ವಿಶೇಷವರದಿ: ಮೋಹನ್ ಕಡಂದೆಲ


ಶಿವಮೊಗ್ಗ,ಜು.೩೦:
“ಸ್ಮಾರ್ಟ್” ಸಿಟಿ ಶಿವಮೊಗ್ಗಕ್ಕೆ ಕೆಲ ಖಾಲಿ ನಿವೇಶನಗಳು ಸಮಸ್ಯೆ ತಂದೊಡ್ಡುತ್ತಿವೆ. ನಿವೇಶನ ಮಾಲೀಕರು ಸರಿಯಾಗಿ ನಿರ್ವಹಣೆ ಮಾಡದ ಕಾರಣ ಗಿಡಗೆಂಟೆ ಬೆಳೆದು ಪೊದೆಗಳು ತಲೆ ಎತ್ತಿದ್ದರೆ, ಇನ್ನೂ ಕೆಲ ಸೈಟ್‌ಗಳಲ್ಲಿ ಕಸದ ರಾಶಿ ಕಣ್ಣಿಗೆ ರಾಚುತ್ತಾ “ಸ್ಮಾರ್ಟ್” ಸಿಟಿಯನ್ನೇ ಅಣಕಿಸುತ್ತಿವೆ.


ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಸಾವಿರಾರು ಖಾಲಿ ನಿವೇಶನಗಳಿವೆ. ಆದರೆ, ಇವುಗಳ ಮಾಲೀಕರು ನಿವೇಶನಗಳನ್ನು ಸರಿಯಾಗಿ ನಿರ್ವಹಣೆ ಮಾಡುತ್ತಿಲ್ಲ ಎಂಬುದು ಸತ್ಯ. ಇದರಿಂದ ನಿವೇಶನಗಳಲ್ಲಿ ಗಿಡಗೆಂಟೆ ಬೆಳೆದು ನಿಂತಿವೆ. ಅಲ್ಲದೆ, ನೆರೆಹೊರೆಯವರು ತಮ್ಮ ಮನೆಯಲ್ಲಿ ಪ್ರತಿನಿತ್ಯ ಉತ್ಪತ್ತಿಯಾಗುವ ಕಸವನ್ನು ಖಾಲಿ ನಿವೇಶದಲ್ಲಿ ಸುರಿಯುತ್ತಿರುವ ಕಾರಣ ಕಸದ ರಾಶಿ ಬಿದ್ದಿವೆ. ಹೀಗಾಗಿ ಸ್ಮಾರ್ಟ್ ಸಿಟಿ ಪರಿಕಲ್ಪನೆಯನ್ನೇ ಈ ಪೊದೆಗಳು ಹಾಗೂ ಕಸದ ರಾಶಿಗಳು ಕಣ್ಣಿಗೆ ರಾಚುತ್ತಿದೆ.


