೆಯಲ್ಲಿ ಅವರು ಮಾತನಾಡಿದರು.
ಕಾರ್ಯಕರ್ತರ ಶ್ರಮದಿಂದ ವಿಧಾನಸೌಧದ ಮೆಟ್ಟಿಲು ಹತ್ತಲು ನನಗೆ ಅವಕಾಶ ದೊರೆತಿದೆ. ಎಲ್ಲ ಧರ್ಮ ಹಾಗೂ ಜಾತಿಯ ಜನರು ಮತ ನೀಡಿದ್ದರಿಂದ ನಾನು ಗೆಲುವು ಸಾಧಿಸಲು ಸಹಕಾರಿಯಾಯಿತು. ಆದರೆ, ತಾಲ್ಲೂಕಿನ ಅಭಿವೃದ್ಧಿಗೆ ತಕ್ಕಂತೆ ನಾವು ನಿರೀಕ್ಷೆ ಮಾಡಿದಷ್ಟು
ಮತಗಳ ಅಂತರದಿಂದ ನಾನು ಗೆಲ್ಲಲು ಸಾಧ್ಯವಾಗಲಿಲ್ಲ ಎಂಬ ನೋವಿದೆ. ಆದರೆ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಒಂದು ಮತದ ಅಂತರದಿಂದ ಗೆದ್ದರೂ ಹಾಗೂ ಒಂದು ಲಕ್ಷದ ಅಂತರದಿಂದ ಗೆದ್ದರೂ ಅದನ್ನು ಗೆಲುವು ಎನ್ನಲಾ ಗುತ್ತದೆ. ಗ್ರಾಮಗಳಿಗೆ ಭೇಟಿ ನೀಡಿ ಗೆಲುವಿಗೆ ಸಹಕರಿಸಿದ ಮತದಾರರಿಗೆ ಕೃತಘ್ನತೆ ಸಲ್ಲಿಸುತ್ತೇನೆ’ ಎಂದರು.
ಬಿಜೆಪಿ ಮುಖಂಡ ಕೆ.ಎಸ್. ಗುರುಮೂರ್ತಿ, ’ತಾಲ್ಲೂಕಿನ ವಿರೋಧ ಪಕ್ಷಗಳು ನಡೆಸಿದ ಅಪಪ್ರಚಾರದ ಮಧ್ಯೆ ವಿಜಯೇಂದ್ರ ಗೆಲುವು ಸಾಧಿಸಿದ್ದಾರೆ. ವಿಜಯೇಂದ್ರ ಶಾಸಕರಾಗಿ ಉತ್ತಮ ಆಡಳಿತ ನೀಡುತ್ತಾರೆ. ವಿರೋಧ ಪಕ್ಷ ಗ್ಯಾರಂಟಿ ಕಾರ್ಡ್ ವಿತರಿಸುವ ಮೂಲಕ ಸುಳ್ಳು ಭರವಸೆ ನೀಡಿ ಅಧಿಕಾರಕ್ಕೆ ಬಂದಿದೆ. ಅವರು ಹೇಳಿದಂತೆ ಯೋಜನೆಗಳನ್ನು ನೀಡಿದರೇ ರಾಜ್ಯದ ಆರ್ಥಿಕ ಪರಿಸ್ಥಿತಿ ಅಲ್ಲೋಲ ಕಲ್ಲೋಲ ಆಗುತ್ತದೆ. ವೈಯಕ್ತಿಕ ಸೌಲಭ್ಯ ನೀಡಿದಾಗ ಅಭಿವೃದ್ಧಿ ಕುಂಠಿತವಾಗುತ್ತದೆ’ ಎಂದು ಟೀಕಿಸಿದರು.
ಮುಖಂಡರಾದ ಅಂಬಾರಗೊಪ್ಪ ಶೇಖರಪ್ಪ, ಟಿ.ಎಸ್.ಮೋಹನ್, ಕೆ.ಜಿ. ವಸಂತಗೌಡ, ಮಾರವಳ್ಳಿ ಚಂದ್ರೇಗೌಡ, ಶಾಂತಣ್ಣ ಉಪಸ್ಥಿತರಿದ್ದರು.