ಪಕ್ಷದ ಹಿತದೃಷ್ಟಿಯಿಂದ ಎಲ್ಲರೂ ಒಟ್ಟಾಗಿ ಕೆಲಸ ಮಾಡಬೇಕು. ಪಕ್ಷದ ಭವಿಷ್ಯ ನಿರ್ಧಾರಕ್ಕೆ ಕಾರ್ಯಕರ್ತರನ್ನು ಯಾವ ರೀತಿ ಸಿದ್ಧಗೊಳಿಸಬೇಕು ಎಂಬುದನ್ನು ನಿರ್ಧರಿಸಬೇಕು ಎಂದು ಮಾಜಿ ಸಚಿವ ಕಾಂಗ್ರೆಸ್ ನಾಯಕ ಕಾಗೋಡು ತಿಮ್ಮಪ್ಪ ಹೇಳಿದ್ದಾರೆ.


ಅವರು ನಗರದ ದೈವಜ್ಞ ಕಲ್ಯಾಣ ಮಂದಿರದಲ್ಲಿ ಇಂದು ಶಿವಮೊಗ್ಗ ಉತ್ತರ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾಗಿ ದೀಪಕ್ ಸಿಂಗ್ ಪದಗ್ರಹಣ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.


ನಮ್ಮ ಬದುಕಿನಲ್ಲಿ ಸಾರ್ಥಕತೆಯನ್ನು ನೀಡಿದ್ದು ಕಾಂಗ್ರೆಸ್ ಪಕ್ಷ. ಕಾರ್ಯಕರ್ತರಿಗೆ ಸ್ಥಾನಮಾನ ನೀಡುವುದು ಪಕ್ಷದ ಹಿತದೃಷ್ಟಿಯಿಂದ ಪ್ರಾಮುಖ್ಯತೆ ಪಡೆಯುತ್ತದೆ. ಈ ನಿಟ್ಟಿನಲ್ಲಿ ಇಂದಿನ ಸಮಾರಂಭ ಮಹತ್ವ ಪಡೆದಿದೆ. ದೇಶದಲ್ಲಿ ಜನಸಾಮಾನ್ಯನಿಗೆ ಕಾಂಗ್ರೆಸ್ ಎಲ್ಲವನ್ನು ನೀಡಿದೆ. ಅದನ್ನು ಮತ್ತೆ ಜನರಲ್ಲಿ ಜಾಗೃತಿಗೊಳಿಸುವಂತಹ ಕೆಲಸ ಮಾಡಬೇಕು. ದೇಶದ ಅಭಿವೃದ್ಧಿಯಲ್ಲಿ ಕಾಂಗ್ರೆಸ್ ಕೊಡುಗೆಯನ್ನು ಜನರ ಮನಸ್ಸಿಗೆ ಮತ್ತೆ ನೆನಪು ಮಾಡಬೇಕು. ಜನಸಾಮಾನ್ಯರ ಪಕ್ಷ ಇದ್ದರೆ ಅದು ಕಾಂಗ್ರೆಸ್ ಮಾತ್ರ ಎಂದರು.


ಮಾಜಿ ಶಾಸಕರು ಕರ್ನಾಟಕ ಪ್ರದೇಶ ಕಾಂಗ್ರೆಸ್‌ನ ಹಿಂದುಳಿದ ವರ್ಗಗಳ ವಿಭಾಗದ ಅಧ್ಯಕ್ಷರಾದ ಮಧುಬಂಗಾರಪ್ಪ ಮಾತನಾಡಿ, ಅನೇಕ ಕಾರಣಗಳಿಂದ ಪಾರ್ಟಿ ಬಿಟ್ಟುಹೋದ ಕಾಂಗ್ರೆಸ್‌ನ ಪ್ರಮುಖರನ್ನು ಮತ್ತೆ ಗೌರವಯುತವಾಗಿ ಕರೆತಂದು ಪಕ್ಷವನ್ನು ಸಂಘಟಿಸಬೇಕು. ಕಾಂಗ್ರೆಸ್ ಪಕ್ಷದ ಬಗ್ಗೆ ಜನರಲ್ಲಿ ಅಪಾರವಾದ ವಿಶ್ವಾಸವಿದೆ. ಒಳ್ಳೆಯ ಭಾವನೆಗಳಿವೆ ನಾವು ಮತ್ತೆ ಎಚ್ಚರಿಸುವ ಕೆಲಸಮಾಡಬೇಕಾಗಿದೆ. ಬಿಜೆಪಿ

ದುರಾಡಳಿತದ ಲೋಪವನ್ನು ಜನರಿಗೆ ತಿಳಿಸಿ ಕಾಂಗ್ರೆಸ್ ಸರ್ಕಾರ ಮಾಡಿದ ಅಭಿವೃದ್ಧಿಗಳನ್ನು ಮನದಟ್ಟು ಮಾಡುವ ಅವಶ್ಯಕತೆಯಿದೆ. ಎಲ್ಲರೂ ಒಟ್ಟಾಗಿ ಮತ್ತೆ ಪಕ್ಷ ಸಂಘಟಿಸಿದಲ್ಲಿ ಶಿವಮೊಗ್ಗ ಜಿಲ್ಲೆಯನ್ನು ಮತ್ತೆ ಕಾಂಗ್ರೆಸ್‌ನ ಭದ್ರಕೋಟೆ ಮಾಡಬಹುದು ಎಂದರು.


