ಶಿವಮೊಗ್ಗ : ಕ್ರೀಡೆ ಮನರಂಜನೆಗಷ್ಟೆ ಸೀಮಿತವಲ್ಲ, ಇದರಿಂದ ಮಾನಸಿಕ ಮತ್ತು ದೈಹಿಕ ಸಧೃಡತೆ ನೀಡುತ್ತದೆ ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸಹಾಯಕ ಪ್ರಾಧ್ಯಾಪಕರಾದ ಡಾ.ಪ್ರಸನ್ನ.ಹೆಚ್.ಎಸ್ ಅಭಿಪ್ರಾಯಪಟ್ಟರು.
ಗುರುವಾರ ನಗರದ ಹೆಚ್.ಎಸ್.ರುದ್ರಪ್ಪ ರಾಷ್ಟ್ರೀಯ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿ ಸಾಂಸ್ಕೃತಿಕ ಕ್ರೀಡಾ ವೇದಿಕೆಗಳ ಸಮಾರೋಪ ಸಮಾರಂಭ ಹಾಗೂ ಬಹುಮಾನ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಯಾವುದೇ ಕ್ರೀಡೆಗಳ ಉಪೇಕ್ಷೆ ಸಲ್ಲದು. ಪ್ರತಿಯೊಂದು ಕ್ರೀಡೆಗಳು ತನ್ನದೇ ಮಹತ್ವವನ್ನು ಪಡೆದುಕೊಂಡಿದ್ದು, ಕಾಲಾನುಕ್ರಮೇಣ ಅನೇಕ ಬದಲಾವಣೆಗಳನ್ನು ಪಡೆದು, ಆಸಕ್ತರ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳುತ್ತಿದೆ ಎಂದು ಹೇಳಿದರು.
ರಾಷ್ಟ್ರೀಯ ಶಿಕ್ಷಣ ಸಮಿತಿ ಕುಲಸಚಿವರಾದ ಪ್ರೊ. ಟಿ.ಎಸ್.ಹೂವಯ್ಯಗೌಡ ಮಾತನಾಡಿ, ಕೆಲವು ಕುತಂತ್ರಗಳಿಂದ ನಿಂತು ಹೋಗಿದ್ದ ಒಲಂಪಿಕ್ ಕ್ರೀಡೆಯನ್ನು, 1896 ರಲ್ಲಿ ಫ್ರಾನ್ಸ್ ನವರು ಪುನಃ ಪ್ರಾರಂಭಿಸುತ್ತಾರೆ. ಈ ಸಂದರ್ಭದಲ್ಲಿ ಕ್ರೀಡೆಯಲ್ಲಿ ಭಾಗವಹಿಸುವುದು ಮುಖ್ಯ ಗೆಲ್ಲುವುದಲ್ಲ ಎಂಬ ಸಂದೇಶ ನೀಡುತ್ತಾರೆ. ಕಾಳಿದಾಸ ತನ್ನ ಕೃತಿಯಲ್ಲಿ ಹೇಳುವ ಹಾಗೆ ಶರೀರ ಮತ್ತು ಮಾನಸಿಕತೆ ಮುಖ್ಯ ಸಾಧಕವಾಗಿದ್ದು ಸಧೃಡತೆ ಬಹಳ ಮುಖ್ಯ ಎಂದು ಉಲ್ಲೇಖಿಸಿದ್ದಾರೆ. ಅಂತಹ ಪ್ರತಿ ಹಂತದ ಆತ್ಮವಿಶ್ವಾಸದ ಸಧೃಡತೆಗೆ ಕ್ರೀಡೆ ಸಹಕಾರಿ ಎಂದು ಹೇಳಿದರು
ಪ್ರಾಂಶುಪಾಲರಾದ ಚನ್ನಪ್ಪ ಅಧ್ಯಕ್ಷತೆ ವಹಿಸಿದ್ದರು. ಇದೇ ವೇಳೆ ವಿವಿಧ ಕ್ರೀಡೆ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.