ಸಾಗರ : ಇತಿಹಾಸ ಪ್ರಸಿದ್ದವಾದ ಶ್ರೀ ಮಾರಿಕಾಂಬಾ ಜಾತ್ರೆ ಫೆ. ೭ರಿಂದ ೧೫ರವರೆಗೆ ವಿವಿಧ ಧಾರ್ಮಿಕ, ಸಾಂಸ್ಕೃತಿಕ, ಮನರಂಜನಾ ಚಟುವಟಿಕೆಯನ್ನು ಒಳಗೊಂಡಂತೆ ನಡೆಯಲಿದ್ದು ಭಕ್ತಾದಿಗಳು ಜಾತ್ರೆ ಯಶಸ್ಸಿಗೆ ಸಹಕರಿಸುವಂತೆ ಮಾರಿಕಾಂಬಾ ವ್ಯವಸ್ಥಾಪಕ ಸಮಿತಿ ಅಧ್ಯಕ್ಷ ಕೆ.ಎನ್.ನಾಗೇಂದ್ರ ತಿಳಿಸಿದರು.


ಸೋಮವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಫೆ. ೬ರಂದು ರಾತ್ರಿ ಚಿಕ್ಕಮ್ಮನನ್ನು ಹೊರಡಿಸುವ ಶಾಸ್ತ್ರ ನಡೆಯಲಿದೆ. ಫೆ. ೭ರ ಬೆಳಿಗ್ಗೆ ೨ಕ್ಕೆ ಮಹಾಗಣಪತಿ ದೇವಸ್ಥಾನದಲ್ಲಿ ಮಾಂಗಲ್ಯ ಪೂಜೆ ನಡೆಯಲಿದೆ. ಬೆಳಿಗ್ಗೆ ೫ಕ್ಕೆ ಬ್ರಾಹ್ಮೀ ಮುಹೂರ್ತದಲ್ಲಿ ಅಮ್ಮನವರಿಗೆ ದೃಷ್ಟಿ ಇಡುವುದು, ಮಾಂಗಲ್ಯಧಾರಣೆ, ನಂತರ ಅಮ್ಮನವರ ದರ್ಶನ ಇರುತ್ತದೆ ಎಂದರು.


ರಾತ್ರಿ ೧೦ಕ್ಕೆ ಪೋತರಾಜನಿಂದ ಚಾಟಿಸೇವೆ ಇರುತ್ತದೆ. ನಂತರ ಹೆಣ್ಣು ಒಪ್ಪಿಸುವ ಶಾಸ್ತ್ರ ನಡೆಯಲಿದ್ದು, ರಾತ್ರಿ ದೇವಿಯ ದಂಡಿನ ಮೆರವಣಿಗೆ ವಿವಿಧ ಕಲಾತಂಡಗಳ ಪಾಲ್ಗೊಳ್ಳುವಿಕೆ ಮೂಲಕ ನಡೆಯಲಿದೆ. ಫೆ. ೮ರ ಬೆಳಿಗ್ಗೆ ಮಾರಿಕಾಂಬಾ ದೇವಿಯ ಗಂಡನ ಮನೆಯಲ್ಲಿ ಅಮ್ಮನವರ ಪ್ರತಿಷ್ಟಾಪನೆ ನೆರವೇರಲಿದ್ದು, ಎಂಟು ದಿನಗಳ ಕಾಲ ಸಾರ್ವಜನಿಕರ ದರ್ಶನಕ್ಕೆ ಅವಕಾಶ ಇರುತ್ತದೆ ಎಂದರು.
ಫೆ. ೮ರಂದು ಸಂಜೆ ೭ಕ್ಕೆ ಗಾಂಧಿ ಮೈದಾನದಲ್ಲಿರುವ ಕಲಾವೇದಿಕೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮವನ್ನು ಶಾಸಕ ಎಚ್.ಹಾಲಪ್ಪ ಹರತಾಳು, ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಉದ್ಘಾಟಿಸಲಿದ್ದಾರೆ. ವಿಶೇಷ ಆಹ್ವಾನಿತರಾಗಿ ಟಿ.ಎಸ್.ನಾಗಾಭರಣ ಪಾಲ್ಗೊಳ್ಳಲಿದ್ದಾರೆ. ಸಮಿತಿ ಅಧ್ಯಕ್ಷ ಕೆ.ಎನ್.ನಾಗೇಂದ್ರ ಅಧ್ಯಕ್ಷತೆ ವಹಿಸಲಿದ್ದಾರೆ. ನಂತರ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಪ್ರತಿದಿನ ೫ರಿಂದ ಮಾರಿಕಾಂಬಾ ವೇದಿಕೆಯಲ್ಲಿ ಸ್ಥಳೀಯ ಮತ್ತು ರಾಜ್ಯಮಟ್ಟದ ವಿವಿಧ ತಂಡಗಳಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದ್ದು, ಫೆ. ೧೫ರಂದು ಸಾಂಸ್ಕೃತಿಕ ಕಾರ್ಯಕ್ರಮದ ಸಮಾರೋಪ ನಡೆಯಲಿದೆ ಎಂದರು.


