ಶಿವಮೊಗ್ಗ: ರಾಜ್ಯಕ್ಕೆ ಅದೆಷ್ಟು ಬಾರಿ ಪ್ರಧಾನಿ ಮೋದಿ ಬಂದರೂ ಕಾಂಗ್ರೆಸ್ ಅಧಿಕಾರಕ್ಕೆ ಬರುವುದನ್ನು ತಪ್ಪಿಸಲು ಸಾಧ್ಯವೇ ಇಲ್ಲ ಎಂದು ತೀರ್ಥಹಳ್ಳಿಯ ಕಾಂಗ್ರೆಸ್ ಮುಖಂಡ ಆರ್.ಎಂ. ಮಂಜುನಾಥಗೌಡ ಹೇಳಿದರು.
ಪ್ರೆಸ್ ಟ್ರಸ್ಟ್ ನಲ್ಲಿ ಇಂದು ಆಯೋಜಿಸಿದ್ದ ಸಂವಾದದಲ್ಲಿ ಮಾತನಾಡಿದ ಅವರು, ಬೆಲೆ ಏರಿಕೆಗೆ ರಾಜ್ಯದ ಜನ ಬೇಸತ್ತು ಹೋಗಿದ್ದಾರೆ. ಬಿಜೆಪಿ ವಿರುದ್ಧ ಸಿಡಿದೇಳುತ್ತಿದ್ದಾರೆ. ಯುವಕರು ನಿರುದ್ಯೋಗ ಸಮಸ್ಯೆಗೆ ಒಳಗಾಗಿ ನಿರಾಶರಾಗಿದ್ದಾರೆ. ಅಡಿಕೆ ಬೆಳೆಗಾರರು ಬಿಜೆಪಿಗೆ ಶಾಪ ಹಾಕುತ್ತಿದ್ದಾರೆ. ಬಗರ್ ಹುಕುಂ ಮತ್ತು ಶರಾವತಿ ಸಂತ್ರಸ್ತರ ಗೋಳನ್ನು ಡಬಲ್ ಇಂಜಿನ್ ಸರ್ಕಾರ ಕೇಳುತ್ತಲೇ ಇಲ್ಲ. ಹೀಗಿರುವಾಗ ನರೇಂದ್ರ ಮೋದಿ ನೂರು ಬಾರಿ ಬಂದರೂ ಕರ್ನಾಟಕದಲ್ಲಿ ಬಿಜೆಪಿ ಗೆಲ್ಲಿಸಲು ಆಗುವುದಿಲ್ಲ ಎಂದರು.
ಡಬಲ್ ಇಂಜಿನ್ ಸರ್ಕಾರ ಕೇವಲ ಭಾವನೆಗಳ ಮೇಲೆ ಮತಗಳನ್ನು ಕೇಳುತ್ತಿದೆ. ಇದು ನಡೆಯುವುದಿಲ್ಲ. ಸಮಸ್ಯೆಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿವೆ. ಕೋವಿಡ್ ನಂತರದಲ್ಲಿ ಸಣ್ಣ ವ್ಯಾಪಾರಿಗಳು ಸೇರಿದಂತೆ ಯುವಕರು ಉದ್ಯೋಗ ಕಳೆದುಕೊಂಡು ಹಳ್ಳಿ ಸೇರಿದ್ದಾರೆ. ಅಲ್ಲಿ ಜೀವನ ಮಾಡಲಾಗದೇ ಹತಾಶರಾಗಿದ್ದಾರೆ. ಗೊಬ್ಬರದ ಬೆಲೆ ನಾಲ್ಕು ಪಟ್ಟು ಹೆಚ್ಚಾಗಿದೆ. ಶರಾವತಿ ಸಂತ್ರಸ್ತರು ಉಸಿರು ಬಿಗಿ ಹಿಡಿದು ಬಾಳುತ್ತಿದ್ದಾರೆ. ಮತ್ತೊಂದು ಕಡೆ ಪೊಲೀಸ್ ಇಲಾಖೆ, ರಕ್ಷಣಾ ಇಲಾಖೆಗಳಲ್ಲಿ ಹಗರಣಗಳು ಹೆಚ್ಚುತ್ತಾ ಹೋಗುತ್ತಿವೆ. ರಕ್ಷಣೆ ಮಾಡುವವರ ಹತ್ತಿರವೇ ಹಣ ತಿನ್ನುತ್ತಾರೆ ಎಂದರೆ ಎಂಥ ವಿಪರ್ಯಾಸದ ಸಂಗತಿ ಎಂದರು.