ಖಾಲಿ ನಿವೇಶನಗಳನ್ನು ನಿರ್ವಹಣೆ ಮಾಡುವುದೇ ಪಾಲಿಕೆಗೆ ದೊಡ್ಡ ತಲೆ ನೋವಾಗಿ ಪರಿಣಮಿಸಿದೆ. ಖಾಲಿ ನಿವೇಶನಗಳಲ್ಲಿ ಗಿಡಗೆಂಟೆ ಬೆಳೆದಿರುವ ಹಾಗೂ ಕಸದ ರಾಶಿ ಬಿದ್ದಿರುವ ಕಾರಣ ಹಂದಿ ಹಾಗೂ ನಾಯಿಗಳ ವಾಸ ಸ್ಥಾನವಾಗಿಯೂ ನಿರ್ಮಾಣವಾಗಿದೆ. ಮೊತ್ತೊಂದೆಡೆ ಸೊಳ್ಳೆ ಉತ್ಪತ್ತಿ ತಾಣವಾಗಿರುವ ಖಾಲಿ ಸೈಟ್‌ಗಳು ರೋಗಗಳನ್ನು ಹರಡುವ ಮೂಲವಾಗುತ್ತಿದ್ದು, ಸುತ್ತಮುತ್ತಲ್ಲಿನ ನಿವಾಸಿಗಳಲ್ಲಿ ಭಯ, ಆತಂಕ ಹುಟ್ಟಿಸಿವೆ. ಅಲ್ಲದೆ ಇದೀಗ ಮಳೆಗಾಲವಾದ್ದರಿಂದ ತ್ಯಾಜ್ಯಗಳು ಕೊಳೆತು ಗಬ್ಬು ನಾರುತ್ತಿದೆ. ಕೆಲವೆಡೆ ಅಕ್ಕಪಕ್ಕದ ಮನೆಯವರು ವಾಸ ಮಾಡಲು ಸಾಧ್ಯವಾಗದ ಪರಿಸ್ಥಿತಿ ಇದೆ.
ಪಾಲಿಕೆ ವ್ಯಾಪ್ತಿಯಲ್ಲಿರುವ ಕೆಲ ಖಾಲಿ ನಿವೇಶನಗಳಲ್ಲಂತೂ ಬೃಹದಾಕಾರವಾಗಿ ಗಿಡಗಳು ಬೆಳೆದು ನಿಂತಿವೆ. ಇಲ್ಲಿ ಹುಳು-ಹುಪ್ಪಡಿ, ಹಾವು-ಚೇಳುಗಳಂಥಹ ವಿಷ ಜಂತುಗಳ ಉಪಟಳ ಹೆಚ್ಚಾಗಿದೆ. ಪ್ರತಿಷ್ಟಿತ ಬಡಾವಣೆಗಲ್ಲಿರುವ ಖಾಲಿ ನಿವೇಶನಗಳ ಪರಿಸ್ಥಿತಿಯೂ ಇದಕ್ಕೆ ಹೊರತಾಗಿಲ್ಲ. ನಿವೇಶನಗಳ ಸ್ಥಿತಿ ಹೀಗಾಗಲು ಕಾರಣ ಒಮ್ಮೆ ನಿವೇಶನ ಖರೀದಿಸಿ ನೋಂದಾಯಿಸಿಕೊಂಡ ಮೇಲೆ ಬಹುತೇಕ ನಿವೇಶನಗಳ ಮಾಲೀಕರು ಅತ್ತ ತಲೆಯೇ ಹಾಕುವುದಿಲ್ಲ.


ತಮ್ಮ ಹೆಸರಿಗೆ ರಿಜಿಸ್ಟಾರ್ ಆಗಿಬಿಟ್ಟರೆ ಮುಗಿಯಿತು. ಮತ್ತೆ ಆ ಕಡೆ ತಲೆ ಹಾಕದ ಮಾಲೀಕರೇ ಹೆಚ್ಚು. ಹೀಗಾಗಿ ಮಾಲೀಕರನ್ನು ಪತ್ತೆಹಚ್ಚುವುದು ಕಷ್ಟವೇ ಸರಿ.
ಅಲ್ಲದೆ, ಬಹುತೇಕ ಮಾಲೀಕರಿಗೆ ಯಾವುದೇ ಕಟ್ಟಡ ಕಟ್ಟುವ ಉದ್ದೇಶವಿರುವುದಿಲ್ಲ. ಈಗಾಗಲೇ ವಾಸಕ್ಕೆ ಮನೆಯಿದ್ದರೂ ಮತ್ತೊಂದು ಸ್ವತ್ತಾಗಿ ಇರಲಿ ಎಂಬ ಕಾರಣಕ್ಕೆ ಖರೀದಿಸಿದ ಆಸ್ತಿಯಾಗಿರುತ್ತವೆ. ಇನ್ನು ಕೆಲವರು ಬೇರೆಲ್ಲೋ ವಾಸವಿದ್ದು ಶಿವಮೊಗ್ಗದಲ್ಲೊಂದು ನಿವೇಶನ ಇರಲಿ ಎಂದು ಖರೀದಿಸಿದವರಿದ್ದಾರೆ. ಹೀಗಾಗಿ ನಿವೇಶನ ಖರೀದಿಸಿದವರು ಇತ್ತ ಮಾರಾಟವೂ ಮಾಡದೆ, ಅತ್ತ ಮನೆಯನ್ನೂ ಕಟ್ಟದೇ ಖಾಲಿ ಬಿಟ್ಟ ಕಾರಣಕ್ಕೆ ಹಾಳು ಬಿದ್ದಿವೆ. ಅಕ್ಕ ಪಕ್ಕದ ನಿವಾಸಿಗಳು ಕಸ ತಂದು ಸುರಿಯುವುದಕ್ಕೆ, ಹಂದಿ- ನಾಯಿಗಳು ವಾಸ ಮಾಡಲು ಹೇಳಿ ಮಾಡಿಸಿದ ಜಾಗಗಳಾಗಿವೆ.


