ಶಿವಮೊಗ್ಗ: ಬಿಜೆಪಿಯವರಿಗೆ ಅಧಿಕಾರ ಸಿಕ್ಕಿದ್ದೂ, ಶಿವಮೊಗ್ಗದಲ್ಲಿ ಅಭಿವೃದ್ಧಿಗೆ ನಾಂದಿ ಹಾಕಿದ್ದು ಜೆಡಿಎಸ್-ಬಿಜೆಪಿ ಮೈತ್ರಿ ಸರ್ಕಾರದಲ್ಲಿ. ಹೀಗಾಗಿ ಶಿವಮೊಗ್ಗದ ಅಭಿವೃದ್ಧಿಯಲ್ಲಿ ನನ್ನ ಪಾಲೂ ಇದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಹೇಳಿದರು.
ಪಕ್ಷದ ಅಭ್ಯರ್ಥಿಗಳ ಪರ ಬುಧವಾರ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಬಿಜೆಪಿಯವರು ಅಮಾಯಕರ ಜೊತೆ ರಕ್ತದ ಓಕುಳಿ ಆಡುತ್ತಾ ಬಂದಿದ್ದಾರೆ. ಯಾವುದೇ ಹಬ್ಬ ಬಂದರು ರಕ್ತದೋಕುಳಿ ಆಗಬೇಕು. ಅದರ ಮೇಲೆ ಅಧಿಕಾರ ಕಟ್ಟೋರು ಬಿಜೆಪಿಗರು. ಬಡವರು ಅಮಾಯಕರ ಜೀವದ ಜೊತೆ ಚೆಲ್ಲಾಟವಾಡುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲೆಯ ಎರಡು ಕಾರ್ಖಾನೆಗಳು ಮುಚ್ಚಿ ಹೋಯಿತು. ನಮಗೆ ಬೆಂಬಲ ಕೊಟ್ಟರೆ ಕಾರ್ಖಾನೆ ಮುನ್ನಡೆಸಲು ಪ್ರಯತ್ನಿಸುತ್ತೇವೆ. ಜೆಡಿಎಸ್ ಗೆ ಅಧಿಕಾರ ಕೊಟ್ಟರೆ ಮುಳುಗಿಸಿದ ಎಪಿಎಂ, ವಿಐಎಸ್ಎಲ್ ಕಾರ್ಖಾನೆಯನ್ನು ಪುನರಾರಂಭಿಸಲಾಗುವುದು ಎಂದು ಭರವಸೆ ನೀಡಿದರು.
ಕಾಂಗ್ರೆಸ್ ಶಾಸಕರ ಕ್ಷೇತ್ರದಲ್ಲಿ ಅಭಿವೃದ್ಧಿ ಆಗಿದ್ದರೆ ನನ್ನ ಅವಧಿಯಲ್ಲಿ. ನನ್ನ ಅವಧಿಯಲ್ಲಿ ನಾನು ಕೊಟ್ಟ ಹಣದಿಂದ ಅಭಿವೃದ್ಧಿ ಆಗಿದೆ. ನಾನು ಅಭಿವೃದ್ಧಿಗೆ ಹಣ ಕೊಡದೇ 40% ಕಮೀಷನ್ ಹೊಡೆದಿದ್ದರೆ 10 ಸಾವಿರ ಕೋಟಿ ಹಣ ಹೊಡೆಯಬಹುದಿತ್ತು. ನನ್ನ ಅವಧಿಯಲ್ಲಿ ಲೂಟಿ ಹೊಡೆಯುವ ಕೆಲಸ ಮಾಡಲಿಲ್ಲ. ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇನೆ. ರೈತರ ಸಾಲ ಮನ್ನಾ ಮಾಡಿದ್ದೇನೆ. ಸಾರಾಯಿ ನಿಷೇಧ ಮಾಡಿದ್ದೇನೆ. ಈಗ ಏನು ನಡೆಯುತ್ತಿದೆ ? ಕ್ರಿಕೆಟ್ ಬೆಟ್ಟಿಂಗ್ ದಂಧೆ, ಆನ್ ಲೈನ್ ರಮ್ಮಿ ದಂಧೆ ನಡೆಯುತ್ತಿದೆ. ಈ ದಂಧೆಗಳಿಂದ ಕುಟುಂಬಗಳು ಬೀದಿ ಪಾಲಾಗುತ್ತಿವೆ. ಇದರ ವಿರುದ್ದ ಸರ್ಕಾರ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಮ್ಮ ಸರ್ಕಾರ ಬಂದರೆ ರೈತರ ಮಕ್ಕಳ ಶೈಕ್ಷಣಿಕ ಸಾಲ ಮನ್ನಾ ಮಾಡುತ್ತೇನೆ. ಎನ್ ಪಿಎಸ್ ಜಾರಿಗೆ ಬರಲು ಇದೇ ಎರಡು ರಾಷ್ಟ್ರೀಯ ಪಕ್ಷಗಳು ಕಾರಣ.