ತೀರ್ಥಹಳ್ಳಿಯಲ್ಲಿ ಗೃಹ ಸಚಿವರೂ ಆಗಿದ್ದ ಆರಗ ಜ್ಞಾನೇಂದ್ರ ಅವರು ಏನನ್ನೂ ಮಾಡಲಾಗಿಲ್ಲ. ಅಡಿಕೆ ಬೆಳೆಗಾರರಿಗೆ ಅವರೇನು ಮಾಡಿದ್ದಾರೆ. ಅಭಿವೃದ್ಧಿಯಂತೂ ಮೊದಲೇ ಇಲ್ಲ. ಹೀಗಿರುವಾಗ ಅವರಿಗೆ ಯುವಕರು ಸೇರಿದಂತೆ ಬಡವರು ವಿವಿಧ ಸಮುದಾಯದವರು ಮತ ಹಾಕಲಾರರು. ಒಂದು ಮತವಾದರೂ ಸರಿಯೇ ಅಲ್ಲಿ ನಾವೇ ಗೆಲ್ಲುತ್ತೇವೆ. ಇದು ಖಚಿತ. ನಮ್ಮ ಗೆಲುವನ್ನು ತಪ್ಪಿಸಲು ಬಿಜೆಪಿ ಮುಖಂಡರಿಗೆ ಸಾಧ್ಯವೇ ಇಲ್ಲ ಎಂದರು.
ಕಾಂಗ್ರೆಸ್ ಕಡೆ ಮತದಾರರು ಆಕರ್ಷಿತರಾಗಿದ್ದಾರೆ. ಬಿಜೆಪಿಯವರಿಗೆ ಆಡಳಿತ ಪಕ್ಷದ ಹಾಗೂ ಹಣದ ಬಲವಿರಬಹುದು. ಆದರೆ, ಅದು ಕೆಲಸ ಮಾಡುವುದಿಲ್ಲ. ಬಿಜೆಪಿಯ ನೋಟು, ಕಾಂಗ್ರೆಸ್ ಗೆ ಓಟು ಎನ್ನುವಂತಹ ಸ್ಥಿತಿ ತೀರ್ಥಹಳ್ಳಿಯಲ್ಲಿ ನಡೆಯುತ್ತಿದೆ. ಸುಳ್ಳಿನ ವ್ಯಾಪಾರ ಮಾಡುತ್ತಿರುವ ಬಿಜೆಪಿಗೆ ಯಾರು ಮತ ನೀಡುವುದಿಲ್ಲ. ರಾಷ್ಟ್ರದ ಎಲ್ಲಾ ಸರ್ಕಾರಿ ಸಂಸ್ಥೆಗಳ ಖಾಸಗೀಕರಣ ಮಾಡಿದರು. ಜಿಲ್ಲೆಯ ಎರಡು ಕಾರ್ಖಾನೆಗಳನ್ನು ಮುಚ್ಚಿ ಹಾಕಿದರು. ಸುಳ್ಳನ್ನೇ ಹತ್ತು ಬಾರಿ ಹೇಳಿ ನಿಜ ಮಾಡಲು ಹೊರಟರು ಎಂದು ದೂರಿದರು.
