ಶಿವಮೊಗ್ಗ: ಶಿವಮೊಗ್ಗಕ್ಕೆ ಬೇಕಾಗಿರುವುದು ಚಾಕು, ಚೂರಿ ಸಂಸ್ಕೃತಿಯಲ್ಲ, ಶಾಂತಿ,
ಸಾಮರಸ್ಯದ ಸಂಸ್ಕೃತಿ ಎಂದು ಕೆಪಿಸಿಸಿ ಸದಸ್ಯ ವೈ.ಹೆಚ್. ನಾಗರಾಜ್ ಹೇಳಿದರು.

ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಶಾಂತವಾಗಿದ್ದ ಶಿವಮೊಗ್ಗ ನಗರದಲ್ಲಿ
ಅಶಾಂತಿಯನ್ನು ಹುಟ್ಟಿಸಿದ್ದು ಶಾಸಕ ಕೆ.ಎಸ್. ಈಶ್ವರಪ್ಪ. ಅದರ ಮುಂದುವರೆದ ಭಾಗವಾಗಿ
ಭೋಪಾಲ್ ಸಂಸದೆ ಸಾಧ್ವಿ ಪ್ರಜ್ಞಾ ಸಿಂಗ್ ಅವರನ್ನು ಶಿವಮೊಗ್ಗಕ್ಕೆ ಕರೆತಂದು ಅವರಿಂದ
ಚಾಕು, ಚೂರಿಯ ಮಾತುಗಳನ್ನಾಡಿಸಿ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಈಶ್ವರಪ್ಪ
ಮುಂದಾಗಿರುವುದು ವಿಷಾದನೀಯ ಎಂದರು.

ಸಂಸದೆ ಸಾಧ್ವಿ ಪ್ರಜ್ಞಾ ಸಿಂಗ್ ಅವರು ಪ್ರಮಾಣ ವಚನ ಸ್ವೀಕರಿಸುವಾಗ ಈ ದೇಶದ ಸಮಗ್ರತೆ
ಮತ್ತು ಐಕ್ಯತೆ ಕಾಪಾಡಿ ಸಂವಿಧಾನಪೂರ್ವಕವಾಗಿ ನಡೆದುಕೊಳ್ಳುತ್ತೇನೆ ಎಂದಿದ್ದಾರೆ.
ಆದರೆ, ಶಿವಮೊಗ್ಗದಲ್ಲಿ ಹಿಂದೂ ಜಾಗರಣಾ ಸಮಿತಿ ಏರ್ಪಡಿಸಿದ್ದ ಸಭೆಯಲ್ಲಿ ಚಾಕು
ಸಂಸ್ಕೃತಿಯ ಮಾತನಾಡಿದ್ದಾರೆ. ಪ್ರತಿಯೊಬ್ಬ ಹೆಣ್ಣುಮಕ್ಕಳ ಕೈಯಲ್ಲೂ ಚಾಕು ಇರಬೇಕು
ಎನ್ನುವುದು ಅವರ ಪ್ರಚೋದನಕಾರಿಯಾದ ಭಾಷಣವಾಗಿದೆ. ಸಂಸದೆಯಾಗಿ ಅವರು ಈ ರೀತಿ
ಮಾತನಾಡಿರುವುದು ತಪ್ಪಾಗಿ ಈಗಾಗಲೇ ಕಾಂಗ್ರೆಸ್ ಅವರ ವಿರುದ್ಧ ದೂರು ದಾಖಲಿಸಿದ್ದು,
ಪೊಲೀಸರು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಪ್ರಜ್ಞಾ ಸಿಂಗ್ ಅವರು ನಿಮ್ಮ ಮಕ್ಕಳನ್ನು ಯಾವುದೇ ಕಾರಣಕ್ಕೂ ಕ್ರಿಶ್ಚಿಯನ್ ಮಿಷನರಿ
ಶಾಲೆಗಳಿಗೆ ಕಳಿಸಬೇಡಿ ಎಂದು ಹೇಳಿದ್ದಾರೆ. ಹೀಗೆ ಹೇಳುವ ಹಕ್ಕನ್ನು ಅವರಿಗೆ
ಕೊಟ್ಟವರು ಯಾರು? ಯಾರೋ ಸಾಮಾನ್ಯ ಪ್ರಜೆಯಾಗಿ ಹೇಳಿದ್ದರೆ ಸುಮ್ಮನಿರಬಹುದಿತ್ತು.
ಆದರೆ, ಪ್ರಜಾತಂತ್ರದ ಭಾಗವಾಗಿ ಈ ರೀತಿ ಸಂವಿಧಾನ ವಿರೋಧಿ ಹೇಳಿಕೆ ನೀಡಿರುವುದು
ಖಂಡನೀಯ. ಶಿಕ್ಷಣ ಸಂಸ್ಥೆಗಳು ಎಲ್ಲಾ ಧರ್ಮ, ಜಾತಿಗಳನ್ನು ಮೀರಿದೆ. ಆದರೆ, ಇವರು
ಅದನ್ನು ಧರ್ಮದ ಚೌಕಟ್ಟಿನಲ್ಲಿ ಬಂಧಿಸಿಟ್ಟಿರುವುದು ಅಪಚಾರವಾಗಿದೆ ಎಂದರು.