ನನ್ನ ಸರ್ಕಾರ ಇನ್ನೊಂದು 6 ತಿಂಗಳು ಇದ್ದರೆ ಎನ್ ಪಿಎಸ್ ತೆಗೆದು ಒಪಿಎಸ್ ಮಾಡ್ತಿದ್ದೆ. ನನ್ನ ಬಿಟ್ಟು ಇವರು ಯಾರು ಮುಖ್ಯಮಂತ್ರಿ ಆಗಲು ಸಾಧ್ಯವಿಲ್ಲ. ದೇವರ ಆಶೀರ್ವಾದ ಜೆಡಿಎಸ್ ಪರವಾಗಿದೆ. ಮಾಧ್ಯಮಗಳ ಸರ್ವೇ ರಿಪೋರ್ಟ್ ನಂಬಬೇಡಿ. ಈ ಬಾರಿ ಜೆಡಿಎಸ್ 30-35 ಬರದೇ ಇದ್ದರೆ ಆವಾಗ ಪ್ರಶ್ನೆ ಮಾಡಿ. ಮತ ಎಲ್ಲಿಗೋ ಕೊಟ್ಟು ನನ್ನ ಬಳಿ ಒಪಿಎಸ್ ಮಾಡಿ ಅಂತಾ ಬರಬೇಡಿ ಎಂದರು
ಔರಾದ್ಕರ್ ವರದಿ ಜಾರಿಗೆ ತರಬೇಕು ಅಂತಿದ್ದೆ. ಅಷ್ಟರಲ್ಲಿ ನಮ್ಮ ಸರ್ಕಾರ ಹೋಯ್ತು. ಇವತ್ತು ಸೊರಬದಲ್ಲಿ ಹೆಚ್ವು ಜನ ಸೇರಿದ್ದರು. ಆ ಜನ ನೋಡಿದ್ದರೆ ನಾನೇ ಎಲ್ಲೋ ಹಿಂದೆ ಸರಿದೆ ಅನ್ಸುತ್ತೆ. ನಾನು ಇನ್ನು ಸ್ವಲ್ಪ ಸ್ಪೀಡ್ ಮಾಡಿದ್ದರೆ ಸೊರಬ ಗೆಲ್ಲಬಹುದಿತ್ತು. ಭದ್ರಾವತಿ ಹಾಗೂ ಶಿವಮೊಗ್ಗ ಗ್ರಾಮಾಂತರದಲ್ಲಿ ನಾವು ಗೆಲ್ಲುತ್ತೇವೆ. ನಮ್ಮ ಅಭ್ಯರ್ಥಿಗಳ ಪರ ನಿಮ್ಮ ಆಶೀರ್ವಾದ ಇರಲಿ. ಶಿವಮೊಗ್ಗ ಜಿಲ್ಲೆ ಜನ ಬಿಜೆಪಿಯನ್ನು ಸಂಪೂರ್ಣವಾಗಿ ಹೊರಗೆ ಹಾಕಬೇಕು ಎಂದರು.
ಕಾಂಗ್ರೆಸ್ ನವರು ಕೈಯಲ್ಲಿ ಕೊರೆಯುವವರು. ಬಿಜೆಪಿಯವರು ಜೆಸಿಬಿ, ಹಿಟಾಚಿ ಹಾಕಿಕೊಂಡು ಕೊರೆಯುತ್ತಿದ್ದಾರೆ. ಸಾಕು ಇನ್ನೆಷ್ಟು ಕೊರೆಯಲು ಬಿಡ್ತೀರಾ ಅವರಿಗೆ. ಕಳೆದ 10 ವರ್ಷದಲ್ಲಿ ಬಿಜೆಪಿಯವರ ಜೀವನ ಶೈಲಿ ಹೇಗಿದೆ ಗಮನಿಸಿ. ನಾನು ಅವರ ರೀತಿ ದೋಚಿದ್ದರೆ ರಾಜಕಾರಣ ಮಾಡಬಹುದಿತ್ತು. ನಾನು ಯಾವುದೇ ಶಿಕ್ಷಣ ಸಂಸ್ಥೆ, ಕಟ್ಟಡ ಆಸ್ತಿ ಮಾಡಿಲ್ಲ. ನನ್ನ ಮನೆ ಬಳಿ ರಾಜ್ಯದ ಹಲವೆಡೆಗಳಿಂದ ಸಹಾಯ ಕೇಳಿಕೊಂಡು ಬರ್ತಾರೆ. ಅವರಿಗೆಲ್ಲಾ ನಾನು ಎಲ್ಲಿಂದ ಸಹಾಯ ಮಾಡೋದು. ಜೆಡಿಎಸ್ ಗೆ 5 ವರ್ಷದ ಸ್ಪಷ್ಟ ಬಹುಮತದ ಸರ್ಕಾರ ಕೊಡಿ. ರಾಜ್ಯದ ಅಭಿವೃದ್ಧಿಗೆ ಪೂರಕವಾದ ಕೆಲಸಗಳನ್ನು ಮಾಡುತ್ತೇನೆ ಎಂದು ಆಶ್ವಾಸನೆ ನೀಡಿದರು.
ಮುಸ್ಲಿಂ ಸಮುದಾಯಕ್ಕೆ ಮೀಸಲಾತಿ ಕೊಟ್ಟಿದ್ದು ದೇವೇಗೌಡರು. ಬೇರೆ ಯಾವ ರಾಜ್ಯದಲ್ಲಿ ಮುಸ್ಲಿಂ ಸಮುದಾಯಕ್ಕೆ ಮೀಸಲಾತಿ ಇಲ್ಲ. ಮುಸ್ಲಿಂಮರ ಶೈಕ್ಷಣಿಕ, ಆರ್ಥಿಕ ದೃಷ್ಟಿಯಿಂದ ಮೀಸಲಾತಿ ಕೊಟ್ಟಿದ್ದು. ಮುಸ್ಲಿಂರು ಭಾರತೀಯರೆ. ಅವರೇನು ಹೊರಗಿನವರಲ್ಲ. ಮುಸ್ಲಿಂ ರಿಗೆ ನೀಡಲಾಗಿರುವ ಮೀಸಲಾತಿ ತೆಗೆಯಲು ಯಾರಿಂದಲೂ ಸಾಧ್ಯವಿಲ್ಲ. ಮುಸ್ಲಿಂರು ಹೆದರುವ ಅವಶ್ಯಕತೆ ಇಲ್ಲ. ಓಟು ಬ್ಯಾಂಕ್ ಗಟ್ಟಿ ಮಾಡಿಕೊಳ್ಳಲು ಮುಸ್ಲಿಂರ ಮೀಸಲಾತಿ ತೆಗೆದು ಲಿಂಗಾಯತರು, ಒಕ್ಕಲಿಗರಿಗೆ ಕೊಟ್ಟಿದ್ದಾರೆ ಎಂದರು.
ಮುಸ್ಲಿಂರ ಪರವಾಗಿ ಕೆಲಸ ಮಾಡಿದ್ದು ಜೆಡಿಎಸ್. ಬಿಜೆಪಿ ಜೊತೆ ಸರ್ಕಾರ ಮಾಡಿದ್ದೇವು. ಆದರೆ ಮುಸ್ಲಿಂ ಸಮಾಜಕ್ಕೆ ಧಕ್ಕೆಯಾಗಲು ಅವಕಾಶ ಕೊಟ್ಟಿಲ್ಲ. ಮಮತಾ ಬ್ಯಾನರ್ಜಿ ಬಿಜೆಪಿ ಜೊತೆ ಸರ್ಕಾರ ಮಾಡಿರಲಿಲ್ಲವಾ ? ತಮಿಳುನಾಡಿನವರು ಬಿಜೆಪಿ ಜೊತೆ ಸರ್ಕಾರ ರಚನೆ ಮಾಡಿರಲಿಲ್ಲವಾ ? ನಾನು ಕಾಂಗ್ರೆಸ್, ಬಿಜೆಪಿ ಯಾವುದೇ ಪಕ್ಷದ ಬಿ ಟಿಂ ಅಲ್ಲ. ನಮ್ಮದು ರೈತರು, ಬಡವರು, ಶ್ರಮಿಕರ ಪರವಾದ ಪಕ್ಷ ಎಂದರು.
