ಆನವಟ್ಟಿ: ಇಲ್ಲಿನ ಶಿವಶಕ್ತಿ ಟೇಡರ್ಸ್ ಅಂಗಡಿಗೆ ಬೆಂಕಿ ಬಿದ್ದಿದ್ದು, ಪರಿಣಾಮ ಅಂಗಡಿ ಸಂಪೂರ್ಣ ಭಸ್ಮವಾಗಿದೆ.
ಅಂಗಡಿಯಲ್ಲಿದ್ದ ಟೈರ್, ಪೇಂಟ್, ಆಯಿಲ್, ಕಬ್ಬಿಣ ಮಾರಾಟ ಮಾಡುವ ಅಂಗಡಿ ಇದಾಗಿದೆ. ಕಬ್ಬಿಣ ಕತ್ತರಿಸುವಾಗ ಯಂತ್ರದಿಂದ ಬರುವ ಬೆಂಕಿಕಿಡಿಗಳು ಆಯಿಲ್ ಅಥವಾ ಕೆಮಿಕಲ್ಗಳಿಗೆ ತಗುಲಿ ಈ ಬೆಂಕಿ ಅನಾಹುತ ಸಂಭವಿಸಿದೆ.
ಬೆಂಕಿ ಕಾಣಿಸಿಕೊಂಡ ತಕ್ಷಣವೇ ಅಗ್ನಿಶಾಮಕ ದಳಕ್ಕೆ ಕರೆ ಮಾಡಲಾಯಿತು. ೨೭ ಕಿ.ಮೀ. ದೂರದ ಸೊರಬ ಪಟ್ಟಣದಿಂದ ಆನವಟ್ಟಿಗೆ ಅಗ್ನಿಶಾಮಕ ದಳ ಸಿಬ್ಬಂದಿ ಆಗಮಿಸುವ ಹೊತ್ತಿಗೆ ಅಂಗಡಿ ಸಂಪೂರ್ಣ ಸುಟ್ಟುಹೋಗಿದೆ. ೨೦ ಲಕ್ಷಕ್ಕೂ ಹೆಚ್ಚು ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ.
ಆನವಟ್ಟಿ ಭಾಗದಲ್ಲಿ ಬಹಳಷ್ಟು ಬೆಂಕಿ ಅನಾಹುತಗಳು ಕಾಣಿಕೊಳ್ಳುತ್ತಿವೆ. ಹಲವು ವರ್ಷಗಳಿಂದ ಆನವಟ್ಟಿ ಭಾಗಕ್ಕೆ ಒಂದು ಅಗ್ನಿಶಾಮಕ ದಳ ವಾಹನ ವ್ಯವಸ್ಥೆ ಬೇಕು ಎಂಬ ಕೂಗು ಕೇಳುತ್ತಲೇ ಇದೆ. ಆದರೆ ಸಂಬಂಧಪಟ್ಟ ಇಲಾಖೆ ಹಾಗೂ ಸರ್ಕಾರ ಗಮನಹರಿಸಿಲ್ಲ ಎಂದು ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದರು.