ಶಿವಮೊಗ್ಗ, ಜೂ.23:
ದೇಶದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನಾಯಕತ್ವದ ಬಿಜೆಪಿ ನೇತೃತ್ವದ NDA ಒಕ್ಕೂಟ ದ ರಾಷ್ಟ್ರಪತಿ ಅಭ್ಯರ್ಥಿ ದ್ರೌಪದಿ ಮುರ್ಮು ಅವರ ಆಯ್ಕೆ ಅತ್ಯಂತ ಸೂಕ್ತವಾದದ್ದು ಎಂದು ಬಿಜೆಪಿ ಮಹಿಳಾ ಮೋರ್ಚಾ ಸಂತಸ ವ್ಯಕ್ತಪಡಿಸಿದೆ.


ದ್ರೌಪದಿ ಮುರ್ಮು ಸಾಮಾನ್ಯ ಹೆಣ್ಣು ಮಗಳಲ್ಲ. ಬುಡಕಟ್ಟು ಜನಾಂಗದಲ್ಲಿ ಜನಿಸಿ, ರಮಾದೇವಿ ಕಾಲೇಜಿನಲ್ಲಿ ಗ್ರಾಜುಯೇಶನ್ ಮುಗಿಸಿ 1979 ರಿಂದ 1983 ರ ವರೆಗೆ ಒಡಿಸ್ಸಾ ಸರ್ಕಾರದಲ್ಲಿ ನೀರಾವರಿ ಹಾಗೂ ವಿದ್ಯುತ್ ಇಲಾಖೆಯಲ್ಲಿ ಜ್ಯೂನಿಯರ್ ಆಗಿ ಕೆಲಸ ಮಾಡಿದವರು. ಕಾಡಿನಲ್ಲಿ ಬೆಳೆದು ಸಂಘರ್ಷದ ಮೂಲಕ ಬದುಕು ಕಟ್ಟಿಕೊಂಡವರು.
ತನ್ನ ಸಮುದಾಯದ ಹೆಣ್ಣು ಮಕ್ಕಳ ಬದುಕು ಕಟ್ಟುವ ಛಲದಿಂದ, ವನವಾಸಿಗಳಿಗೆ ನಾಯಕತ್ವ ಕೊಡುವ ಹಠದಿಂದ ಆಕೆ ಆಯ್ದುಕೊಂಡಿದ್ದು ರಾಜಕೀಯ ಕ್ಷೇತ್ರ. ಸೇವಾ ಆಕಾಂಕ್ಷಿಯಾಗಿ ಅರಬಿಂದೋ ಇಂಟರ್ಗಲ್ ಎಜುಕೇಶನ್ ಸೆಂಟರ್ ನಲ್ಲಿ ಸಹಾಯಕಿ ಪ್ರೋಫೇಸರ್ ಆಗಿ ಕಾರ್ಯ ನಿರ್ವಹಿಸುತ್ತಿರುವಾಗಲೆ ಆಕೆ 1997 ರ ರಾಯರಂಗ್ ಪುರದಲ್ಲಿ ಸ್ಥಳಿಯ ಸಂಸ್ಥೆ ಚುನಾವಣೆಯಲ್ಲಿ ಗೆದ್ದು NAC ಯ ಉಪಾಧ್ಯಕ್ಷರಾಗಿ ಬುಡಕಟ್ಟು ಜಗತ್ತಿನ ನಾಯಕಿಯಾಗಿ ಹೊರ ಹೊಮ್ಮಿದ್ದರು.


