ಶಿವಮೊಗ್ಗ,
ಶಾಸಕ ಕೆ.ಎಸ್. ಈಶ್ವರಪ್ಪ ಅವರು ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ ಎಂದು ಮಾಜಿ ಶಾಸಕ ಕೆ.ಬಿ. ಪ್ರಸನ್ನಕುಮಾರ್ ಆರೋಪಿಸಿದರು.

ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕೃಷಿ ನಗರದ ಬಡಾವಣೆಯಲ್ಲಿ ಒಂದು ಮುಖ್ಯ ರಸ್ತೆ ಮತ್ತು ಸಂಪರ್ಕ ರಸ್ತೆ ಇಲ್ಲ. 2023 ರ ಚುನಾವಣೆಯಲ್ಲಿ ಈಶ್ವರಪ್ಪನವರು ರಸ್ತೆ ಮಾಡಿಸುವ ಭರವಸೆ ನೀಡಿದ್ದರು. ಆದರೆ, ಆಗ ಅವರಿಗೆ ಆ ಭಾಗದ ಮತದಾರರಿಂದ ಹೆಚ್ಚಿನ ಮತ ಬಂದಿರಲಿಲ್ಲ. ನನಗೂ ಬಂದಿರಲಿಲ್ಲ. ಕೆಜೆಪಿ ಪಕ್ಷದಲ್ಲಿದ್ದ ರುದ್ರೇಗೌಡರಿಗೆ ಹೆಚ್ಚು ಮತಗಳು ಬಂದಿದ್ದವು. ಇದನ್ನೇ ಗುರಿಯಾಗಿಟ್ಟುಕೊಂಡು ಕೃಷಿ ನಗರದಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ಈಶ್ವರಪ್ಪ ಕೈಗೊಂಡಿಲ್ಲ. ಅವರ ಅಸಡ್ಡೆಯಿಂದ ಮತ್ತು ದ್ವೇಷದ ರಾಜಕಾರಣದಿಂದ ಎಲ್ಲೆಲ್ಲಿ ಅವರಿಗೆ ಮತಗಳು ಕಡಿಮೆ ಬಂದಿವೆಯೋ ಅಲ್ಲಲ್ಲಿ ಅಭಿವೃದ್ಧಿಗೆ ಹಿನ್ನಡೆಯಾಗಿದೆ ಎಂದರು.

ನಗರದಲ್ಲಿ ಅಕ್ರಮ ಚಟುವಟಿಕೆಗಳು ಹೆಚ್ಚುತ್ತಿವೆ. ಗಾಂಜಾ, ಮಟ್ಕಾ, ಕೊಲೆ, ದರೋಡೆಯಂತಹ ಅಪರಾಧ ಚಟುವಟಿಕೆಗಳು ನಡೆಯುತ್ತಿದ್ದರೂ ಈಶ್ವರಪ್ಪ ಯಾವುದೇ ಕ್ರಮ ಕೈಗೊಳ್ಳದೇ ಒಂದು ರೀತಿಯಲ್ಲಿ ಅಪರಾಧ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡುತ್ತಿದ್ದಾರೆ. ಪೊಲೀಸರ ಮೇಲೆ ಹಲ್ಲೆಯಾದರೂ ಕೇಳುವವರಿಲ್ಲ. ಕಾಲೇಜ್ ಆವರಣದಲ್ಲಿ ವಿದ್ಯಾರ್ಥಿಗಳು ಕುಡಿದು ನೃತ್ಯ ಮಾಡಿದರೂ ಒಂದು ಕೇಸ್ ದಾಖಲಿಸಿಕೊಳ್ಳುವುದಿಲ್ಲ. ಅಂಕೆಯೂ ಶಂಕೆಯೂ ಇಲ್ಲ ಎಂದು ದೂರಿದರು.

೨೦೧೯ ರಲ್ಲಿ ಮಳೆಯಿಂದ ನಗರದಲ್ಲಿ ಅನೇಕ ಆಸ್ತಿ ಪಾಸ್ತಿಗಳಿಗೆ ನಷ್ಟವಾಗಿತ್ತು. ಆ ಪರಿಹಾರ ಇನ್ನೂ ಸಿಕ್ಕಿಲ್ಲ. ಪರಿಹಾರಕ್ಕೆ ಅರ್ಜಿ ಹಾಕಿದವರು ಜಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ. ಶಾಸಕರು ಕನಿಷ್ಟಪಕ್ಷ ತಮ್ಮ ಅವಧಿ ಮುಗಿಯುವುದರೊಳಗಾದರೂ ಪರಿಹಾರ ಕೊಡಿಸಲಿ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಶ್ಯಾಮಸುಂದರ್, ದೀಪಕ್ ಸಿಂಗ್, ರಘು, ಲಕ್ಷ್ಮಣ್, ಬೊಮ್ಮನಕಟ್ಟೆ ಮಂಜುನಾಥ್, ಚಂದ್ರಶೇಖರ್, ವೆಂಕಟೇಶ್ ಇದ್ದರು.