ಬಿಜೆಪಿ ಮೂಲಗಳ ಸುತ್ತ ಹರಿದಾಡುತ್ತಿರುವ ಸುದ್ದಿ
ಶಿವಮೊಗ್ಗ,ಜ.10:
ಬರುವ ಫೆಬ್ರವರಿ 12ರಂದು ಪ್ರಧಾನಿ ನರೇಂದ್ರ ಮೋದಿ ಅವರು ಶಿವಮೊಗ್ಗಕ್ಕೆ ಆಗಮಿಸಲಿರುವ ಸುದ್ದಿ ಹಬ್ಬಿದ ಬೆನ್ನಲ್ಲೇ ಶಿವಮೊಗ್ಗ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯಾರು? ಅವತ್ತೇ ಡಿಸೈಡ್ ಆಗುತ್ತಾ? ಎಂಬ ಪ್ರಶ್ನೆಗಳಿಗೆ ಉತ್ತರ ದೊರಕುವ ಸಾಧ್ಯತೆಗಳನ್ನು ಇದೇ ಬಿಜಪಿ ಅಂತರಂಗದಲ್ಲಿನ ಮೂಲಗಳು ತಿಳಿಸಿವೆ.

ಶಿವಮೊಗ್ಗ ವಿಧಾನಸಭಾ ಕ್ಷೇತ್ರದ ಹಾಲಿ ಬಿಜೆಪಿ ಶಾಸಕರಾಗಿ ಮಾಜಿ ಉಪಮುಖ್ಯಮಂತ್ರಿ ಕೆ ಎಸ್ ಈಶ್ವರಪ್ಪ ಅವರಿದ್ದು ಭಾರತೀಯ ಜನತಾ ಪಕ್ಷದ ನಿಯಮದಂತೆ ವಯೋಮಿತಿ ಆಧಾರದ ಹಿನ್ನೆಲೆಯಲ್ಲಿ ಅಂತಿಮ ಅವಕಾಶವಾಗಿ ಈಶ್ವರಪ್ಪನವರಿಗೆ ಈ ಬಾರಿಯೂ ಟಿಕೆಟ್ ದೊರೆಯುವ ಸಾಧ್ಯತೆಗಳು ನಿಚ್ಚಳವಾಗಿವೆ ಎನ್ನಲಾಗುತ್ತಿದೆ.
ಹಾಗೆಯೇ ಇದು ಸಾಧ್ಯವಿಲ್ಲ ಇತ್ತೀಚೆಗಷ್ಟೇ ರಾಷ್ಟ್ರೀಯ ಸ್ವಯಂ ಸೇವಾ ಸಂಸ್ಥೆಗೆ ರಾಜೀನಾಮೆ ನೀಡಿ, ಭಾರತೀಯ ಜನತಾ ಪಕ್ಷಕ್ಕೆ ಸೇರಿಕೊಂಡ ಸರ್ಜಿ ಸಮೂಹ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಹಾಗೂ ಶಿವಮೊಗ್ಗದಲ್ಲೆಡೆ ಕಳೆದ ಏಳೆಂಟು ತಿಂಗಳಿನಿಂದ ರಾಜಕೀಯ ಅಕಾಡಕ್ಕೆ ಧುಮುಕುವ ನಿಟ್ಟಿನಲ್ಲಿ ಸಕ್ರಿಯರಾಗಿದ್ದ ಡಾ. ಧನಂಜಯ ಸರ್ಜಿ ಅವರಿಗೆ ಟಿಕೆಟ್ ಘೋಷಣೆಯನ್ನು ಪ್ರಧಾನಿಗಳೇ ಮಾಡಿ ಹೋಗುತ್ತಿದ್ದಾರೆ ಹಾಗೂ ಬಿಜೆಪಿಯ ಹಿರಿಯ ಮುಖಂಡ ಕೆಎಸ್ ಈಶ್ವರಪ್ಪ ಅವರಿಗೆ ಉನ್ನತ ಮಟ್ಟದ ಪಕ್ಷದ ಜವಾಬ್ದಾರಿಯನ್ನು ನೀಡಲಿದ್ದಾರೆ ಎನ್ನಲಾಗುತ್ತಿದೆ.
