ಶಿವಮೊಗ್ಗ-ಶಿಕಾರಿಪುರ-ರಾಣೆಬೆನ್ನೂರು ರೈಲು ಮಾರ್ಗವು ಹಾರನಹಳ್ಳಿ ಹೋಬಳಿಯ ಜನತೆಗೆ ಅನ್ಯಾಯವಾಗುತ್ತಿದ್ದು, ಜೊತೆಗೆ ಸರ್ಕಾರದ ಬೊಕ್ಕಸಕ್ಕೂ ಸುಮಾರು ೨೦೦ ಕೋಟಿ ನಷ್ಟ ಉಂಟಾಗುತ್ತದೆ ಎಂದು ಪ್ರಗತಿ ಹಾರನಹಳ್ಳಿ ಕ್ಷೇಮಾಭಿವೃದ್ಧಿ ಸಂಘ ಆರೋಪಿಸಿದೆ.
ಈ ಕುರಿತು ಇಂದು ಮೀಡಿಯಾ ಹೌಸ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಎಂ.ಜಿ. ರುದ್ರೇಶ್, ಶಿವಮೊಗ್ಗ ಜಿಲ್ಲೆಯಲ್ಲಿ ಈ ರೈಲು ಮಾರ್ಗ ಮಾಡುತ್ತಿರುವುದು ಸಂತೋಷದ ವಿಷಯವೇ. ಆದರೆ ಇದು ಅವೈಜ್ಞಾನಿಕವಾಗಿದೆ. ಶಿವಮೊಗ್ಗ-ಸೂರಗೊಂಡನಕೊಪ್ಪ-ಶಿಕಾರಿಪುರ ಹೊಸ ರೈಲು ಮಾರ್ಗ ಹಾರನಹಳ್ಳಿ ತಲುಪಿ ಶಿವಮೊಗ್ಗ-ಹಾರನಹಳ್ಳಿ-ಸೂರಗೊಂಡನಕೊಪ್ಪದ ಮೂಲಕ ಶಿಕಾರಿಪುರಕ್ಕೆ ಹೋದರೆ ಸುಮಾರು ೧೦ಕಿಮೀ. ಮಾರ್ಗ ಉಳಿಯುತ್ತದೆ. ಅಲ್ಲದೆ ಸುಮಾರು ೨೦೦ ಕೋಟಿ ಹಣ ಕೂಡ ಉಳಿಯುತ್ತದೆ. ಜೊತೆಗೆ ಹತ್ತು ಹಳ್ಳಿ ರೈತರ ಕೃಷಿ ಜಮೀನು ಕೂಡ ಉಳಿಯುತ್ತದೆ ಎಂದರು.
ಇದಕ್ಕೆ ಸಂಬಂಧಿಸಿದಂತೆ ನಾವು ಈಗಾಗಲೇ ಹಲವು ಬಾರಿ ಸಂಸದರಿಗೆ, ಜಿಲ್ಲಾಡಳಿತಕ್ಕೆ, ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದೆವು. ಆದರೂ ಕೂಡ ಈ ಮಾರ್ಗವನ್ನು ಬದಲಾವಣೆ ಮಾಡಿಲ್ಲ. ಹಾರನಹಳ್ಳಿಯಲ್ಲಿ ರೈಲ್ವೆ ನಿಲ್ದಾಣವಿದ್ದು, ಸುಮಾರು ೭೭ಎಕರೆ ಜಮೀನನ್ನು ಹೊಂದಿರುತ್ತದೆ. ರೈಲ್ವೆ ಜಂಕ್ಷನ್ ಮಾಡಲು ಬೇಕಾದ ಎಲ್ಲಾ ಅನುಕೂಲಗಳು ಇಲ್ಲಿವೆ. ಆದರೆ ನಾವು ಹೊಸ ಬಿ.ಜಿ. ರೈಲು ಮಾರ್ಗದಿಂದ ವಂಚಿತರಾಗಿದ್ದೇವೆ ಎಂದರು.
ಹಾಗಾಗಿ ಹಾರನಹಳ್ಳಿಗೆ ಜಂಕ್ಷನ್ ನೀಡಿದರೆ ಜನರಿಗೆ ಅನುಕೂಲವಾಗುವುದರ ಜೊತೆಗೆ ಸರ್ಕಾರಕ್ಕೆ ನೂರಾರು ಕೋಟಿ ರೂ. ಉಳಿತಾಯವಾಗುತ್ತದೆ. ಜೊತೆಗೆ ಅವೈಜ್ಞಾನಿಕವಾಗಿ ಹೊಸ ರೈಲು ಮಾರ್ಗವನ್ನು ಮಾಡಿರುವುದರಿಂದ ಗೌಡನಕೆರೆಯ ಏತನೀರಾವರಿಯಿಂದ ಪ್ರಯೋಜನ ಪಡೆಯುತ್ತಿರುವ ರೈತರಿಗೂ ಕೂಡ ತುಂಬಲಾರದ ನಷ್ಟವಾಗುತ್ತದೆ. ಶಿಕಾರಿಪುರಕ್ಕೆ ರೈಲುಮಾರ್ಗ ತೆಗೆದುಕೊಂಡು ಹೋಗುವ ಭರದಲ್ಲಿ ಹಾರನಹಳ್ಳಿ ಹೋಬಳಿಗೆ ಅನ್ಯಾಯವಾಗಬಾರದು. ಈಗ ಸರ್ವೆ ಮಾಡಿರುವುದನ್ನು ಕೈಬಿಟ್ಟು ಹಾರನಹಳ್ಳಿಯನ್ನು ರೈಲ್ವೆ ಜಂಕ್ಷನ್ ಮಾಡಬೇಕು ಎಂದು ಆಗ್ರಹಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಹೆಚ್.ವಿ. ದುರ್ಗೋಜಿರಾವ್, ಎಂ. ಜಗದೀಶ್ವರಯ್ಯ, ಜಯಣ್ಣ, ಮಹೇಶ್ವರಪ್ಪ, ಲೋಕೇಶಪ್ಪ, ರುದ್ರಾಚಾರ್ ಇದ್ದರು.