ವಿಧಾನ ಪರಿಷತ್ ಮಾಜಿ ಸದಸ್ಯ ಆರ್.ಪ್ರಸನ್ನ ಕುಮಾರ್ ಮಾತನಾಡಿ, ನಗರದಲ್ಲಿ ಉತ್ತರ ಬ್ಲಾಕ್ ಕಾಂಗ್ರೆಸ್‌ನ ಮತದಾರರು ನಿರ್ಣಾಯಕ ಪಾತ್ರವಹಿಸುತ್ತಾರೆ. ಎಲ್ಲಾ ಮುಖಂಡರು ಸೇರಿ ಉತ್ತರ ಬ್ಲಾಕ್‌ನ್ನು ಬಲಪಡಿಸಬೇಕು. ಇಲ್ಲಿ ಪಕ್ಷ ಸ್ವಲ್ಪ ಹಿನ್ನಡೆ ಕಂಡಿತ್ತು. ಮತ್ತೆ ಪ್ರಬಲ ಸಂಘಟನೆ ಮಾಡಬೇಕು ಎಂದರು.


ಇನ್ನೊರ್ವ ಮುಖಂಡ ಇಸ್ಮಾಯಿಲ್‌ಖಾನ್ ಮಾತನಾಡಿ, ಕಾಂಗ್ರೆಸ್‌ನಲ್ಲಿ ಗುಂಪುಗಾರಿಕೆ ಬೇಡ. ದಯವಿಟ್ಟು ಕಾಲೆಳೆಯುವ ಕೆಲಸ ಯಾರೂ ಮಾಡಬೇಡಿ. ನಮ್ಮ ಗುರಿ ಮತ್ತೆ ಕಾಂಗ್ರೆಸ್‌ನ್ನು ಅಧಿಕಾರಕ್ಕೆ ತರುವುದು. ಬಿಜೆಪಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಶ್ರೀರಾಮನನ್ನು ಬೀದಿಗೆ ತಂದು ನಿಲ್ಲಿಸಿ ಮತ ಬ್ಯಾಂಕ್‌ನ್ನು ಭದ್ರ ಪಡಿಸುತ್ತಾ ಸಮಾಜದಲ್ಲಿ ವಿಷಬೀಜ ಬಿತ್ತಿದ್ದು ಮಾತ್ರ ಸಾಧನೆಯಾಗಿದೆ. ಅಭಿವೃದ್ಧಿ ಶೂನ್ಯ ಸರ್ಕಾರವಿದು. ಎಲ್ಲರೂ ಒಗ್ಗಟ್ಟಾಗಿ ಪಕ್ಷದ ಕೆಲಸ ಮಾಡಿದರೆ ಗೆಲುವು ನಿಶ್ಚಿತ ಎಂದರು.


ಜಿಲ್ಲಾಧ್ಯಕ್ಷ ಹೆಚ್.ಎಸ್.ಸುಂದರೇಶ್ ಮಾತನಾಡಿ, ಬಹಳ ಕಾಲ ಉತ್ತರ ಬ್ಲಾಕ್ ಕಾಂಗ್ರೆಸ್‌ಗೆ ಅಧ್ಯಕ್ಷರೇ ಇರಲಿಲ್ಲ. ಹಾಗಾಗಿ ಉತ್ತರ ಬ್ಲಾಕ್‌ನಲ್ಲಿ ಪಕ್ಷ ಸ್ವಲ್ಪ ಬಲಹೀನವಾಗಿತ್ತು. ಈಗ ಅಧ್ಯಕ್ಷರ ನೇಮಕವಾಗಿದೆ. ದೀಪಕ್‌ಸಿಂಗ್ ಅವರು ಸಂಘಟನೆಗೆ ಒತ್ತು ನೀಡಬೇಕು. ಅವರಿಗೆ ಜಿಲ್ಲಾ ಕಾಂಗ್ರೆಸ್ ಸಂಪೂರ್ಣ ಬೆಂಬಲ ನೀಡಲಿದೆ ಎಂದರು.


ವೇದಿಕೆಯಲ್ಲಿ ಕಾಂಗ್ರೆಸ್ ಮುಖಂಡರಾದ ಕೆ.ಬಿ.ಪ್ರಸನ್ನ ಕುಮಾರ್, ಕಲಗೋಡು ರತ್ನಾಕರ್, ಎನ್.ರಮೇಶ್, ವೈ.ಹೆಚ್.ನಾಗರಾಜ್, ಹೆಚ್.ಸಿ.ಯೋಗೀಶ್, ರಮೇಶ್ ಇಕ್ಕೇರಿ, ಅನಿತಾಕುಮಾರಿ, ಶ್ಯಾಮ್‌ಸುಂದರ್,ಎಸ್.ಕೆ.ಮರಿಯಪ್ಪ, ಚಿನ್ನಪ್ಪ, ಬಲರಾಮ್ ಮತ್ತಿತರರಿದ್ದರು.

By admin

ನಿಮ್ಮದೊಂದು ಉತ್ತರ

error: Content is protected !!