ಶಿವಮೊಗ್ಗ,
ಮನುಜಮತ, ವಿಶ್ವಪಥ, ಸರ್ವೋದಯ, ಸಮನ್ವಯ, ಪೂರ್ಣದೃಷ್ಟಿ ಎಂಬ ಕುವೆಂಪು ಅವರ ಈ ಪಂಚಮಂತ್ರ ಬದುಕಿನ ಸೂತ್ರವಾಗಬೇಕು. ಶಿಕ್ಷಣದ ಮೂಲಕ ಇದನ್ನು ಪ್ರತಿಯೊಬ್ಬರ ಮನಸ್ಸಿನಲ್ಲಿಯೂ ಪ್ರತಿಷ್ಠಾಪಿಸಬೇಕು. ಮಾನವೀಯ ಮೌಲ್ಯಗಳನ್ನು ಕಲಿಸುವ ಶಿಕ್ಷಣದಿಂದ ಮಾತ್ರ ಸದೃಢ ಸಮಾಜ ನಿರ್ಮಾಣ ಸಾಧ್ಯವೆಂದು ಮಹಾನಗರ ಪಾಲಿಕೆ ಆಯುಕ್ತ ಕೆ.ಮಾಯಣ್ಣ ಗೌಡ ಹೇಳಿದರು.
ನಗರದ ಕುವೆಂಪು ಶತಮಾನೋತ್ಸವ ಶಿಕ್ಷಣ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ೨೦೨೨-೨೩ನೇ ಶೈಕ್ಷಣಿಕ ಸಾಲಿನ ವಿದ್ಯಾರ್ಥಿ ಮತ್ತು ಸಾಂಸ್ಕೃತಿಕ ಸಂಘದ ಉದ್ಘಾಟನೆ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಮನುಷ್ಯನಿಗೆ ಬೇಕಾಗಿರುವುದು ಆ ಮತ ಈ ಮತವಲ್ಲ, ಬೇಕಿರುವುದು ಮನುಜಮತ. ಆ ಪಥ ಈ ಪಥವಲ್ಲ ಬದಲಿಗೆ ವಿಶ್ವಪಥ. ಯಾರೊಬ್ಬರ ಉದಯ ಮಾತ್ರವಲ್ಲ; ಸರ್ವರ ಸರ್ವಸ್ತರದ ಉದಯ. ಅದುವೇ ಸರ್ವೋದಯ. ಪರಸ್ಪರ ವಿಮುಖವಾಗಿ ಸಿಡಿದು ಹೋಗುವ ಬದಲು ಸಮನ್ವಯಗೊಳ್ಳಬೇಕು. ಮಿತಮ ತದ ಆಂಶಿಕ ದೃಷ್ಟಿ, ಭೌತಿಕ, ಪಾರಮಾರ್ಥಿಕ ಎಂಬ ಭಿನ್ನ ದೃಷ್ಟಿಯಲ್ಲ; ಎಲ್ಲವನ್ನು ಸಮಷ್ಟಿಯ ದೃಷ್ಟಿಯಿಂದ ಕಾಣುವುದೇ ಪೂರ್ಣದೃಷ್ಟಿಯಾಗಬೇಕೆಂದರು.
ಕುವೆಂಪು ವಿವಿ ಕುಲಪತಿ ಪ್ರೊ.ಬಿ.ಪಿ. ವೀರಭದ್ರಪ್ಪ ಮಾತನಾಡಿ, ಸಮಾಜದ ನೈತಿಕ ಮತ್ತು ಸಾಮಾಜಿಕ ರಚನೆಯನ್ನು ಬಲಪಡಿಸುವ ಸವಾಲಿಗೆ ಉತ್ತರವಾಗಿ ಜಾಗತಿಕ ಮಟ್ಟದಲ್ಲಿ ಮೌಲ್ಯ ಶಿಕ್ಷಣವನ್ನು ಗ್ರಹಿಸಲಾಗಿದೆ. ಮೌಲ್ಯಯುತ ಶಿಕ್ಷಣದ ಹಿಂದಿನ ಪ್ರಮುಖ ಪರಿಕಲ್ಪನೆಯು ವಿದ್ಯಾರ್ಥಿಗಳ ನಡುವೆ ಅತ್ಯಮೂಲ್ಯ ವಾದ ಮೌಲ್ಯಗಳನ್ನು ಅಭಿವೃದ್ಧಿಪಡಿಸುವುದು ಮತ್ತು ಇದು ಮುಂದುವರೆಸಬಹುದು ಮತ್ತು ಇನ್ನಷ್ಟು ಅಭಿವೃದ್ಧಿಪಡಿಸಬಹುದಾದ ಸಂಕೀರ್ಣತೆಯನ್ನು ನಿರ್ವಹಿಸಲು ಕಲಿಸುತ್ತದೆ ಎಂದು ತಿಳಿಸಿದರು.
ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ಎನ್.ಹೆಚ್. ಶ್ರೀಕಾಂತ್ ಅಧ್ಯಕ್ಷತೆ ವಹಿಸಿದ್ದರು. ಕುವೆಂಪು ವಿವಿ ಶಿಕ್ಷಣ ನಿಕಾಯದ ಡೀನ್ ಡಾ.ಗೀತಾ ಸಿ., ಗಾಯಕಿ ಸುರೇಖಾ ಹೆಗ್ಡೆ, ಜಿಲ್ಲಾ ಒಕ್ಕಲಿಗರ ಸಂಘದ ಉಪಾಧ್ಯಕ್ಷ ಹೆಚ್.ಬಿ.ಆದಿಮೂರ್ತಿ, ವನಮಾಲ, ಪ್ರಾಂಶುಪಾಲ ಡಾ.ಮಧು ಜಿ. ಮತ್ತಿತರರು ಉಪಸ್ಥಿತರಿದ್ದರು.
ನೌಶದ್ ಹರ್ಲಾಪುರ್ ಪ್ರಾರ್ಥಿಸಿ, ಎನ್.ಜೆ.ಪ್ರಕಾಶ್ ಸ್ವಾಗತಿಸಿ, ಸವಿತ ಎಂ.ಎಸ್.ನಿರೂಪಿಸಿ, ಶಾಜೀಯಾ ಫರೀನ್ ವಂದಿಸಿದರು.