ಕಾಂಗ್ರೆಸ್ ಜೊತೆ 14 ತಿಂಗಳ ಅಧಿಕಾರ ಮಾಡುವಾಗ ಪಟ್ಟ ಸಂಕಟ ನನಗೇ ಗೊತ್ತು. ನಾನು ಹಣ ಲೂಟಿ ಹೊಡೆಯುವ ಕೆಲಸ ಮಾಡಿಲ್ಲ. ಎರಡೂ ಬಾರಿ ಅಧಿಕಾರದಲ್ಲಿದ್ದಾಗ ಪ್ರಾಮಾಣಿಕನಾಗಿದ್ದೆ. ಪ್ರಧಾನಿ ನರೇಂದ್ರ ಮೋದಿ ತರಹ 25 ವರ್ಷ ಅಧಿಕಾರ ಕೇಳುವುದಿಲ್ಲ. ಈಗ ಅವರು ರಕ್ತದ ಕಾಲ ಕೊಡುತ್ತಿದ್ದಾರೆ. 2047 ರಲ್ಲಿ ಅಮೃತ ಕಾಲ ಕೊಡುತ್ತಾರಂತೆ. 5 ವರ್ಷ ಅಧಿಕಾರ ಕೊಟ್ಟು ನಮ್ಮನ್ನು ಪರೀಕ್ಷೆ ಮಾಡಿ. ಹೀಗಾಗಿ ಸ್ಪಷ್ಟ ಬಹುಮತ ಕೇಳುತ್ತಿದ್ದೇನೆ ಎಂದರು.
ಶಿವಮೊಗ್ಗದಲ್ಲಿ ಆಯನೂರು ಮಂಜುನಾಥ್ ಅವರನ್ನು ಆಯ್ಕೆ ಮಾಡುವುದರಿಂದ ಸರ್ವ ಜನಾಂಗದ ಶಾಂತಿಯ ತೋಟ ಆಗಲಿದೆ. ಮುಂದಿನ ದಿನಗಳಲ್ಲಿ ನಮ್ಮ ಸರ್ಕಾರದಲ್ಲಿ ಶಿವಮೊಗ್ಗ ಜಿಲ್ಲೆಯ ಇಬ್ಬರು ಮಂತ್ರಿ ಆಗಲಿದ್ದಾರೆ. ಶಿವಮೊಗ್ಗದ ಜನತೆಗೆ ಭರವಸೆ ನೀಡಿದರು.
ಶಿವಮೊಗ್ಗ ನಗರ ವಿಧಾನ ಸಭಾ ಕ್ಷೇತ್ರದ ಅಭ್ಯರ್ಥಿ ಆಯನೂರು ಮಂಜುನಾಥ್ ಮಾತನಾಡಿ, ಶಿವಮೊಗ್ಗ ತನ್ನ ಹೆಸರು ಕಳೆದುಕೊಂಡಿದೆ. ಸಣ್ಣಪುಟ್ಟ ವಿಷಯಗಳಿಗೂ ಕೋಮುಗಲಭೆ ನಡೆಯುತ್ತಿದೆ. ದಿನದ ಆದಾಯದಲ್ಲಿ ಬದುಕುವವರ ಸ್ಥಿತಿ ನೋಡಿ ಸಂಕಟವಾದರೆ, ಬಿಜೆಪಿ ಮುಖಂಡರ ಮಾತಿನಿಂದ ನಗರದಲ್ಕಿ ಅಶಾಂತಿ ವಾತಾವರಣ ಉಂಟಾಗುತ್ತಿತ್ತು. ಇದೇ ಈಶ್ವರಪ್ಪ ರಾತ್ರಿ ಹೊತ್ತು ಬಿರಿಯಾನಿ ತಿನ್ನೋದು, ಬೆಳಿಗ್ಗೆ ಎದ್ದು ಅದೇ ಈಶ್ವರಪ್ಪ ಹಲಾಲ್, ಜಟ್ಕಾ ಅಂತಿದ್ರು. ಅಜಾನ್ ಬಗ್ಗೆಯೂ ಅವಹೇಳನ ಮಾಡಿದರು. ಪೊಲೀಸ್ ಅಧಿಕಾರಿಗಳ ಸಂಯಮದಿಂದ ಕೆಲಸ ಮಾಡಿದ್ದಕ್ಕೆ ಶಿವಮೊಗ್ಗ ಶಾಂತವಾಗಿದೆ ಎಂದರು.
ಜೆಡಿಎಸ್ ಗ್ರಾಮಾಂತರ ಕ್ಷೇತ್ರದ ಅಭ್ಯರ್ಥಿ ಶಾರದಾ ಪೂರಾನಾಯ್ಕ, ಭದ್ರಾವತಿ ಅಭ್ಯರ್ಥಿ ಶಾರದಾ ಅಪ್ಪಾಜಿ, ತೀರ್ಥಹಳ್ಳಿ ಅಭ್ಯರ್ಥಿ ರಾಜಾರಾಂ ಯಡೂರು, ಜೆಡಿಎಸ್ ಜಿಲ್ಲಾಧ್ಯಕ್ಷ ಎಂ.ಶ್ರೀಕಾಂತ್, ಮಹಿಳಾ ಘಟಕದ ಅಧ್ಯಕ್ಷೆ ಗೀತಾ ಇತರರಿದ್ದರು.