: ಬಿಜೆಪಿ ಸರ್ಕಾರ ದೇಶವನ್ನು ದುರ್ಬಲಗೊಳಿಸಿದ್ದು ರಾಹುಲ್ ಗಾಂಧಿಯವರು ನಡೆಸಿದ ಭಾರತ್ ಜೋಡೋ ಮೂಲಕ ಭಾರತವನ್ನು ಸದೃಢಗೊಳಿಸುವ ದಿನ ಹತ್ತಿರ ಬಂದಿದೆ ಎಂದು ಮಾಜಿ ಸಚಿವ ಕಾಗೋಡು ತಿಮ್ಮಪ್ಪ ತಿಳಿಸಿದರು.
ಇಲ್ಲಿನ ಗಾಂಧಿ ಮಂದಿರದಲ್ಲಿ ಸೋಮವಾರ ಬ್ಲಾಕ್ ಕಾಂಗ್ರೇಸ್ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಭಾರತ್ ಜೋಡೋ ಯಾತ್ರೆ ಸಮಾರೋಪದ ಅಂಗವಾಗಿ ಧ್ವಜಾರೋಹಣ ನೆರವೇರಿಸಿ ಮಹಾತ್ಮಾ ಗಾಂಧೀಜಿ ಪುಣ್ಯಸ್ಮರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡುತ್ತಿದ್ದರು.
ರಾಹುಲ್‌ಗಾಂಧಿ ನಡೆಸಿದ ಭಾರತ್ ಜೋಡೋ ಯಾತ್ರೆ ಐತಿಹಾಸಿಕ ದಾಖಲೆ ಸೃಷ್ಟಿಸಿದೆ. ದೇಶಕ್ಕೆ ಸಮರ್ಥ ನಾಯಕತ್ವ ನೀಡುವ ಶಕ್ತಿ ರಾಹುಲ್ ಗಾಂಧಿ ಅವರಿಗೆ ಇದೆ. ಕಾಂಗ್ರೇಸ್ ಪಕ್ಷ ನೀಡಿದ ಅನೇಕ ಕಾರ್ಯಕ್ರಮಗಳನ್ನು ಬಿಜೆಪಿ ಸರ್ಕಾರ ಮೂಲೆಗುಂಪು ಮಾಡಿದೆ. ದುಡಿಯುವ ಕೈಗೆ ಕೆಲಸ ನೀಡುವ ಉದ್ಯೋಗಖಾತ್ರಿ ಯೋಜನೆಗೆ ಕೇಂದ್ರ ಸರ್ಕಾರ ಅನುದಾನ ಬಿಡುಗಡೆ ಮಾಡದೆ ಗ್ರಾಮೀಣ ನಿರುದ್ಯೋಗ ಸೃಷ್ಟಿಯಾಗಲು ಕಾರಣವಾಗಿದೆ ಎಂದ ಅವರು, ಮಹಾತ್ಮಾ ಗಾಂಧೀಜಿಯವರ ತತ್ವಾದರ್ಶಗಳನ್ನು ಮೂಲೆಗುಂಪು ಮಾಡಿರುವ ಬಿಜೆಪಿಗೆ ಮುಂದಿನ ದಿನಗಳಲ್ಲಿ ಜನರು ತಕ್ಕಪಾಠ ಕಲಿಸಲಿದ್ದಾರೆ ಎಂದು ಹೇಳಿದರು.
ಮಾಜಿ ಶಾಸಕ ಹಾಗೂ ಕೆಪಿಸಿಸಿ ವಕ್ತಾರ ಗೋಪಾಲಕೃಷ್ಣ ಬೇಳೂರು ಮಾತನಾಡಿ, ರಾಹುಲ್ ಗಾಂಧಿ ಅವರು ನಡೆಸಿದ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗಿನ ಪಾದಯಾತ್ರೆ ಹಿಮ್ಮೆಟ್ಟಿಸುವ ಕೆಲಸವನ್ನು ಕೇಂದ್ರ ಸರ್ಕಾರ ವ್ಯವಸ್ಥಿತವಾಗಿ ಮಾಡಿತ್ತು. ಆದರೆ ದೇಶದ ಜನರು ರಾಹುಲ್ ಗಾಂಧಿ ಅವರಿಗೆ ಅಭೂತಪೂರ್ವ ಬೆಂಬಲ ನೀಡಿದ್ದರಿಂದ ಎಲ್ಲ ಕಡೆ ಜೋಡೋಯಾತ್ರೆಗೆ ಜನಸಾಗರವೇ ಹರಿದು ಬರಲು ಕಾರಣವಾಗಿದೆ. ಸಂವಿಧಾನದ ಬಗ್ಗೆ ಗೌರವ ಇಲ್ಲದ ಬಿಜೆಪಿಯವರಿಗೆ ಗಾಂಧೀಜಿಯವರ ಬಗ್ಗೆ ಗೌರವ ಇಲ್ಲ ಎಂದರು.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಡಾ. ರಾಜನಂದಿನಿ ಕಾಗೋಡು ಮಾತನಾಡಿ, ರಾಷ್ಟ್ರಪಿತ ಮಹಾತ್ಮಾ ಗಾಂಧೀಯವರ ತತ್ವಾದರ್ಶವನ್ನು ಎಲ್ಲರೂ ಪಾಲಿಸಬೇಕು. ಭಾರತ್ ಜೋಡೋ ಯಾತ್ರೆ ಯಶಸ್ಸಿಗೆ ಸಹಕಾರ ನೀಡಿದ ಎಲ್ಲರನ್ನೂ ಕಾಂಗ್ರೇಸ್ ಪಕ್ಷ ಕೃತಜ್ಞತೆಯಿಂದ ಸ್ಮರಿಸುತ್ತದೆ ಎಂದು ಹೇಳಿದರು.
ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಬಿ.ಆರ್.ಜಯಂತ್ ಅಧ್ಯಕ್ಷತೆ ವಹಿಸಿದ್ದರು. ಐ.ಎನ್.ಸುರೇಶಬಾಬು, ಎನ್.ಲಲಿತಮ್ಮ, ಮಧುಮಾಲತಿ, ಕಲಗೋಡು ರತ್ನಾಕರ್, ಗಣಪತಿ ಮಂಡಗಳಲೆ, ಮಕ್ಬೂಲ್ ಅಹ್ಮದ್, ರಫೀಕ್ ಬಾಬಾಜಾನ್, ಮಹಾಬಲ ಕೌತಿ, ಎಲ್.ಚಂದ್ರಪ್ಪ, ವೆಂಕಟೇಶ್ ಮೆಳವರಿಗೆ, ಸೋಮಶೇಖರ್ ಲ್ಯಾವಿಗೆರೆ, ಅಣ್ಣಪ್ಪ ಭೀಮನೇರಿ ಇನ್ನಿತರರು ಹಾಜರಿದ್ದರು.