ಹಂದಿಗಳಿಗೆ ಗಿಡ, ಗೆಂಟೆ ಬೆಳದು ನಿಂತಿರುವ ಈ ಖಾಲಿ ನಿವೇಶನಗಳೇ ವಾಸ ಸ್ಥಾನ. ನಿವೇಶನಕ್ಕೆ ಅಕ್ಕಪಕ್ಕದ ಮನೆಯವರು ಎಸೆಯುವ ಉಳಿದ ಆಹಾರ ತಿಂದು ಸದಾ ಇಲ್ಲಿಯೇ ಬೀಡು ಬಿಟ್ಟಿರುತ್ತವೆ. ಸದಾ ಕಿತ್ತಾಡುತ್ತಾ ಜೋರಾಗಿ ಅರಚಾಡುವ ಈ ಹಂದಿಗಳು ಮಕ್ಕಳ ಮೇಲೂ ದಾಳಿ ಮಾಡಿರುವ ನಿದರ್ಶನಗಳಿವೆ.
ಪಾಲಿಕೆ ವ್ಯಾಪ್ತಿಯ ಪ್ರತಿಷ್ಠಿತ ಶರಾವತಿ ನಗರ, ಹೊಸಮನೆ, ಗೋಪಾಳ, ವಿದ್ಯಾನಗರ, ದುರ್ಗಿಗುಡಿ ತಿಲಕ್ ನಗರ ಮತ್ತಿತರ ಕಡೆಗಳಲ್ಲಿ ಸಮಸ್ಯೆ ಅತಿ ಹೆಚ್ಚಾಗಿದೆ. ಈ ಬಗ್ಗೆ ಸ್ಥಳೀಯ ಪಾಲಿಕೆ ಸದಸ್ಯರು ಹಾಗೂ ಪಾಲಿಕೆ ಆಡಳಿತದ ಗಮನಕ್ಕೆ ತಂದರು ಯಾವುದೇ ಪ್ರಯೋಜನ ಆಗಿಲ್ಲ ಎಂಬುದು ಸಾರ್ವಜನಿಕರ ದೂರು.

ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಸ್ಮಾರ್ಟ್ ಸಿಟಿ ಕಾಮಗಾರಿ ನಡೆಸುತ್ತಿದ್ದರು ಕೆಲವೆಡೆ ಯಾವುದೇ ಪ್ರಯೋಜನಕ್ಕೂ ಬರುತ್ತಿಲ್ಲ. ಕೆಲವು ಪ್ರತಿಷ್ಠಿತ ಬಡಾವಣೆಗಳಲ್ಲಿ ಖಾಲಿ ನಿವೇಶನಗಳೆ ಸಮಸ್ಯೆಗೆ ಮೂಲವಾಗಿದೆ. ಸರಿಯಾದ ನಿರ್ವಹಣೆ ಇಲ್ಲದೆ ಗಿಡಗಂಟಿಗಳು ಬೆಳೆದು ಹಂದಿ ನಾಯಿಗಳ ವಾಸ ಸ್ಥಾನವಾಗಿದೆ. ರೋಗ ರುಜಿನ ಹರಡುವ ಮೂಲವಾಗಿದೆ. ನಿವೇಶನಗಳನ್ನು ಸರಿಯಾಗಿ ನಿರ್ವಹಣೆ ಮಾಡದ ಮಾಲೀಕರ ವಿರುದ್ಧ ಪಾಲಿಕೆ ಆಡಳಿತ ಕ್ರಮ ಕೈಗೊಳ್ಳಬೇಕಿದೆ.
– ನಾಗರಾಜ್, ಸ್ಥಳೀಯ ನಿವಾಸಿ


