ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ನಾನೂ ಸಹ ಸಾಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಟಿಕೇಟ್ ಆಕಾಂಕ್ಷಿಯಾಗಿದ್ದು, ಪಕ್ಷ ಹೊಸಮುಖಕ್ಕೆ ಅವಕಾಶ ಕಲ್ಪಿಸಬೇಕು ಎಂದು ನ್ಯಾಯವಾದಿ ಕೆ.ವಿ.ಪ್ರವೀಣ್ ಒತ್ತಾಯಿಸಿದ್ದಾರೆ.


ಗುರುವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ನಾನು ೨೦೦೬ರಿಂದ ಎಬಿವಿಪಿ ಮೂಲಕ ಬಿಜೆಪಿ ಸಂಘಟನೆಯಲ್ಲಿ ಗುರುತಿಸಿಕೊಂಡಿದ್ದೇನೆ. ಕಾನೂನು ಪದವೀಧರನಾಗಿರುವ ನನಗೆ ರಾಜಕೀಯ ಅಧಿಕಾರದ ಮೂಲಕ ಸಚ್ಚಾರಿತ್ರ್ಯದ ಜನಸೇವೆ ಮಾಡಬೇಕು ಎನ್ನುವ ಆಕಾಂಕ್ಷೆಯಿದ್ದು, ಈ ಬಾರಿ ನಡೆಯುವ ವಿಧಾನಸಭಾ ಚುನಾವಣೆಯಲ್ಲಿ ನನಗೆ ಬಿಜೆಪಿಯಿಂದ ಸ್ಪರ್ಧೆ ಮಾಡಲು ಅವಕಾಶ ಕಲ್ಪಿಸುವಂತೆ ಪಕ್ಷದ ರಾಷ್ಟ್ರೀಯ ಮತ್ತು ರಾಜ್ಯ ವರಿಷ್ಟರಿಗೆ ಪತ್ರ ಬರೆಯುತ್ತಿದ್ದೇನೆ ಎಂದು ಹೇಳಿದರು.


ಪ್ರಸ್ತುತ ಪಶ್ಚಿಮ ಬಂಗಾಳ, ಉತ್ತರ ಪ್ರದೇಶ ಇನ್ನಿತರೆ ರಾಜ್ಯಗಳಲ್ಲಿ ಬಿಜೆಪಿ ಪಕ್ಷಕ್ಕಾಗಿ ದುಡಿದ ಹೊಸ ಮುಖಗಳಿಗೆ ಅವಕಾಶ ಕಲ್ಪಿಸಿ, ಯಶಸ್ವಿಯಾಗಿದೆ. ಕರ್ನಾಟಕ ರಾಜ್ಯದಲ್ಲಿ ಸಹ ಹೊಸ ಇತಿಹಾಸಕ್ಕೆ ಪಕ್ಷ ಮುನ್ನುಡಿ ಬರೆಯುತ್ತದೆ ಎನ್ನುವ ಆಶಯ ನನ್ನದಾಗಿದೆ. ಈ ಹಿನ್ನೆಲೆಯಲ್ಲಿ ನನ್ನ ಅಭ್ಯರ್ಥನವನ್ನು ಪ್ರತಿಪಾದಿಸುವ ಮೂಲಕ ಸ್ಪರ್ಧೆಗೆ ಅವಕಾಶ ಕಲ್ಪಿಸಬೇಕು ಎಂದು ಒತ್ತಾಯಿಸುತ್ತಿದ್ದೇನೆ. ಹಣಬಲ, ಜಾತಿಬಲ ಇಲ್ಲದವರು ಸಹ ಶಾಸಕರಾಗಬಹುದು ಎನ್ನುವುದು ಬಿಜೆಪಿಯಲ್ಲಿ ಮಾತ್ರ ಸಾಧ್ಯ ಎಂದರು.


ಸಾಗರ ಕ್ಷೇತ್ರವ್ಯಾಪ್ತಿಯಲ್ಲಿ ಬಿಜೆಪಿಗೆ ಶಕ್ತಿಯೆ ಇಲ್ಲದ ಸಂದರ್ಭದಲ್ಲಿ ನಾವು ಪಕ್ಷ ಸಂಘಟನೆಗೆ ಅವಿರತವಾಗಿ ಶ್ರಮಿಸಿದವರು. ಮೂರು ಬಾರಿ ಬಿಜೆಪಿ ಶಾಸಕರಾಗಿದ್ದಾರೆ. ಎರಡು ಬಾರಿ ನಗರಸಭೆಯಲ್ಲಿ ಬಿಜೆಪಿ ಅಧಿಕಾರ ಹಿಡಿದಿದೆ. ಈತನಕ ಸಾಗರದಲ್ಲಿ ಬಿಜೆಪಿಗೆ ಸ್ವಂತ ಕಚೇರಿ ಇಲ್ಲ. ಪಕ್ಷದ ತತ್ವ ಸಿದ್ದಾಂತವನ್ನು ಲಾಗಾಯ್ತಿನಿಂದ ಅನುಸರಿಸಿಕೊಂಡು ಬರುವ ನನ್ನಂತಹ ನಿಷ್ಟಾವಂತನಿಗೆ ಟಿಕೇಟ್ ಕೊಡುವ ಮೂಲಕ ಮೂಲ ಕಾರ್ಯಕರ್ತರಿಗೆ ಅವಕಾಶ ಕಲ್ಪಿಸಬೇಕು ಎಂದು ಒತ್ತಾಯಿಸಿದರು. ಗೋಷ್ಟಿಯಲ್ಲಿ ಐ.ವಿ.ಹೆಗಡೆ ಉಪಸ್ಥಿತರಿದ್ದರು.

By admin

ನಿಮ್ಮದೊಂದು ಉತ್ತರ

error: Content is protected !!