ಹುಡುಕಾಟದ ವರದಿ
ಶಿವಮೊಗ್ಗ,ಏ.18:
ಪಕ್ಷದ ತತ್ವ ಸಿದ್ಧಾಂತಗಳಿಗೆ ಬದ್ಧವಾಗಿ,ಪಕ್ಷದ ಹೈಕಮಾಂಡ್ ಮಾತಿಗೆ ವಿಧೇಯವಾಗಿ ರಾಜಕೀಯ ಚುನಾವಣೆಯಿಂದ ನಿವೃತ್ತಿ ಘೋಷಿಸಿ ಇಡೀ ರಾಜ್ಯದಲ್ಲಿ ಮುತ್ಸದ್ದಿತನ ಮೆರೆದ ಮಾಜಿ ಉಪ ಮುಖ್ಯಮಂತ್ರಿ ಕೆಎಸ್ ಈಶ್ವರಪ್ಪ ಅವರು ಇದೇ ಹೈಕಮಾಂಡ್ ಸೂಚನೆ ಹಾಗೂ ಕೋರಿಕೆ ಮೇರೆಗೆ ಮತ್ತೆ ಶಿವಮೊಗ್ಗ ವಿಧಾನಸಭಾ ಚುನಾವಣೆಯ ಅಭ್ಯರ್ಥಿಯಾಗುವ ಸಾಧ್ಯತೆಗಳು ನಿಚ್ಚಳವಾಗಿವೆ ಎಂದು ಬಲ್ಲಮೂಲಗಳು ಹೇಳಿವೆ.
ಭಾರತೀಯ ಜನತಾ ಪಕ್ಷ ರಾಜ್ಯದ ಎಲ್ಲಾ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಗಳ ಆಯ್ಕೆಯನ್ನು ಮುಗಿಸಿದ್ದು ಶಿವಮೊಗ್ಗ ಹಾಗೂ ಮಾನ್ವಿಯ ಎರಡು ಕ್ಷೇತ್ರಗಳನ್ನು ಉಳಿಸಿಕೊಂಡಿರುವುದರ ಹಿನ್ನೆಲೆ ಹಾಗೂ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ನಡ್ದವರ ದಿಡೀರ್ ಭೇಟಿ ನಡುವೆ, ಮತ್ತೆ ಈಶ್ವರಪ್ಪ ಅವರ ಮನವೊಲಿಸಲು ಪಕ್ಷದ ಹೈಕಮಾಂಡ್ ಅದರಲ್ಲೂ ವಿಶೇಷವಾಗಿ ರಾಜ್ಯ ಕಮಿಟಿಯ ಪ್ರಮುಖರು ಮುಂದಾಗಿದ್ದಾರೆ ಎಂದು ಹೇಳಲಾಗುತ್ತಿದೆ.
ಈ ನಡುವೆ ಶಿವಮೊಗ್ಗ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಹೆಚ್.ಸಿ. ಯೋಗೇಶ್ ಆಯ್ಕೆ ಆದ ನಂತರ ಬಿಜೆಪಿಯ ಆಕಾಂಕ್ಷಿತ ಅಭ್ಯರ್ಥಿಗಳ ಪಟ್ಟಿ ದೊಡ್ಡದಾಗಿ ಬೆಳೆಯಿತು. ಅಲ್ಲಿದ್ದ ಬಹುತೇಕ ಜನ ಈಗ ಕಡಿಮೆಯಾಗಿದ್ದು ಚನ್ನಬಸಪ್ಪ ಕಾಂತೇಶ್ ಹಾಗೂ ಡಾಕ್ಟರ್ ಧನಂಜಯ ಸರ್ಜಿ, ಜ್ಯೋತಿ ಪ್ರಕಾಶ್ ಹೆಸರುಗಳ ನಡುವೆ ಸದ್ದು ಗದ್ದಲವಿಲ್ಲದೆ ಚುನಾವಣೆಯನ್ನು ಸಮರ್ಥವಾಗಿ ಎದುರಿಸಲು ಹಾಗೂ ಶಿವಮೊಗ್ಗ ವಿಧಾನಸಭಾ ಕ್ಷೇತ್ರವನ್ನು ಬಿಜೆಪಿ ತೆಕ್ಕೆಯಲ್ಲಿ ಹಿಡಿದಿಟ್ಟುಕೊಳ್ಳಲು ಈಶ್ವರಪ್ಪ ಅವರನ್ನೇ ಮತ್ತೆ ಚುನಾವಣೆ ಅಂಕಣಕ್ಕೆ ಇಳಿಸಬೇಕಾಗಿದೆ ಎಂಬುದನ್ನು ಹೈಕಮಾಂಡ್ ಸೂಕ್ಷ್ಮವಾಗಿ ಪರಿಗಣಿಸಿದೆ ಎನ್ನಲಾಗಿದೆ.
