ಸ್ವಾವಲಂಬಿ ಮಹಿಳೆಯರು ಈ ದೇಶದ ಆಸ್ತಿ. ಸಂಸಾರದ ನೊಗ ಹೊತ್ತು ಆರ್ಥಿಕವಾಗಿಯೂ ಮಹಿಳೆ ಯಶಸ್ಸಿನತ್ತ ಸಾಗುತ್ತಿದ್ದಾರೆ ಎಂದು ಶಾಸಕ ಡಿ.ಎಸ್.ಅರುಣ್ ಹೇಳಿದ್ದಾರೆ.

ಅವರು ಇಂದು ನಗರದ ಶ್ರೀ ಶೈಲ ಮಲ್ಲಿಕಾರ್ಜುನ ಸಭಾ ಭವನದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್, ಶಿವಮೊಗ್ಗ, ಪ್ರಗತಿ ಬಂಧು ಸ್ವ ಸಹಾಯ ಸಂಘಗಳ ಒಕ್ಕೂಟ, ಶೇಷಾದ್ರಿಪುರ ವಲಯ ಇವರ ಸಂಯುಕ್ತಾಶ್ರಯದಲ್ಲಿ ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಹಾಗೂ ಮಾತೃಶ್ರೀ ಡಾ.ಹೇಮಾವತಿ ವಿ.ಹೆಗ್ಗಡೆ ದಂಪತಿಗಳ ಮಾರ್ಗದರ್ಶನದಲ್ಲಿ ನಡೆದ ವಲಯ ಮಟ್ಟದ ಸಾಧನ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು.

ವೈಶಿಷ್ಟ್ಯಮಯ ದೇಶ ನಮ್ಮದು, ನಮ್ಮ ದೇಶದ ಸಂಸ್ಕೃತಿ ಉಳಿಸಲು ಹಲವಾರು ಜನ ಪ್ರಾಣತೆತ್ತಿದ್ದಾರೆ. ಸಂವಿಧಾನ ಕೂಡ ರಚನೆಯಾಗಿದೆ ಮತ್ತು ನಮಗೆ ಅನೇಕ ಜವಾಬ್ದಾರಿ ನೀಡಿದೆ. ಸರ್ಕಾರ ಕೂಡ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಆದರೂ ಮಹಿಳಾ ಸಬಲೀಕರಣಕ್ಕಾಗಿ ಈ ದೇಶದ ಅಭಿವೃದ್ಧಿಗೆ ಮಹಿಳೆಯರ ಪಾತ್ರವೇ ಪ್ರಮುಖ ಎಂಬುದನ್ನು ಮನಗಂಡು ೪೦ ವರ್ಷ ಹಿಂದೆಯೇ ಪೂಜ್ಯ ಶ್ರೀ ವೀರೇಂದ್ರ ಹೆಗ್ಗಡೆಯವರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯನ್ನು ಸ್ಥಾಪಿಸಿ ಅದರ ಮೂಲಕ ಲಕ್ಷಾಂತರ ಮಹಿಳೆಯರಿಗೆ ತನ್ನ ಕಾಲ ಮೇಲೆ ತಾನು ನಿಲ್ಲುವಂತೆ ಜೊತೆಗೆ ಕುಟುಂಬಕ್ಕೂ ನೆರವು ನೀಡುವ ಶಕ್ತಿಯನ್ನು ತುಂಬಿದರು.

ನಮ್ಮ ಮಾತೆಯರು ಈಗ ಹೌಸ್ವೈಫ್ ಅಲ್ಲ ಹೋಮ್ ಮೇಕರ್ ಆಗಿದ್ದಾರೆ. ಜೀವನ ಪೂರ್ತಿ ತನ್ನ ಗಂಡ, ಮಕ್ಕಳು ಮತ್ತು ಸಂಸಾರಕ್ಕೆ ಬೆನ್ನೆಲುಬಾಗಿ ನಿಂತು ಸಂಸಾರದ ಫೈನಾನ್ಸ್ ಮಿನಿಸ್ಟರ್ ಆಗಿದ್ದಾರೆ. ನಮ್ಮ ದೇಶದ ಫೈನಾನ್ಸ್ ಮಿನಿಸ್ಟರ್ ಕೂಡ ಒಬ್ಬ ಹೆಣ್ಣು ಮಗಳಾಗಿದ್ದು, ಯಶಸ್ವಿ ಆರ್ಥಿಕ ಸಚಿವೆಯಾಗಿ ನಿರ್ಮಲಾ ಸೀತಾರಾಮ್ ವಿಶ್ವದ ಗಮನ ಸೆಳೆದಿದ್ದಾರೆ ಎಂದರು.