ಬೂತ್ ಮಟ್ಟದ ಕಾರ್ಯಕರ್ತೆಯಾಗಿ ಸೇವೆ ಮಾಡಿ ನಂತರ ಭಾರತೀಯ ಜನತಾ ಪಾರ್ಟಿಯಿಂದ ರಾಯ್ ರಂಗ್ ಕ್ಷೇತ್ರದಿಂದ 2000 ರಿಂದ ಎರಡು ಬಾರಿ ಶಾಸಕಿಯಾಗಿ, ಒಡಿಸ್ಸಾ ಸರ್ಕಾರದಲ್ಲಿ ಎರಡು ಬಾರಿ ಹಲವು ಖಾತೆಗಳ ಮಂತ್ರಿಯಾಗಿ, ಒಡಿಸ್ಸಾ ರಾಜ್ಯದ ಅತ್ಯುತ್ತಮ ಶಾಸಕಿಯಾಗಿ ನಿಲಕಂಠ ಪ್ರಶಸ್ತಿ ಪಡೆದ ಗಟ್ಟಿಗಿತ್ತಿ ಹೆಣ್ಣು ಮಗಳು ದ್ರೌಪದಿ ಮುರ್ಮು. ಭಾರತೀಯ ಜನತಾ ಪಾರ್ಟಿಯ ST ಮೊರ್ಚಾದ ರಾಷ್ಟ್ರೀಯ ಕಾರ್ಯಕಾರಿ ಸಮಿತಿಯ ಸದಸ್ಯರಾಗಿ 2002 -2006 ರ ವರೆಗೆ ಹಾಗೂ 2006-2009 ಒಡಿಸ್ಸಾದ ST ಮೋರ್ಚಾ ಅಧ್ಯಕ್ಷರಾಗಿ, 2013-2015 ST ಮೊರ್ಚಾ ರಾಷ್ಟ್ರೀಯ ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಒಡಿಸ್ಸಾ ದಾದ್ಯದಂತ ಪ್ರವಾಸ ಮಾಡಿ ಪಕ್ಷ ಸಂಘಟಿಸಿ,ಜರ್ಖಾಂಡ್ ರಾಜ್ಯದ ಮೊದಲ ಮಹಿಳಾ ಗವರ್ನರ್ ಆಗಿ ಸಾಮಾಜಿಕವಾಗಿ, ರಾಜಕೀಯವಾಗಿ ಅತ್ಯಂತ ಶ್ರೇಷ್ಠತೆಯ ಎತ್ತರಕ್ಕೆ ಏರಿರುವ ಮುರ್ಮುರವರ ಆಯ್ಕೆ ಬಹುತೇಕ ಖಚಿತ ಎಂದಿದ್ದಾರೆ.


ಸಾಮಾಜಿಕ ನ್ಯಾಯದ ಭರವಸೆಯನ್ನು ಮತ್ತಷ್ಟು ಗಟ್ಟಿಗೊಳಿಸಿ, ಪ್ರಜಾಪ್ರಭುತ್ವ ಹಾಗೂ ಸಂವಿಧಾನದ ಆಶಯಗಳನ್ನು ಪೂರ್ಣಗೊಳಿಸುತ್ತ, ಕಟ್ಟ ಕಡೆಯ ವ್ಯಕ್ತಿಯು ದೇಶದ ಸರ್ವ ಶ್ರೇಷ್ಠ ಹುದ್ದೆಯನ್ನು ಅಲಂಕರಿಸಬಹುದು ಎಂದು ಜಗತ್ತಿಗೆ ತೋರಿಸುವ ಮೂಲಕ ಭಾರತ ಎಂದಿಗೂ ಒಂದು ಸರ್ವ ಶ್ರೇಷ್ಠ ರಾಷ್ಟ್ರ ಎನ್ನುವುದನ್ನು ಸಾಬೀತು ಪಡಿಸಿ, ವನವಾಸಿ ಹೆಣ್ಣುಮಗಳೊಬ್ಬಳನ್ನು ರಾಷ್ಟ್ರಪತಿ ಮಾಡುತ್ತಿರುವ ಭಾರತೀಯ ಜನತಾ ಪಾರ್ಟಿಯ ನಿರ್ಧಾರವನ್ನು ಶಿವಮೊಗ್ಗ ನಗರ ಬಿಜೆಪಿ ಮಹಿಳಾ ಮೋರ್ಚಾ ಹೆಮ್ಮೆಯಿಂದ ಹಾಗೂ ಸಂತಸದಿಂದ ಸ್ವಾಗತಿಸುತ್ತದೆ ಎಂದು ಅಧ್ಯಕ್ಷರಾದ ಸುರೇಖ ಮುರಳೀಧರ್, ಪ್ರಧಾನ ಕಾರ್ಯದರ್ಶಿಗಳಾದ ರಶ್ಮಿ ಶ್ರೀನಿವಾಸ್ ಹಾಗೂ ಆರತಿ ಪ್ರಕಾಶ್ ತಿಳಿಸಿದ್ದಾರೆ.

By admin

ನಿಮ್ಮದೊಂದು ಉತ್ತರ

error: Content is protected !!