ಶಿವಮೊಗ್ಗ
ಧಾರ್ಮಿಕ ಸ್ಥಳಗಳಲ್ಲಿ ಕಳ್ಳತನ ಪ್ರಕರಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ದೇವಸ್ಥಾನ, ಮಸೀದಿ, ಚರ್ಚ್ ಮತ್ತಿತರ ಸ್ಥಳಗಳ ಸುತ್ತಮುತ್ತಲೂ ಸಿಸಿ ಟಿವಿ ಕ್ಯಾಮೆರಾ ಅಳವಡಿ ಸುವಂತೆ ತೀರ್ಥಹಳ್ಳಿ ಪೊಲೀಸರು ಆಯಾ ಧಾರ್ಮಿಕ ಕ್ಷೇತ್ರಗಳ ಉಸ್ತುವಾರಿ ಸಮಿತಿಯವರಿಗೆ ಸೂಚಿಸಿದ್ದಾರೆ.
ಧಾರ್ಮಿಕ ಸ್ಥಳಗಳಲ್ಲಿ ಎಚ್.ಡಿ ಗುಣಮಟ್ಟದ ಸಿಸಿ ಟಿವಿ ಕ್ಯಾಮೆರಾಗಳನ್ನು ಕಡ್ಡಾಯವಾಗಿ ಅಳವಡಿಸಬೇಕು. ಅದರಲ್ಲಿನ ದೃಶ್ಯಾವಳಿಯ ಬ್ಯಾಕಪ್ ಕನಿಷ್ಠ ಒಂದು ತಿಂಗಳಿಗಿಂತ ಹೆಚ್ಚು ಇರಬೇಕು ಎಂದು ತಿಳಿಸಿ ನೋಟಿಸ್ ಹೊರಡಿಸಲಾಗಿದೆ.
ಹುಂಡಿ ಹಣ ವಿಲೇವಾರಿ: ದೇವಸ್ಥಾನ, ಮಸೀದಿ ಹಾಗೂ ಚರ್ಚ್‌ಗಳಲ್ಲಿ ಸಂಗ್ರಹವಾಗುವ ಹುಂಡಿ ಹಣ ಕೂಡಲೇ ಬ್ಯಾಂಕಿಗೆ ವಿಲೇವಾರಿ ಮಾಡಬೇಕು. ದೇವರ ಮೇಲಿರುವ ಒಡವೆಗಳು ಮತ್ತು ಇತರೆ ಬೆಲೆ ಬಾಳುವ ವಸ್ತುಗಳನ್ನು ರಾತ್ರಿ ವೇಳೆಯಲ್ಲಿ ಧಾರ್ಮಿಕ ಸ್ಥಳಗಳಲ್ಲಿ ಬಿಡದೇ ಬೇರೆ ಸುರಕ್ಷಿತ ಜಾಗದಲ್ಲಿ ಭದ್ರವಾಗಿ ಇಟ್ಟುಕೊಳ್ಳಬೇಕು ಎಂದು ಹೇಳಿದ್ದಾರೆ.
ಧಾರ್ಮಿಕ ಸ್ಥಳಗಳ ಸುತ್ತಲೂ ಸೂಕ್ತ ಬೆಳಕಿನ ವ್ಯವಸ್ಥೆ ಮಾಡಬೇಕು. ಭದ್ರತೆಗೆ ಎರಡು ಪಾಳಿಯಲ್ಲಿ ಸೆಕ್ಯುರಿಟಿ ಗಾರ್ಡ್‌ಗಳನ್ನು ನೇಮಿಸಿಕೊಳ್ಳಬೇಕು, ಬೀಗ, ಲಾಕಿಂಗ್ ವ್ಯವಸ್ಥೆ ಬಲವಾಗಿರುವಂತೆ ಮಾಡಬೇಕು. ದುಷ್ಕರ್ಮಿಗಳು ಕಳ್ಳತನಕ್ಕೆ ಪ್ರಯತ್ನಿಸಿದಲ್ಲಿ ಎಚ್ಚರಿಸಲು ಅಲಾರಾಂ ವ್ಯವಸ್ಥೆ ಅಳವಡಿಸಬೇಕು. ದೇವಸ್ಥಾನದ ಸುತ್ತಲೂ ಯಾರಾದರೂ ಅನುಮಾನಾಸ್ಪದ ವ್ಯಕ್ತಿಗಳು ಅಡ್ಡಾಡಿದರೆ ಸಹಾಯವಾಣಿ ಸಂಖ್ಯೆ ೧೧೨ ಇಲ್ಲವೇ ನಿಯಂತ್ರಣ ಕೊಠಡಿ, ಮೊಬೈಲ್ ನಂಬರ್ ೯೪೮೦೮೦೩೩೦೦ಗೆ ಸಂಪರ್ಕಿಸಲು ಹೇಳಲಾಗಿದೆ.
ಮುಂಜಾಗರೂಕತಾ ಕ್ರಮ: ತೀರ್ಥಹಳ್ಳಿ ತಾಲ್ಲೂಕಿನಲ್ಲಿ ಸದ್ಯ ಎಲ್ಲಿಯೂ ಧಾರ್ಮಿಕ ಸ್ಥಳಗಳಲ್ಲಿ ಕಳ್ಳತನ ಸೇರಿದಂತೆ ಅಪರಾಧ ಕೃತ್ಯಗಳು ನಡೆದಿಲ್ಲ. ಆದರೆ ನೆರೆ ಜಿಲ್ಲೆಗಳಲ್ಲಿ ಕಳ್ಳತನ ಕೃತ್ಯಗಳು ಹೆಚ್ಚಳಗೊಂ ಡಿರುವ ಬಗ್ಗೆ ಮಾಹಿತಿ ಬಂದ ಕಾರಣ ಮುಂಜಾಗರೂಕತಾ ಕ್ರಮವಾಗಿ ನಾವು ನೋಟಿಸ್ ಹೊರಡಿಸಿದ್ದೇವೆ ಎಂದು ತೀರ್ಥಹಳ್ಳಿ ಠಾಣೆ ಇನ್‌ಸ್ಪೆಕ್ಟರ್ ಅಶ್ವತ್ಥಗೌಡ ತಿಳಿಸಿದ್ದಾರೆ.