ಮಲೆನಾಡು ಭಾಗದ ಪದವೀಧರ ನಿರುದ್ಯೋಗಿಗಳು ಬೆಂಗಳೂರಿಗೆ ಹೋಗಿ ಉದ್ಯೋಗ ಸಂದರ್ಶನ ಎದುರಿಸುವುದು ಸವಾಲಿನ ಕೆಲಸ. ಸ್ಥಳೀಯವಾಗಿ ಇಂತಹ ಸಂದರ್ಶನ ಏರ್ಪಡಿಸಿ ಉದ್ಯೋಗ ಸಿಗುವುದನ್ನು ಸುಲಭ ಸಾಧ್ಯವಾಗಿಸುವುದು ಅನುಕರಣೀಯ ಕೆಲಸ ಎಂದು ಸಾರಗನಜಡ್ಡು ಶ್ರೀಕ್ಷೇತ್ರ ಕಾತಿಕೇಯದ ಶ್ರೀ ಯೋಗೇಂದ್ರ ಸ್ವಾಮಿಗಳು ತಿಳಿಸಿದರು.


ಇಲ್ಲಿನ ಚರ್ಚ್ ಹಾಲ್‌ನಲ್ಲಿ ನವಚೇತನ ವೇದಿಕೆ ವತಿಯಿಂದ ಆಯೋಜಿಸಿದ್ದ ಉದ್ಯೋಗ ಮೇಳಕ್ಕೆ ಚಾಲನೆ ನೀಡಿ ಅವರು ಮಾತನಾಡುತ್ತಾ, ಉದ್ಯೋಗ ಕೊಡುವುದು ಅತ್ಯಂತ ಶ್ರೇಷ್ಟವಾದ ಕೆಲಸ ಎಂದರು.
ಸರ್ಕಾರ ಮಕ್ಕಳಿಗೆ ವಿದ್ಯೆ ಕೊಟ್ಟರೆ ಸಾಲದು. ವಿದ್ಯೆಗೆ ತಕ್ಕಂತಹ ಉದ್ಯೋಗವನ್ನು ನೀಡಲು ಸಹ ಗಮನ ಕೊಡಬೇಕು.

ಎಲ್ಲ ಸಾಮಾಜಿಕ ಕೆಲಸಗಳ ಜೊತೆಗೆ ಉದ್ಯೋಗ ಕೊಡಿಸುವುದು ಅನುಕರಣೀಯವಾಗಿದೆ. ಮಕ್ಕಳು ಅವಕಾಶ ಸಿಕ್ಕಿದಾಗ ಅದನ್ನು ಬಳಸಿ ಕೊಂಡು ಉನ್ನತ ಸ್ಥಾನಕ್ಕೆ ತಲುಪುವತ್ತ ಗಮನ ಹರಿಸಬೇಕು. ನವಚೇತನ ವೇದಿಕೆ ಮೂಲಕ ಪ್ರಶಾಂತ್ ಮತ್ತು ತಂಡದವರು ಉದ್ಯೋಗ ಕೊಡಿಸುವ ನಿಟ್ಟಿನಲ್ಲಿ ಮಾಡುತ್ತಿರುವ ಕೆಲಸ ಮೆಚ್ಚುವಂತಹದ್ದಾಗಿದೆ ಎಂದು ಹೇಳಿದರು.