ಈ ನಡುವೆ ಶಿವಮೊಗ್ಗ ಭಾರತೀಯ ಜನತಾ ಪಕ್ಷಕ್ಕೆ ನಗರದ ಕ್ಷೇತ್ರದಿಂದ ಅಭ್ಯರ್ಥಿಯಾಗಲು ಬಹುದೊಡ್ಡ ಪಟ್ಟಿಯೇ ಸಿದ್ಧವಾಗಿದೆ. ಸರ್ಕಾರದ ನಾಲ್ಕು ಅಂಗಗಳಲ್ಲಿ ಜನಪ್ರತಿನಿಧಿಯಾಗಿ ಸೇವೆ ಸಲ್ಲಿಸಿರುವ ಹಾಲಿ ವಿಧಾನ ಪರಿಷತ್ ಶಾಸಕ ಆಯನೂರು ಮಂಜುನಾಥ್, ವಿಧಾನ ಪರಿಷತ್ ಶಾಸಕ ಹಾಗೂ ಉದ್ಯಮಿ ಎಸ್ ರುದ್ರೇಗೌಡ, ಈಶ್ವರಪ್ಪ ಅವರ ಪುತ್ರ ಜಿಲ್ಲಾ ಪಂಚಾಯತ್ ನ ಮಾಜಿ ಸದಸ್ಯ ಕೆಇ ಕಾಂತೇಶ್, ಶಿವಮೊಗ್ಗ ಮಹಾನಗರ ಪಾಲಿಕೆಯ ಮಾಜಿ ಮೇಯರ್ ಹಾಗೂ ಸದಸ್ಯ ಚನ್ನಬಸಪ್ಪ ಸೇರಿದಂತೆ ಹಲವರು ಪಕ್ಷದ ಟಿಕೆಟ್ ಪಡೆಯಲು ಪ್ರಯತ್ನಿಸುತ್ತಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಯವರು ಶಿವಮೊಗ್ಗಕ್ಕೆ ಆಗಮಿಸಲಿರುವ ಸಂದರ್ಭದಲ್ಲಿ ಶಿವಮೊಗ್ಗ ವಿಮಾನ ನಿಲ್ದಾಣ ಉದ್ಘಾಟನೆ ಸೇರಿದಂತೆ ಹಲವಾರು ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ. ಅಂತೆಯೇ ಚುನಾವಣೆ ಸನಿಹದ ಈ ಸಮಯದಲ್ಲಿ ಭಾರತೀಯ ಜನತಾ ಪಕ್ಷದ ಕಾರ್ಯಕ್ರಮಗಳಲ್ಲಿ ಮತ್ತು ಸಭೆಗಳಲ್ಲಿ ಪ್ರಧಾನಿ ಮೋದಿ ಅವರು ಭಾಗವಹಿಸಲಿದ್ದು, ವಿಶೇಷವಾಗಿ ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯ ಆಯ್ಕೆ ಅವರಿಂದಲೇ ಘೋಷಣೆ ಆಗಲಿದೆ ಎಂದು ಇದೇ ಮೂಲಗಳು ತಿಳಿಸಿವೆ.
ಏಕೆಂದರೆ ಪಕ್ಷದಲ್ಲಿ ಭಿನ್ನಾಭಿಪ್ರಾಯಗಳು ಬಾರದಿರುವಂತೆ ನೋಡಿಕೊಳ್ಳಲು ಪ್ರಧಾನಿಗಳಿಗೆ ಈ ಜವಾಬ್ದಾರಿಯನ್ನು ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಒಪ್ಪಿಸಿದ್ದಾರೆಂದು ಇದೇ ಮೂಲಗಳು ತಿಳಿಸಿವೆ.
ಫೆಬ್ರವರಿ 12ರಂದು ಯಾರಿಗೆ ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯ ಆಯ್ಕೆ ಆಗಲಿದೆ ಎಂದು ನಂಬಲರ್ಹ ಮೂಲಗಳು ತಿಳಿಸಿವೆ.
ಈ ನಡುವೆ ಇದೇ ಮೂಲಗಳ ಮತ್ತೊಂದು ಹೇಳಿಕೆ ಪ್ರಕಾರ ಅಂದು ಪ್ರಧಾನಿಗಳು ಶಿವಮೊಗ್ಗ ಕ್ಷೇತ್ರದ ವಿಷಯವಾಗಿ ಚರ್ಚಿಸಿ ಸೂಕ್ತ ಅಭ್ಯರ್ಥಿಗಳೊಂದಿಗೆ ಮುಖತಾ ಸಮಾಲೋಚನೆ ನಡೆಸಿ, ನಂತರ ಎಲ್ಲರನ್ನೂ ಸಮಾಧಾನಪಡಿಸಿ ಹೋಗಲಿದ್ದಾರೆ. ಯಾವುದೇ ಘೋಷಣೆ ಮಾಡುವುದಿಲ್ಲ ಎಂದು ಇದೇ ಮೂಲಗಳು ಹೇಳಿವೆ.