ಇಲ್ಲಿನ ನೆಹರೂ ನಗರದ ಭಜರಂಗ ದಳದ ನಗರ ಸಹ ಸಂಚಾಲಕ ಸುನೀಲ್ ಎಂಬುವವರ ಮೇಲೆ ತಲ್ವಾರ್ನಿಂದ ಹಲ್ಲೆಯ ವಿಫಲ ಯತ್ನ ನಡೆಸಿದ ಘಟನೆಗೆ ಸಂಬಂಧ ಪಟ್ಟಂತೆ ವಿಶ್ವಹಿಂದೂ ಪರಿಷತ್ ಮತ್ತು ಭಜರಂಗ ದಳ, ಪರಿವಾರದ ಸಂಘಟನೆಗಳು ಜ. ೧೦ರ ಮಂಗಳವಾರ ಬೆಳಿಗ್ಗೆ ೧೦ರಿಂದ ಸಂಜೆ ೫ರವರೆಗೆ ಸಾಗರ ಬಂದ್ಗೆ ಕರೆ ನೀಡಿವೆ.

ಘಟನೆಯ ವಿವರ : ನಗರದ ನೆಹರೂ ನಗರದ ಭಜರಂಗ ದಳದ ನಗರ ಸಹ ಸಂಚಾಲಕ ಸುನೀಲ್ ಎಂಬುವವರು ಸೋಮವಾರ ಬೆಳಿಗ್ಗೆ ಬೈಕ್ನಲ್ಲಿ ತಮ್ಮ ಮನೆಯಿಂದ ಬಿ.ಎಚ್.ರಸ್ತೆಯ ಆಭರಣ ಜ್ಯುವೆಲರ್ಸ್ ಪಕ್ಕದ ಜಿಯೋ ಕಚೇರಿಗೆ ಹೊರಟಿದ್ದರು. ಈ ಸಂದರ್ಭದಲ್ಲಿ ಅಂಗಡಿ ಎದುರು ಬೈಕ್ ನಿಲ್ಲಿಸುತ್ತಿದ್ದಾಗ ಓರ್ವ ಯುವಕ ಬೈಕ್ನಲ್ಲಿದ್ದ ತಲ್ವಾರ್ ತೆಗೆದುಕೊಂಡು ಸುನೀಲ್ಗೆ ಬೀಸಿದ್ದಾರೆ. ಅದೃಷ್ಟವಶಾತ್ ಸುನೀಲ್ ಕೂದಲೆಳೆ ಅಂತರದಲ್ಲಿ ತಲ್ವಾರ್ನಿಂದ ತಪ್ಪಿಸಿಕೊಂಡಿದ್ದಾರೆ. ಈ ದೃಶ್ಯ ಸಿ.ಸಿ. ಕ್ಯಾಮರಾದಲ್ಲಿ ಸೆರೆಯಾಗಿದೆ.

ತನ್ನನ್ನು ಭಾನುವಾರ ಸಹ ಕೆಲವರು ಬೈಕ್ ಅಡ್ಡಗಟ್ಟುವ ಪ್ರಯತ್ನ ನಡೆಸಿದ್ದರು. ಭಾನುವಾರ ನಾನು ಶಿವಮೊಗ್ಗದಲ್ಲಿ ನಡೆದ ವಿಶ್ವಹಿಂದೂ ಪರಿಷತ್ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮನೆಗೆ ಬಂದಿದ್ದೇನೆ. ಬೆಳಿಗ್ಗೆ ಕೆಲಸಕ್ಕೆ ಹೋಗುವಾಗ ಹಿಂಬಾಲಿಸಿಕೊಂಡು ಬಂದಿದ್ದಾರೆ. ಜಿಯೋ ಕಚೇರಿ ಎದುರು ಬೈಕ್ ನಿಲ್ಲಿಸುತ್ತಿದ್ದಾಗ ಸಮೀರ್ ಮತ್ತಿತರರು ನನ್ನ ಮೇಲೆ ತಲ್ವಾರ್ನಿಂದ ಹಲ್ಲೆಗೆ ಪ್ರಯತ್ನ ನಡೆಸಿದ್ದಾರೆ. ಈ ಸಂಬಂಧ ನಗರ ಠಾಣೆಯಲ್ಲಿ ದೂರು ನೀಡಲಾಗಿದೆ ಎಂದು ತಿಳಿಸಿದ್ದಾರೆ.

