ಶಿವಮೊಗ್ಗ: ಈ ಬಾರಿ ಶಿಕಾರಿಪುರದಿಂದ ತಾನು ಚುನಾವಣೆ ಕಣಕ್ಕಿಳಿದಿದ್ದು, ಸುಮಾರು 50 ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ಗೆಲ್ಲುವ ಭರವಸೆ ಇಟ್ಟುಕೊಂಡಿರುವುದಾಗಿ ಶಿಕಾರಿಪುರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ.ವೈ. ವಿಜಯೇಂದ್ರ ಹೇಳಿದರು.
ಪ್ರೆಸ್ ಟ್ರಸ್ಟ್ ನಲ್ಲಿ ಇಂದು ಶಿವಮೊಗ್ಗ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಪ್ರೆಸ್ ಟ್ರಸ್ಟ್ ಸಂಯುಕ್ತ ಆಶ್ರಯದಲ್ಲಿ ಏರ್ಪಡಿಸಲಾಗಿದ್ದ ಸಂವಾದದಲ್ಲಿ ಅವರು ಮಾತನಾಡಿದರು.
ಇಲ್ಲಿಯವರೆಗೆ ಶಿಕಾರಿಪುರ ಬಿ.ಎಸ್. ಯಡಿಯೂರಪ್ಪ ಅವರ ಕರ್ಮಭೂಮಿಯಾಗಿತ್ತು. ಇದು ನನ್ನ ಜನ್ಮಭೂಮಿ ಕೂಡ. ಇನ್ನು ಕರ್ಮಭೂಮಿಯನ್ನಾಗಿ ಮಾಡಿಕೊಳ್ಳುತ್ತಿದ್ದೇನೆ. ಶಿಕಾರಿಪುರದಲ್ಲಿ ಎಲ್ಲಾ ಬೂತ್ಗಳಿಗೆ ಈಗಾಗಲೇ ಮೂರು ಬಾರಿ ಭೇಟಿ ಕೊಟ್ಟು ಮತಯಾಚಿಸಲಾಗಿದೆ. ಕಾರ್ಯಕರ್ತರು ರಣೋತ್ಸಾಹದಲ್ಲಿ ಕೆಲಸ ಮಾಡುತ್ತಿದ್ದಾರೆ. ಉತ್ತಮ ಸಂಘಟನೆ ಇದೆ. ನಿರಂತರ ಶ್ರಮ ವಹಿಸಿ ಕೆಲಸ ಮಾಡುತ್ತಿದ್ದಾರೆ. ಇದರಿಂದ ತನ್ನ ಗೆಲುವು ಸುಲಭವಾಗಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಬಂಜಾರರ ಮೀಸಲಾತಿ ವಿಷಯಯನ್ನು ಇಟ್ಟುಕೊಂಡು ಕೆಲವರು ಅವರಲ್ಲೇ ಒಡಕು ಸೃಷ್ಟಿಸಲು ಯತ್ನಿಸಿದರು. ಯಡಿಯೂರಪ್ಪ ಅವರಿಗೆ ತೊಂದರೆ ಕೊಡಬೇಕೆಂಬ ಉದ್ದೇಶದಿಂದ ಅವರ ಮನೆಗೆ ಕಲ್ಲು ಹೊಡೆಸಿದರು. ಆದರೆ ಇದರಿಂದ ಅವರ ಉದೇಶ ಈಡೇರದು. ವಿಷ ಬೀಜ ಬಿತ್ತಿ ಸಮಾಜ ಒಡೆಯುವ ಕೆಲಸ ನಡೆಯದು. ಬಂಜಾರರು ಬಿಜೆಪಿ ಪರವಿದ್ದಾರೆ ಎಂದರು.