ಕೂಡು ಕುಟುಂಬಗಳು ಈಗ ಛಿದ್ರವಾಗಿ ಮನೆಯಲ್ಲಿ ಗಂಡ,ಹೆಂಡತಿ, ಮಗು ಮಾತ್ರ ಇದ್ದಾರೆ. ಆದರೂ ಕೂಡ ಜೀವನ ಕಷ್ಟವಾಗುವ ಈ ಸಂದರ್ಭದಲ್ಲಿ ಹೆಣ್ಣು ಮಕ್ಕಳಿಗೆ ಸ್ವಾವಲಂಬನೆಯ ಮಾಹಿತಿ ಮತ್ತು ಜಾಗೃತಿ ಮೂಡಿಸುವ ಕೆಲಸವನ್ನು ಧರ್ಮಸ್ಥಳ ಕ್ಷೇತ್ರದ ಯೋಜನೆ ಮಾಡುತ್ತಾ ಬಂದಿದೆ. ತಾನು ಸ್ವಾವಲಂಬಿ ಆಗುವುದಲ್ಲದೆ ಇನ್ನಿಷ್ಟು ಜನರಿಗೆ ಉದ್ಯೋಗ ನೀಡುವಷ್ಟು ಸಾಧನೆಯನ್ನು ಹಲವಾರು ಹೆಣ್ಣು ಮಕ್ಕಳು ಮಾಡಿದ್ದಾರೆ. ಸಾಲ ಪಡೆದ ಹಣ ದುರುಪಯೋಗ ಮಾಡದೆ ಸದುಪಯೋಗ ಮಾಡಿದ್ದಲ್ಲಿ ಯಶಸ್ವಿ ಉದ್ಯಮಿ ಆಗುವುದರ ಜೊತೆಗೆ ಉದ್ಯೋಗವನ್ನು ಕೂಡ ನೀಡಬಹುದು ಎಂದರು.

ಕಾರ್ಯಕ್ರಮದಲ್ಲಿ ಸಂಸ್ಥೆಯ ವ್ಯವಸ್ಥಾಪಕರಾದ ಚಂದ್ರಶೇಖರ್ ಮಾತನಾಡಿ, ಈ ವಲಯದಲ್ಲಿ ಒಟ್ಟು ೧೬೫೫೦ ಸ್ವಸಹಾಯ ಸಂಘಗಳಿದ್ದು, ೧.೨೦ ಲಕ್ಷ ಸದಸ್ಯರಿದ್ದಾರೆ. ೭ ಕೋಟಿ ಉಳಿತಾಯ ಮಾಡಿದ್ದೇವೆ. ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ತಿಳುವಳಿಕೆ ಮೂಡಿಸಿ ನಿಜವಾದ ಸ್ವಾವಲಂಬನೆ ಜಾಗೃತಿ ಮೂಡಿಸಿದ್ದೇವೆ ಎಂದರು.
ಈ ಸಂದರ್ಭದಲ್ಲಿ ವಲಯ ಮಟ್ಟದ ಸಾಧಕರಿಗೆ ಸನ್ಮಾನಿಸಲಾಯಿತು. ಪಾಲಿಕೆ ಸದಸ್ಯ ರಮೇಶ್ ಹೆಗಡೆ, ಸಂಸ್ಥೆಯ ಪ್ರಾದೇಶಿಕ ನಿರ್ದೇಶಕರಾದ ಗೀತಾ ಬಿ, ವಿಶ್ರಾಂತ ಪ್ರಾಧ್ಯಾಪಕರಾದ ಕಿರಣ್ ದೇಸಾಯಿ, ಮಾರ್ಗರೇಟ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟದ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.