ನಿವೇಶನ ಮಾಲೀಕರು ತಮ್ಮ ನಿವೇಶನವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು ಎಂಬ ಕಾನೂನು ಇದ್ದರೂ ಅದನ್ನು ಸಂಪೂರ್ಣ ಗಾಳಿಗೆ ತೂರಲಾಗಿದೆ. ಮಾಲೀಕರು ತಮ್ಮ ನಿವೇಶನಗಳನ್ನು ಸರಿಯಾಗಿ ನಿರ್ವಹಣೆ ಮಾಡದಿದ್ದರೆ ಕ್ರಮ ಕೈಗೊಳ್ಳಬಹುದು. ಮೊದಲು ಖಾಲಿ ನಿವೇಶನದ ಸ್ವಚ್ಛತೆ ಬಗ್ಗೆ ಮಾಲೀಕರಿಗೆ ನೋಟಿಸ್ ನೀಡಬಹುದು. ಪಾಲಿಸದಿದ್ದರೆ ಪಾಲಿಕೆಯೇ ಸ್ವಚ್ಛಗೊಳಿಸಿ ವೆಚ್ಚವನ್ನು ಮಾಲೀಕರಿಂದ ವಸೂಲಿ ಮಾಡಲು ಸಹ ಅವಕಾಶಗಳಿವೆ. ಇದ್ಯಾವುದಕ್ಕೂ ಬಗ್ಗದಿದ್ದರೆ, ಕಾಯಿದೆ ಪ್ರಕಾರ ಮುಟ್ಟುಗೋಲು ಹಾಕಿಕೊಳ್ಳುವ ಅಧಿಕಾರ ಸಹ ಪಾಲಿಕೆಗೆ ಇದೆ.
ಆದರೆ, ಮಹಾನಗರ ಪಾಲಿಕೆ ಆಡಳಿತ ಜಡ್ಡುಗಟ್ಟಿ ಹೋಗಿದೆ. ಖಾಲಿ ನಿವೇಶನಗಳನ್ನು ಸರಿಯಾಗಿ ನಿರ್ವಹಣೆ ಮಾಡದ ಮಾಲೀಕರ ವಿರುದ್ಧ ಕ್ರಮ ಜರುಗಿಸುವಲ್ಲಿ ಮೀನಾಮೇಷ ಏಣಿಸುತ್ತಿರುವುದರಿಂದಲೇ ಸಮಸ್ಯೆ ಹೆಚ್ಚಾಗಲು ಕಾರಣ ಎಂಬ ದೂರು ಸಾರ್ವಜನಿಕರಿಂದ ಕೇಳಿ ಬಂದಿದೆ. ಪಾಲಿಕೆ ಅಧಿಕಾರಿಗಳು ತಕ್ಷಣವೇ ನಿವೇಶನ ಮಾಲೀಕರ ವಿರುದ್ಧ ಕ್ರಮ ಕೈಗೊಳ್ಳಬೇಕು. ಶಿವಮೊಗ್ಗ ನಗರವನ್ನು “ಸ್ಮಾರ್ಟ್” ಸಿಟಿಯನ್ನಾಗಿಸಲು ಪಾಲಿಕೆ ಆಡಳಿತ ಮುಂದಾಗಬೇಕು ಎಂದು ನಾಗರಿಕರು ಆಗ್ರಹಿಸಿದ್ದಾರೆ. ಇನ್ನಾದರೂ ಪಾಲಿಕೆ ಆಡಳಿತ ಈ ನಿಟ್ಟಿನಲ್ಲಿ ಚುರುಕು ಮುಟ್ಟಿಸುವುದೇ ಕಾದು ನೋಡಬೇಕಿದೆ.

By admin

ನಿಮ್ಮದೊಂದು ಉತ್ತರ

You missed

error: Content is protected !!