ಜನರು ಅಭಿವೃದ್ಧಿಗಾಗಿ ಈ ಬಾರಿ ಮತ್ತೆ ಬಿಜೆಪಿಯನ್ನು ಬೆಂಬಲಿಸಲಿದ್ದಾರೆ. ಆದುದರಿಂದ ಈ ಬಾರಿ ರಾಜ್ಯದಲ್ಲಿ ಮತ್ತೆ ಬಿಜೆಪಿ ಸರಕಾರ ನಿಶ್ಚಿತ. ಬಿಜೆಪಿ ಪ್ರಣಾಳಿಕೆ ಬಿಡುಗಡೆಯಾಗಿದೆ. ಸಮಾನ ನ್ಯಾಯ, ನೀತಿಯನ್ನು ಅದು ಪ್ರತಿಪಾದಿಸಿದೆ. ಎಲ್ಲ ವರ್ಗಗಳ ಶ್ರೇಯೋಭಿವೃದ್ಧಿ ಇಟ್ಟುಕೊಂಡು ಪ್ರಣಾಳಿಕೆ ರಚಿಸಲಾಗಿದೆ ಎಂದರು.
ಕಾಂಗ್ರೆಸ್ ಗ್ಯಾರೆಂಟಿ ಕಾರ್ಡಿನಿಂದ ಏನೂ ಸಾಧ್ಯವಿಲ್ಲ. ಕಾಂಗ್ರೆಸ್ ಅಧಿಕಾರಕ್ಕೇರುವುದೇ ಇಲ್ಲ. ಹಾಗಾಗಿ ಕಾರ್ಡಿನಿಂದ ಲಾಭವಿಲ್ಲ. ಜೆಡಿಎಸ್ನವರು ಈ ಬಾರಿ ಅತಂತ್ರ ಸರಕಾರವಾಗುತ್ತದೆ ಎನ್ನುವ ಕನಸು ಕಾನುತ್ತಿದ್ದಾರೆ. ಅದಕ್ಕಂತೂ ಬಹುಮತ ಬರುವುದಿಲ್ಲ. ತಾನೇ ಸಮ್ಮಿಶ್ರ ಸರಕಾರ ರಚಿಸಬಹುದೆನ್ನುವ ಭ್ರಮೆಯಲ್ಲಿದೆ ಎಂದರು.
ಭಜರಂಗದಳದಂತಹ ದೇಶಭಕ್ತ ಸಂಘಟನೆಯನ್ನು ನಿಷೇಧಿಸುವ ಮಾತನ್ನು ಕಾಂಗ್ರೆಸ್ ಹೇಳಿದೆ. ಈ ಸಂಘಟನೆ ದೇಶಭಕ್ತ ಸಂಘಟನೆ. ಕೇವಲ ಕರ್ನಾಟಕದಲ್ಲಿ ಮಾತ್ರವಿಲ್ಲ, ಹಲವು ರಾಜ್ಯಲ್ಲಿದೆ.
ಇದನ್ನು ನಿಷೇಧಿಸುವ ಮಾತು ಹಾಸ್ಯಾಸ್ಪದವಾದುದು ಎಂದ ಅವರು, ಕಾಂಗ್ರೆಸ್ಗೆ ಚುನಾವಣಾ ದಿನ ಹತ್ತಿರ ಬರುತ್ತಿರುವಂತೆಯೇ ವೀರಶೈವರ ಬಗ್ಗೆ ಅನುಕಂಪ ಶುರುವಾಗಿದೆ ಎಂದು ಲೇವಡಿ ಮಾಡಿದರು.
ಶಿಕಾರಿಪುರ ಅತಿ ಹೆಚ್ಚು ಅಭಿವೃದ್ಧಿ ಹೊಂದಿದ ಕ್ಷೇತ್ರವಾಗಿದೆ. ಉದ್ಯೋಗ ಸೃಷ್ಟಿ ಮತ್ತು ಪ್ರವಾಸೋದ್ಯಮ ತಾಣವನ್ನಾಗಿ ಮಾಡುವ ಕನಸು ತನ್ನದು. ಅಧಿಕಾರಕ್ಕೇರಿದ ನಂತರ ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗೆ ಒತ್ತು ಕೊಡಲಾಗುವುದು ಎಂದರು.
ಪ್ರೆಸ್ ಟ್ರಸ್ಟ್ ಅಧ್ಯಕ್ಷ ಎನ್. ಮಂಜುನಾಥ, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಗೋಪಾಲ ಯಡಗೆರೆ, ಕಾರ್ಯದರ್ಶಿ ಸಂತೋಷ ಕಾಚಿನಕಟ್ಟೆ ಉಪಸ್ಥಿತರಿದ್ದರು.