ಪದವಿ ಕಾಲೇಜಿನಲ್ಲಿ ಅತಿಥಿ ಉಪನ್ಯಾಸಕರಾಗಿ ಕೆಲಸ ಮಾಡುತ್ತಿರುವವರನ್ನು ಈ ತಿಂಗಳ
ಅಂತ್ಯಕ್ಕೆ ಬಿಡುಗಡೆ ಮಾಡುವಂತೆ ಸರ್ಕಾರ ಆದೇಶ ಹೊರಡಿಸಿದೆ. ಬಿಜೆಪಿ ಸರ್ಕಾರ ಅತಿಥಿ
ಉಪನ್ಯಾಸಕರ ಪರವಾಗಿ ಅಭಯ ನೀಡಿ ಈಗ ಬಿಡುಗಡೆ ಮಾಡುತ್ತಿರುವುದು ಅವರಿಗೆ ಮಾಡಿದ
ದ್ರೋಹವಾಗಿದೆ. ಪರೀಕ್ಷೆಗಳು ಬರುವ ಕಾಲವಿದು. ಸರ್ಕಾರ ಈ ಬಗ್ಗೆ ಎಚ್ಚೆತ್ತುಕೊಂಡು
ಅವರನ್ನು ಬಿಡುಗಡೆ ಮಾಡಬಾರದು ಮತ್ತು ಖಾಲಿ ಇರುವು ಪ್ರಾಥಮಿಕ ಹಾಗೂ ಹೈಸ್ಕೂಲ್
ಶಾಲೆಗಳ ಶಿಕ್ಷಕ ಹುದ್ದೆಗಳನ್ನು ಶೀಘ್ರವೇ ಭರ್ತಿ ಮಾಡಬೇಕು ಎಂದರು.

ಸರ್ಕಾರಿ ನೌಕರರ ಹಳೆ ಪಿಂಚಣಿ ವ್ಯವಸ್ಥೆ ಜಾರಿಗೊಳಿಸಲು ಈ ಬಾರಿ ಅಧಿವೇಶನದಲ್ಲಿ
ಯಾವುದೇ ನಿರ್ಧಾರ ಕೈಗೊಳ್ಳಲಿಲ್ಲ. ಶಿವಮೊಗ್ಗದ ಒಂದಿಬ್ಬರು ಶಾಸಕರನ್ನು ಬಿಟ್ಟರೆ
ಈಶ್ವರಪ್ಪ ಸೇರಿದಂತೆ ಎಲ್ಲಾ ಶಾಸಕರು ಈ ಬಗ್ಗೆ ಗಮನಹರಿಸಲಿಲ್ಲ. ಸರ್ಕಾರ ಈಗಲಾದರೂ,
ಹೊಸದಾಗಿ ಸೇರಿರುವ ಸರ್ಕಾರಿ ನೌಕರರ ಬಗ್ಗೆ ಗಮನಹರಿಸಬೇಕು ಎಂದರು.

ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಎಂ.ಪಿ. ದಿವಾಕರ್, ಹೆಚ್.ಪಿ. ರುದ್ರೇಶ್ ಇದ್ದರು.

By admin

ನಿಮ್ಮದೊಂದು ಉತ್ತರ

You missed

error: Content is protected !!