ಜಗದೀಶ್ ಶೆಟ್ಟರ್, ಲಕ್ಷ್ಮಣ ಸವದಿ ರಂತಹ ನಾಯಕರುಗಳು ಪಕ್ಷ ಟಿಕೆಟ್ ನೀಡದ ತಕ್ಷಣ ಶಾಸಕ ಹಾಗೂ ಪಕ್ಷದ ಸ್ಥಾನಕ್ಕೆ ರಾಜೀನಾಮೆ ನೀಡಿ ಕಾಂಗ್ರೆಸ್ ಪಕ್ಷ ಸೇರಿ ಚುನಾವಣೆಗೆ ಸಿದ್ಧವಾಗಿರುವುದನ್ನು ಒಂದೆಡೆ ಗಮಿಸಿದಾಗ ಹೈಕಮಾಂಡ್ ಹೇಳಿದ ಕ್ಷಣ ತಿರುಗಿ ಮಾತನಾಡದೆ ಚುನಾವಣಾ ರಾಜಕೀಯದಿಂದ ನಿವೃತ್ತಿ ಘೋಷಿಸಿ ರಾಜಕೀಯ ಮುತ್ಸದ್ದಿತನವನ್ನು ತೋರಿದ ಈಶ್ವರಪ್ಪ ಅವರ ಸಕಾಲಿಕ ನಿರ್ಧಾರ ಪಕ್ಷದ ಹೈಕಮಾಂಡ್ ಪ್ರೀತಿಗೆ ಪಾತ್ರವಾಗಿತ್ತು. ಅಂತೆಯೇ ಜಗದೀಶ್ ಶೆಟ್ಟರ್ ಅವರಿಗೆ ಪತ್ರ ಬರೆಯುವ ಮೂಲಕ ಅವರ ಮನವೊಲಿಸುವ ಹಾಗೂ ಪಕ್ಷದ ತತ್ವ ಸಿದ್ಧಾಂತವನ್ನು ಕಾಪಾಡುವ ಮಾತನಾಡಿದ್ದು ಸಹ ಹೈಕಮಾಂಡ್ ಗಮನದಲ್ಲಿ ವಿಶೇಷವಾಗಿ ಗುರುತಿಸಿಕೊಂಡಿದೆ.
ಈ ಹಿನ್ನೆಲೆಯಲ್ಲಿ ಮತ್ತೆ ಈಶ್ವರಪ್ಪ ಅವರನ್ನು ಅಂಕಣಕ್ಕೆ ಇಳಿಸಲು ಬಿಜೆಪಿ ಹೈಕಮಾಂಡ್ ಈಶ್ವರಪ್ಪರಿಗೆ ಮನವಿ ಹಾಗೂ ಹಿಂದೆ ಚುನಾವಣಾ ರಾಜಕೀಯ ನಿವೃತ್ತಿ ಪಡೆಯಲು ನೀಡಿದಂತಹ ಸೂಚನೆಯನ್ನು ಈಗ ಚುನಾವಣೆಯಲ್ಲಿ ಸ್ಪರ್ಧಿಸಲು ಸೂಚಿಸುವ ಸಾಧ್ಯತೆಗಳು ಬಹುತೇಕ ನಿಚ್ಚಳವಾಗಿವೆ ಎಂದು ಬಲ್ಲಮೂಲಗಳು ಹೇಳುತ್ತಿವೆ.
. ಈ ನಡುವೆ ಜೆಡಿಎಸ್ ಈಶ್ವರಪ್ಪ ಅವರ ವಿಷಯದಲ್ಲಿ ಅಷ್ಟೊಂದು ದ್ವೇಷ ಅಸೂಯೆಯನ್ನು ಹೊಂದಿಲ್ಲ. ಎಂದೂ ಈಶ್ವರಪ್ಪ ಅವರು ಜೆಡಿಎಸ್ ವಿರುದ್ಧವಾಗಿ ಮಾತಿನ ಲಹರಿ ಹರಿಸಿಲ್ಲ. ಅಂತೆಯೇ ಈಶ್ವರಪ್ಪರ ವಿರುದ್ಧ ಸಹ ಜೆಡಿಎಸ್ ನ ಹೈಕಮಾಂಡ್ ಅಂತಹ ಕಟುವಾದ ಮಾತುಗಳನ್ನು ಆಡಿಲ್ಲ. ಈ ಹಿನ್ನೆಲೆಯನ್ನು ಗಮನಿಸಿದಾಗ ಜೆಡಿಎಸ್ ನ ನಿಲುವಿನ ನಡುವೆ ಕಾಂಗ್ರೆಸ್ ಪಕ್ಷದ ಮತ್ತೋರ್ವ ಅಭ್ಯರ್ಥಿಯನ್ನು ಬಂಡಾಯದ ನೆಪದಲ್ಲಿ ಜೆಡಿಎಸ್ ಗೆ ಸೆಳೆದು ಒಂದಿಷ್ಟು ಕಾಂಗ್ರೆಸ್ ಮತಗಳನ್ನು ಕದಿಯುವ ಪ್ರಯತ್ನ ಮಾಡಬಹುದು ಎನ್ನಲಾಗುತ್ತಿದೆ.
ಬರುವ ಎರಡು ದಿನದೊಳಗೆ ಈ ಎಲ್ಲ ಪ್ರಕ್ರಿಯೆಗಳು ನಡೆಯಲೇಬೇಕಿದೆ ಏಪ್ರಿಲ್ 20 ನಾಮಪತ್ರ ಸಲ್ಲಿಕೆಯ ಕೊನೆಯ ದಿನವಾಗಿದ್ದು ಬಹುತೇಕ ನಾಳೆ ಬಿಜೆಪಿ ಅಭ್ಯರ್ಥಿ ಆಯ್ಕೆ ಹಾಗೂ ನಾಮಪತ್ರ ಸಲ್ಲಿಕೆಗೆ ಕೇಂದ್ರ ಹೈಕಮಾಂಡ್ ನ ಪ್ರಮುಖರು ಶಿವಮೊಗ್ಗಕ್ಕೆ ಬರಲಿದ್ದಾರೆ ಎಂದು ಇದೇ ಬಿಜೆಪಿ ಮೂಲಗಳು ಹೇಳುತ್ತಿವೆ. ಕಾಲ ಹಾಗೂ ವಾಸ್ತವತೆ ಯಾವ ಬಗೆಯಲ್ಲಿ ತಿರುವು ಪಡೆಯುತ್ತದೆಯೋ ಭಗವಂತನೇ ಬಲ್ಲ.