ರಾಜ್ಯ ಸರಕಾರ ಈಡಿಗ ಅಭಿವೃದ್ಧಿ ನಿಗಮ ಘೋಷಣೆ ಮಾಡಿರುವುದು ಸ್ವಾಗತಾರ್ಹ ವಾದ ಬೆಳವಣಿಗೆಯಾಗಿದೆ. ಈ ಬಗ್ಗೆ ತಕ್ಷಣ ಅಧಿಕೃತ ಆದೇಶ ಹೊರಡಿಸಬೇಕು ಮತ್ತು ಮುಂಬರುವ ಬಜೆಟ್ನಲ್ಲಿ ಒಂದು ಸಾವಿರ ಕೋಟಿ ಅನುದಾನ ಮೀಸಲಿಡಬೇಕೆಂದು ಉದ್ಯಮಿ ಹಾಗೂ ಈಡಿಗ ಸಮುದಾಯದ ಮುಖಂಡರಾದ ಸುರೇಶ್ ಕೆ.ಬಾಳೇಗುಂಡಿ ಅವರು ಮನವಿ ಮಾಡಿದ್ದಾರೆ.

ಜನಸಂಖ್ಯೆ ದೃಷ್ಟಿಯಿಂದ ರಾಜ್ಯದ ನಾಲ್ಕನೇ ದೊಡ್ಡ ಸಮುದಾಯವಾದ ಈಡಿಗರ ಸಾಮಾಜಿಕ ಹಾಗೂ ಆರ್ಥಿಕ ಅಭಿವೃದ್ಧಿ ದೃಷ್ಟಿಯಿಂದ ಸರಕಾರ ಮಂಡಳಿ ಘೋಷಣೆ ಮಾಡಿರುವುದು ಸಕಾಲಿಕ ಕ್ರಮವಾಗಿದೆ. ಇದಕ್ಕಾಗಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅಭಿನಂದನಾರ್ಹರು. ಈ ಬಗ್ಗೆ ಅಧಿಸೂಚನೆ ಹೊರಡಿಸಬೇಕು ಮತ್ತು ಇದೇ ಬಜೆಟ್ನಲ್ಲಿ ಅನುದಾನ ಮೀಸಲಿಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಈಡಿಗ ಅಭಿವೃದ್ಧಿ ನಿಗಮ ಸ್ಥಾಪನೆ ಬಗ್ಗೆ ಬಹಳ ವರ್ಷಗಳಿಂದ ಬೇಡಿಕೆ ಇತ್ತು. ಈ ಬಗ್ಗೆ ಮುಖ್ಯಮಂತ್ರಿಗಳ ಮನವೊಲಿಸುವಲ್ಲಿ ಯಶಸ್ವಿಯಾದ ಸಚಿವ ಸುನೀಲ್ ಕುಮಾರ್, ಶ್ರೀನವಾಸ್ ಪೂಜಾರಿ ಹಾಗೂ ಶಾಸಕ ಹರತಾಳು ಹಾಲಪ್ಪ ಅವರನ್ನು ಅಭಿನಂದಿಸುವುದಾಗಿ ಸುರೇಶ್ ಅವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.