ಸಮಾಜ ಕಲ್ಯಾಣ ಇಲಾಖೆ ಮೂಲಕ ಸಮಾಜ ಸುಧಾರಣೆಗೆ ಬೇಕಾದ ಪಾರದರ್ಶಕ ಯೋಜನೆಗಳನ್ನು ಜಾರಿಗೆ ತರಲಾಗಿದೆ ಎಂದು ಸಮಾಜ ಕಲ್ಯಾಣ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ತಿಳಿಸಿದರು.


ಇಲ್ಲಿನ ನಗರಸಭೆ ರಂಗಮಂದಿರದಲ್ಲಿ ಭಾನುವಾರ ನಗರಸಭೆ, ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ಸ್ತ್ರೀಶಕ್ತಿ ಸಂಘಗಳಿಗೆ ಪ್ರೋತ್ಸಾಹಧನ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ಯುವಕರಿಗೆ ದ್ವಿಚಕ್ರ ವಾಹನ, ಗಂಗಾ ಕಲ್ಯಾಣ ಯೋಜನೆಯಡಿ ಪಂಪ್‌ಸೆಟ್ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.


ರಾಜ್ಯದಲ್ಲಿ ೨೮ಸಾವಿರ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದವರಿಗೆ ದ್ವಿಚಕ್ರ ವಾಹನ ಮತ್ತು ೧೧ಸಾವಿರ ಮಹಿಳೆಯರಿಗೆ ಹೊಲಿಗೆ ಯಂತ್ರವನ್ನು ವಿತರಣೆ ಮಾಡುವ ಮೂಲಕ ಸ್ವಯಂ ಉದ್ಯೋಗಕ್ಕೆ ಒತ್ತು ನೀಡಲಾಗಿದೆ. ಮುಖ್ಯಮಂತ್ರಿಗಳ ಸೂಚನೆ ಮತ್ತು ಶಾಸಕ ಹಾಲಪ್ಪ ಅವರ ಮನವಿ ಮೇರೆಗೆ ಸಾಗರ ಕ್ಷೇತ್ರಕ್ಕೆ ಅತಿಹೆಚ್ಚು ಅಂದರೆ ೨೦೦ ದ್ವಿಚಕ್ರ ವಾಹನ ವಿತರಣೆ ಮಾಡಿದ್ದು, ಮುಂದಿನ ದಿನಗಳಲ್ಲಿ ಹೊಲಿಗೆ ಯಂತ್ರವನ್ನು ಸಹ ನೀಡಲಾಗುತ್ತದೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ೧೯ಸಾವಿರ, ಹಿಂದುಳಿದ ವರ್ಗದ

೧೭ಸಾವಿರ ರೈತರಿಗೆ ಉಚಿತವಾಗಿ ಬೋರ್‌ವೆಲ್ ತೆಗೆಸಿಕೊಡಲಾಗುತ್ತಿದೆ. ಶಾಸಕ ಹಾಲಪ್ಪ ಹರತಾಳು ಬಡವರ ಜೊತೆ ಇರುವ ಶ್ರೇಷ್ಟ ವ್ಯಕ್ತಿತ್ವ ಬೆಳೆಸಿಕೊಂಡಿದ್ದಾರೆ. ಅವರ ಬೇಡಿಕೆಯನ್ನು ಸರ್ಕಾರ ಮತ್ತು ನಮ್ಮ ಇಲಾಖೆ ಯಾವತ್ತೂ ನಿರಾಕರಿಸದೆ ಹೆಚ್ಚಿನ ಸೌಲಭ್ಯ ನೀಡುತ್ತಿದ್ದೇವೆ ಎಂದು ಹೇಳಿದರು.