ಕಾಂಗ್ರೆಸ್ ಪಕ್ಷದ ಗ್ಯಾರಂಟಿ ಕಾರ್ಡ್ ನ ಪ್ರಣಾಳಿಕೆ ಜನ ಸಾಮಾನ್ಯರಿಗೆ ಆಶಾಕಿರಣವಾಗಿದೆ. ನಮ್ಮ ಮುಖಂಡರು ಗ್ಯಾರಂಟಿ ಕಾರ್ಡ್ ಗೆ ಸಹಿ ಮಾಡಿಕೊಟ್ಟಿದ್ದಾರೆ. ಇದು ಬಡವರನ್ನು ಖಂಡಿತ ತಲುಪುತ್ತದೆ. ಹಲವರು ಕೇಳುತ್ತಾರೆ, ಎಲ್ಲಾ ಸೌಲಭ್ಯಗಳನ್ನು ನೀಡಿದರೆ ಆಡಳಿತ ನಡೆಸಲು ಹೇಗೆ ಸಾಧ್ಯ ಎಂದು? ಪ್ರಧಾನಿಯವರು ಕೋಟಿಗಟ್ಟಲೇ ಹಣ ದುಂದುವೆಚ್ಛ ಮಾಡುತ್ತಿದ್ದಾರೆ. ಬಂಡವಾಳಶಾಹಿಗಳ ಸಾಲವನ್ನೇ ಮನ್ನಾ ಮಾಡಿ, ಬ್ಯಾಂಕ್ ಗಳನ್ನೇ ಮರ್ಜ್ ಮಾಡಿ, ಬೆಲೆ ಏರಿಕೆ ಮಾಡಿ, ತೆರಿಗೆ ವಿಧಿಸಿ ಆಡಳಿತ ನಡೆಸುತ್ತಿಲ್ಲವೇ? ಎಲ್ಲವನ್ನು ಜಾಣತೆಯಿಂದ ಮಾಡಿದರೆ ಬಡವರಿಗೆ ಅನುಕೂಲ ಮಾಡಿಕೊಡಲು ಯಾವುದೇ ಸರ್ಕಾರ ಬಂದರೂ ಸಾಧ್ಯ. ಆದರೆ, ಡಬಲ್ ಇಂಜಿನ್ ಸರ್ಕಾರಕ್ಕೆ ಈ ಬದ್ಧತೆ ಇಲ್ಲ ಎಂದರು
.
ಕಿಮ್ಮನೆ ರತ್ನಾಕರ್ ಮತ್ತು ನಿಮ್ಮ ನಡುವೆ ಹೊಂದಾಣಿಕೆ ಸಾಧ್ಯವೇ ಇಲ್ಲ ಎಂದು ವಿಪಕ್ಷದವರು ಹೇಳುತ್ತಿದ್ದರಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು ಸಂದರ್ಭಕ್ಕೆ ತಕ್ಕಂತೆ ನಾವಿಬ್ಬರು ವರ್ತಿಸಿದ್ದೇವೆ. ಈಗ ಇಬ್ಬರೂ ಒಟ್ಟಾಗಿದ್ದೇವೆ. ನಾವಿಬ್ಬರು ಒಟ್ಟಾಗಿರುವುದೇ ತೀರ್ಥಹಳ್ಳಿಯ ರಾಜಕಾರಣದ ಒಂದು ತಂತ್ರವಾಗಿದೆ. ನಮ್ಮಿಬ್ಬರ ಸಮ್ಮಿಲನದಿಂದ ವಿರೋಧ ಪಕ್ಷಗಳು ನಡುಗುತ್ತಿವೆ. ನಾನು ಕೆಟ್ಟದ್ದನ್ನು ಬಹು ಬೇಗ ಮರೆತಿದ್ದೇನೆ. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವುದನ್ನೇ ನಿರೀಕ್ಷೆ ಮಾಡುತ್ತಿದ್ದೇನೆ ಎಂದರು.
ಈ ಸಂದರ್ಭದಲ್ಲಿ ಪ್ರೆಸ್ ಟ್ರಸ್ಟ್ ಅಧ್ಯಕ್ಷ ಎನ್. ಮಂಜುನಾಥ್, ಗೋಪಾಲ್ ಎಸ್. ಯಡಗೆರೆ, ಸಂತೋಷ್ ಕಾಚನಕಟ್ಟೆ ಇದ್ದರು.