ಉಪ ಪೊಲೀಸ್ ವರಿಷ್ಠಾಧಿಕಾರಿ ರೋಹನ್ ಜಗದೀಶ್ ಮಾತನಾಡಿ, ಸಾಗರದಲ್ಲಿ ಸಾಕಷ್ಟು ಪ್ರತಿಭಾವಂತರಿದ್ದಾರೆ. ಅವರ ವಿದ್ಯಾರ್ಹತೆಗೆ ತಕ್ಕ ಉದ್ಯೋಗ ಇಂತಹ ಮೇಳಗಳ ಮೂಲಕ ಕಲ್ಪಿಸಲು ಸಾಧ್ಯವಿದೆ. ನಮ್ಮಲ್ಲಿ ಪ್ರತಿವರ್ಷ ಪದವಿ ಪಡೆದು ಸಾಕಷ್ಟು ಜನರು ಹೊರಗೆ ಬರುತ್ತಾರೆ. ಅಂತಹವರ ಕೈಗೆ ಉದ್ಯೋಗ ಕೊಟ್ಟರೆ ಅವರ ಭವಿಷ್ಯ ಭದ್ರವಾಗುತ್ತದೆ. ಬೆಂಗಳೂರಿನಲ್ಲಿ ಉದ್ಯೋಗ ಮೇಳಗಳನ್ನು ನಡೆಸುವುದು ಸುಲಭ. ಆದರೆ ಸಾಗರದಂತಹ ಪ್ರದೇಶಕ್ಕೆ ಹೆಸರಾಂತ ಕಂಪನಿಗಳನ್ನು ಕರೆಸಿ ಉದ್ಯೋಗ ಕೊಡಿಸುವುದು ಅಭಿನಂದಾರ್ಹ ಕೆಲಸವಾಗಿದೆ ಎಂದು ಹೇಳಿದರು.


ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ವೇದಿಕೆ ಅಧ್ಯಕ್ಷ ಪ್ರಶಾಂತ್ ಕೆ.ಎಸ್., ೨೦೧೪ರಲ್ಲಿ ನಮ್ಮ ವೇದಿಕೆ ಉದ್ಯೋಗ ಮೇಳದ ಮೂಲಕ ಅಸ್ತಿತ್ವಕ್ಕೆ ಬಂದಿತು. ಅಂದು ಸುಮಾರು ೭೦೦ ಜನರಿಗೆ ಉದ್ಯೋಗ ಕಲ್ಪಿಸಲಾಗಿತ್ತು. ಕಳೆದ ಎರಡು ವರ್ಷ ಕೊರೋನಾ ಹಿನ್ನೆಲೆಯಲ್ಲಿ ಉದ್ಯೋಗ ಮೇಳ ನಡೆಸಲು ಸಾಧ್ಯವಾಗಿಲ್ಲ. ಈ ಉದ್ಯೋಗ ಮೇಳದಲ್ಲಿ ಪಾಲ್ಗೊಂಡ ಶೇ, ೯೦ಕ್ಕೂ ಹೆಚ್ಚಿನ ಅಭ್ಯರ್ಥಿಗಳಿಗೆ ಉದ್ಯೋಗ ಸಿಗುವ ಭರವಸೆ ಇದೆ. ನಿರುದ್ಯೋಗಿಗಳು ಹತಾಶರಾಗದೆ ನಿರಂತರ ಪ್ರಯತ್ನ ನಡೆಸಿದರೆ ತಮ್ಮ ಅರ್ಹತೆಗೆ ತಕ್ಕ ಉದ್ಯೋಗ ಖಂಡಿತಾ ಸಿಗುತ್ತದೆ ಎಂದರು.


ವೇದಿಕೆಯಲ್ಲಿ ಸಂತ ಜೋಸೆಫ್ ಚರ್ಚ್‌ನ ಧರ್ಮಗುರುಗಳಾದ ಫಾದರ್ ಫೆಲಿಕ್ಸ್ ನೊರೋನಾ, ಗ್ಯಾಲಗೇರ್ ಸಂಸ್ಥೆಯ ಅವಿನಾಶ್ ಅಶೋಕ್, ಜಯಂತ್ ನಾಗರಾಜ್, ಜೋಸಿ ಖುಷ್ಬು, ರಾಘವೇಂದ್ರ, ಮಧುರಾವ್, ಪವನ್ ಆವಿನಹಳ್ಳಿ, ವಿಶ್ವ ತಳಗೇರಿ, ಲೋಹಿತ್ ಸಿರವಾಳ, ನಾಗರಾಜ್ ಸಾಲಕೋಡು, ಲಂಕೇಶ್ ಹಾರಿಗೆ, ಶ್ರೀಕಾಂತ್ ಹೆನಗೆರೆ, ಸಂಜಯ್, ಹರೀಶ್ ಕೆಳದಿ ಇನ್ನಿತರರು ಹಾಜರಿದ್ದರು

By admin

ನಿಮ್ಮದೊಂದು ಉತ್ತರ

error: Content is protected !!