ಸಾಗರ ಬಂದ್ಗೆ ಕರೆ : ಘಟನೆಯನ್ನು ಖಂಡಿಸಿ ವಿಶ್ವಹಿಂದೂ ಪರಿಷತ್, ಭಜರಂಗ ದಳ ಮತ್ತು ಪರಿವಾರದ ಸಂಘಟನೆಗಳ ಕಾರ್ಯಕರ್ತರು ನಗರ ಠಾಣೆ ಎದುರು ಪ್ರತಿಭಟನೆ ನಡೆಸಿ, ಹಲ್ಲೆಗೆ ಯತ್ನ ನಡೆಸಿದವರ ವಿರುದ್ದ ತಕ್ಷಣ ಬಂಧಿಸುವಂತೆ ಒತ್ತಾಯಿಸಿದರು.
ಘಟನೆ ಹಿನ್ನೆಲೆಯಲ್ಲಿ ಶಾಸಕ ಹಾಲಪ್ಪ ಹರತಾಳು ಸೋಮವಾರ ಸುನೀಲ್ ಮನೆಗೆ ಭೇಟಿ ನೀಡಿ ಕುಟುಂಬಕ್ಕೆ ಧೈರ್ಯ ತುಂಬಿದರು. ಜೊತೆಗೆ ಪೊಲೀಸ್ ಅಧಿಕಾರಿಗಳ ಜೊತೆ ಸಭೆ ನಡೆಸಿ ತಪ್ಪಿತಸ್ತರ ವಿರುದ್ದ ತಕ್ಷಣ ಕಾನೂನುಕ್ರಮ ಜರುಗಿಸಲು ಸೂಚನೆ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ವಿಶ್ವಹಿಂದೂ ಪರಿಷತ್ ತಾಲ್ಲೂಕು ಅಧ್ಯಕ್ಷ ರವೀಶ್, ಸಾಗರದಲ್ಲಿ ಹಿಂದೂ ಧರ್ಮಿಯರ ಮೇಲೆ ಹಲ್ಲೆ ನಡೆಸುವ ಪ್ರಯತ್ನ ನಿರಂತರವಾಗಿ ನಡೆಯುತ್ತಿದೆ. ಭಜರಂಗ ದಳದ ನಗರ ಸಂಚಾಲಕ ಸುನೀಲ್ ಅವರ ಮೇಲೆ ಹಲ್ಲೆಗೆ ನಡೆಸಲು ಮುಂದಾಗಿರುವುದನ್ನು ನಾವು ಉಗ್ರವಾಗಿ ಖಂಡಿಸುತ್ತೇವೆ. ತಕ್ಷಣ ತಲ್ವಾರ್ ಬೀಸಿದ ಸಮೀರ್ ಎಂಬ ಯುವಕನನ್ನು ಮತ್ತು ಅದಕ್ಕೆ ಸಾಥ್ ನೀಡಿದ ಆರೋಪಿಗಳನ್ನು ಬಂಧಿಸಬೇಕು. ಪದೇಪದೇ ಹಿಂದೂ ಧರ್ಮಿಯರ ಮೇಲೆ ಹಲ್ಲೆ ನಡೆಸುತ್ತಿರುವುದನ್ನು ಖಂಡಿಸಿ ಜ. ೧೦ರಂದು ಬೆಳಿಗ್ಗೆ ೧೦ರಿಂದ ಸಂಜೆ ೫ರವರೆಗೆ ಸಾಗರ್ ಬಂದ್ಗೆ ಕರೆ ನೀಡಲಾಗಿದೆ. ಸಾರ್ವಜನಿಕರು, ಸಂಘಸಂಸ್ಥೆಗಳು, ಕಾಲೇಜು ವಿದ್ಯಾರ್ಥಿಗಳು ಬಂದ್ಗೆ ಸಹಕಾರ ನೀಡುವಂತೆ ಮನವಿ ಮಾಡಿದರು.

ಈ ಸಂದರ್ಭದಲ್ಲಿ ಅ.ಪು.ನಾರಾಯಣಪ್ಪ, ಅರಗ ಚಂದ್ರಣ್ಣ, ಸುಧೀಂದ್ರ ಕೆ.ಎಚ್., ಸಂತೋಷ್ ಶಿವಾಜಿ, ಐ.ವಿ.ಹೆಗಡೆ, ರಾಘವೇಂದ್ರ ಕಾಮತ್, ಕೆ.ಎಸ್.ಪ್ರಶಾಂತ್, ಆದಿತ್ಯ, ಮಾಪು ಇಕ್ಕೇರಿ, ನಗರಸಭೆ ಅಧ್ಯಕ್ಷೆ ಮಧುರಾ ಶಿವಾನಂದ್, ಸ್ಥಾಯಿ ಸಮಿತಿ ಅಧ್ಯಕ್ಷ ಅರವಿಂದ ರಾಯ್ಕರ್, ಗಣೇಶಪ್ರಸಾದ್ ಇನ್ನಿತರರು ಹಾಜರಿದ್ದರು