ವಿಮಾನ ನಿಲ್ದಾಣದ ನಾಮಫಲಕದಲ್ಲಿ ಮೊದಲಿಗೆ ಕನ್ನಡಕ್ಕೆ ಆದ್ಯತೆ ನೀಡಬೇಕು ಎಂದು ಆಮ್ ಆದ್ಮಿ ಪಾರ್ಟಿಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಜೀರ್ ಅಹಮ್ಮದ್ ಒತ್ತಾಯಿಸಿದರು.


ಅವರು ಇಂದು ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿ, ನಾಮಫಲಕಗಳಲ್ಲಿ ಮೊದಲ ಸಾಲಿನಲ್ಲೇ ಕನ್ನಡ ಭಾಷೆ ಇರಬೇಕು ನಂತರ ಉಳಿದ ಭಾಷೆಗಳಿರಬೇಕು. ಇಂಗ್ಲಿಷ್ ಅಥವಾ ಹಿಂದಿಯನ್ನು ದೊಡ್ಡದಾಗಿ ಬರೆದು ಕಾಟಾಚಾರಕ್ಕೆ ಕನ್ನಡ ಅಕ್ಷರ ಹಾಕಿದರೆ ವಿಮಾನ ನಿಲ್ದಾಣ ಒಳಗೆ ಹೋಗಿ ಕನ್ನಡದ ಹೊಸ ನಾಮ ಫಲಕಗಳನ್ನು ಹಾಕುತ್ತೇವೆ ಎಂದು ಎಚ್ಚರಿಕೆ ನೀಡಿದರು.


ವಿಮಾನ ನಿಲ್ದಾಣದ ನಾಮಫಲಕಗಳಲ್ಲಿ ಕನ್ನಡ ಭಾಷೆ ಬಳಸಬೇಕು ಎಂದು ಪಕ್ಷದ ವತಿಯಿಂದ ಹೋರಾಟ ಮಾಡಿದ ಪರಿಣಾಮ ಕನ್ನಡ ಭಾಷೆಯನ್ನು ಬಳಸಲಾಗುತ್ತಿರುವುದಕ್ಕೆ ಹೋರಾಟಕ್ಕೆ ಜಯ ಸಿಕ್ಕಂತಾಗಿದೆ ಎಂದರು.


ಚುನಾವಣಾ ಪ್ರಚಾರಕ್ಕಾಗಿ ೨ ತಿಂಗಳಲ್ಲಿ ೪ ಬಾರಿ ಪ್ರಧಾನಿಯವರು ರಾಜ್ಯಕ್ಕೆ ಬಂದಿದ್ದಾರೆ. ಫೆ.೨೭ರಂದು ಮತ್ತೆ ರಾಜ್ಯಕ್ಕೆ ಬರುತ್ತಿರುವುದು ಚುನಾವಣಾ ಗಿಮಿಕ್ ಹೊರತು ಬೇರೆ ಏನೂ ಇಲ್ಲ. ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ೩ ಪಕ್ಷಗಳು ಮತಗಳನ್ನು ಖರೀದಿಸಲು ಮುಂದಾಗಿರುವಾಗ ಆಮ್ ಆದ್ಮಿ ಪಾರ್ಟಿ ಒಂದೇ ಕರ್ನಾಟಕ ಮತ್ತು ಕನ್ನಡದ ಹಿರಿತನ ಉಳಿಸಲು ಹೋರಾಡುತ್ತಿದೆ. ಇದರಿಂದ ಪಕ್ಷ ಜನರ ಪ್ರೀತಿ ಮತ್ತು ಮತ ಎರಡನ್ನೂ ಗಳಿಸಲಿದೆ ಎಂದರು.


ಶಿವಮೊಗ್ಗ ವಿಮಾನ ನಿಲ್ದಾಣದ ಹುದ್ದೆಗಳಿಗೆ ಪಾರದರ್ಶಕ ಹಾಗೂ ಪ್ರಾಮಾಣಿಕವಾಗಿ ನೇಮಕಾತಿ ಮಾಡಬೇಕು. ಸ್ಥಳೀಯರಿಗೆ ಪ್ರಮುಖವಾಗಿ ಕನ್ನಡಿಗರಿಗೆ ಹೆಚ್ಚಿನ ಆಧ್ಯತೆ ನೀಡಬೇಕು ಎಂದು ಆಗ್ರಹಿಸಿದರು.
ಪತ್ರಿಕಾಗೋಷ್ಟಿಯಲ್ಲಿ ಹರೀಶ್, ಮಂಜುನಾಥ್, ರಾಘವೇಂದ್ರ, ಇಮ್ತಿಯಾಜ್ ಉಪಸ್ಥಿತರಿದ್ದರು.

By admin

ನಿಮ್ಮದೊಂದು ಉತ್ತರ

error: Content is protected !!