ಫೆ. ೭ರಂದು ಸಂಜೆ ೫ಕ್ಕೆ ನೆಹರೂ ಮೈದಾನದಲ್ಲಿ ವಸ್ತುಪ್ರದರ್ಶನ ಉದ್ಘಾಟನೆಯಾಗಲಿದೆ. ಫೆ. ೧೦ರಂದು ಮಧ್ಯಾಹ್ನ ೩ಕ್ಕೆ ಸಂತ ಜೋಸೆಫರ ಶಾಲೆ ಎದುರಿನ ಮೈದಾನದಲ್ಲಿ ರಾಷ್ಟ್ರಮಟ್ಟದ ಕುಸ್ತಿ ಪಂದ್ಯಾವಳಿ ನಡೆಯಲಿದ್ದು, ಶಾಸಕ ಎಚ್.ಹಾಲಪ್ಪ ಉದ್ಘಾಟಿಸಲಿದ್ದಾರೆ. ಶಾಸಕರಾದ ಬಿ.ಸಂಗಮೇಶ್, ಅಶೋಕ್ ನಾಯ್ಕ್, ಮಲೆನಾಡು ಅಭಿವೃದ್ದಿ ಮಂಡಳಿ ಅಧ್ಯಕ್ಷ ಕೆ.ಎನ್.ಗುರುಮೂರ್ತಿ ಇನ್ನಿತರರು ಹಾಜರಿರುವರು ಎಂದು ಹೇಳಿದರು.


ಗೋಷ್ಟಿಯಲ್ಲಿ ಸಮಿತಿ ಪ್ರಧಾನ ಕಾರ್ಯದರ್ಶಿ ಬಿ.ಗಿರಿಧರ ರಾವ್, ಉಪಾಧ್ಯಕ್ಷ ಸುಂದರ ಸಿಂಗ್, ಸಹ ಕಾರ್ಯದರ್ಶಿ ಎಸ್.ವಿ.ಕೃಷ್ಣಮೂರ್ತಿ, ಖಜಾಂಚಿ ನಾಗೇಂದ್ರ ಕುಮಟಾ, ಸಂಚಾಲಕರಾದ ರವಿನಾಯ್ಡು, ಲೋಕೇಶಕುಮಾರ್, ಪುರುಷೋತ್ತಮ್, ಉಮೇಶ್ ಚೌಟಗಿ, ತಾರಾಮೂರ್ತಿ, ಕೆ.ಸಿ.ನವೀನ್, ಬಾಲಕೃಷ್ಣ ಗುಳೇದ್ ಇನ್ನಿತರರು ಹಾಜರಿದ್ದರು. (ಫೋಟೋ-ಮಾರಿಕಾಂಬಾ ಜಾತ್ರೆ)

By admin

ನಿಮ್ಮದೊಂದು ಉತ್ತರ

error: Content is protected !!