ಸವಲತ್ತುಗಳನ್ನು ವಿತರಣೆ ಮಾಡಿ ಮಾತನಾಡಿದ ಶಾಸಕ ಹಾಲಪ್ಪ ಹರತಾಳು, ಕಾಂಗ್ರೇಸ್ ಪಕ್ಷ ಗ್ಯಾರೆಂಟಿ ಕಾರ್ಡ್ ವಿತರಣೆ ಮಾಡುವ ಮೂಲಕ ಜನರನ್ನು ದಾರಿತಪ್ಪಿಸುವ ಕೆಲಸ ಮಾಡುತ್ತಿದೆ. ಪ್ರತಿ ಮಹಿಳೆಗೆ ೨ಸಾವಿರ ರೂ. ಮಾಸಿಕಧನ ನೀಡುತ್ತೇವೆ ಎನ್ನುವ ಯೋಜನೆ ಅನುಷ್ಟಾನಕ್ಕೆ ಬರಲು ಸಾಧ್ಯವಿಲ್ಲ. ಚುನಾವಣೆ ಮುಗಿದ ನಂತರ ಬೇರೆಬೇರೆ ಕಾರಣ ಹೇಳಿ ಸೌಲಭ್ಯದಿಂದ ಜನರನ್ನು ವಂಚಿಸಲಾಗುತ್ತಿದೆ. ಕಾಂಗ್ರೇಸ್ ಕೊಟ್ಟಿರುವ ಗ್ಯಾರೆಂಟಿ ಕಾರ್ಡನ್ನು ಕಾನೂನಾತ್ಮಕವಾಗಿ ಸಹ ಪ್ರಶ್ನೆ ಮಾಡಲು ಆಗುವುದಿಲ್ಲ.

ರಾಜ್ಯದಲ್ಲಿ ಬಿಜೆಪಿ ಮಾತ್ರ ನುಡಿದಂತೆ ನಡೆಯುತ್ತಿದ್ದು ಜನರಿಗೆ ಪೊಳ್ಳು ಭರವಸೆ ನೀಡಿದೆ ಯೋಜನೆಗಳನ್ನು ನೇರವಾಗಿ ತಲುಪಿಸುವ ಕೆಲಸ ಮಾಡುತ್ತಿದೆ. ನಗರಸಭೆಯಿಂದ ೨೦೦ ಸ್ತ್ರೀಶಕ್ತಿ ಸಂಘಗಳಿಗೆ ೧೦ಸಾವಿರ ರೂ. ಪ್ರೋತ್ಸಾಹ ಧನ, ಸಮಾಜ ಕಲ್ಯಾಣ ಇಲಾಖೆಯಿಂದ ೨೦೦ ಜನರಿಗೆ ದ್ವಿಚಕ್ರ ವಾಹನ ಹಾಗೂ ರೈತರಿಗೆ ಪಂಪ್‌ಸೆಟ್ ನೀಡುವ ನೇರ ಯೋಜನೆಗಳು ಬಿಜೆಪಿ ಆಡಳಿತದಲ್ಲಿ ಮಾತ್ರ ಸಾಧ್ಯ ಎಂದು ಹೇಳಿದರು.


ನಗರಸಭೆ ಅಧ್ಯಕ್ಷೆ ಮಧುರಾ ಶಿವಾನಂದ್ ಅಧ್ಯಕ್ಷತೆ ವಹಿಸಿ ಮಾತನಾಡಿದರು. ವೇದಿಕೆಯಲ್ಲಿ ಉಪಾಧ್ಯಕ್ಷ ವಿ.ಮಹೇಶ್, ಸ್ಥಾಯಿ ಸಮಿತಿ ಅಧ್ಯಕ್ಷ ಅರವಿಂದ ರಾಯ್ಕರ್, ಸದಸ್ಯರಾದ ಟಿ.ಡಿ.ಮೇಘರಾಜ್, ಆರ್.ಶ್ರೀನಿವಾಸ್, ಬಿ.ಎಚ್.ಲಿಂಗರಾಜ್, ಮೈತ್ರಿ ಪಾಟೀಲ್, ಮಧುಮಾಲತಿ, ಶ್ರೀರಾಮ್, ವಿವಿಧ ಇಲಾಖೆ ಅಧಿಕಾರಿಗಳಾದ ಶ್ರೀನಿವಾಸ್, ಸವಿತಾ, ರಾಘವೇಂದ್ರ ಇನ್ನಿತರರು ಹಾಜರಿದ್ದರು. ಮಾರಿಕಾಂಬಾ ಮಹಿಳಾ ಸಂಘದ ಸದಸ್ಯರು ಪ್ರಾರ್ಥಿಸಿದರು. ಗಣೇಶ್ ಪ್ರಸಾದ್ ಸ್ವಾಗತಿಸಿದರು. ಹಬೀಬುಲ್ಲಾ ನಿರೂಪಿಸಿದರು

By admin

ನಿಮ್ಮದೊಂದು ಉತ್ತರ

error: Content is protected !!