ಶಿವಮೊಗ್ಗ, ಮೇ. 10 : ಗೃಹ ಸಚಿವ ಆರಗ ಜ್ಞಾನೇಂದ್ರ ತವರು ಕ್ಷೇತ್ರದಲ್ಲಿ ಪಿಎಸ್‌ಐ ನೇಮಕಾತಿ ಹೆಸರಿನಲ್ಲಿ ದೊಡ್ಡ ಮಟ್ಟದ ಡೀಲ್ ನಡೆದಿರುವ ಆರೋಪ ಕೇಳಿ ಬಂದಿದೆ.

ಗೃಹ ಸಚಿವ ಆರಗ ಜ್ಞಾನೇಂದ್ರ ತೀರ್ಥಹಳ್ಳಿ ಕ್ಷೇತ್ರದ ಶಾಸಕರು. ತವರು ಕ್ಷೇತ್ರದ ಇಬ್ಬರು ಕಿರಿಯ ಜನ ಪ್ರತಿನಿಧಿಗಳು ಸಚಿವರ ಹೆಸರು ಹೇಳಿ ಪಿಎಸ್‌ಐ ಆಕಾಂಕ್ಷಿಗಳಿಂದ ಲಕ್ಷಾಂತರ ರೂಪಾಯಿ ವಸೂಲಿ ಮಾಡಿರುವ ವಿಚಾರ ತಾಲೂಕಿನಲ್ಲಿ ದೊಡ್ಡ ಮಟ್ಟದ ಚರ್ಚೆ ನಡೆಯುತ್ತಿದೆ.

ಗ್ರಾಮ ಪಂಚಾಯಿತಿ ಅಧ್ಯಕ್ಷರೊಬ್ಬರು ಹಾಗೂ ತಾಲೂಕು ಪಂಚಾಯಿತಿ ಸದಸ್ಯರೊಬ್ಬರು ಇಬ್ಬರೂ ಸೇರಿ, ಗೃಹ ಸಚಿವರು ನಮಗೆ ತುಂಬಾ ಚೆನ್ನಾಗಿ ಗೊತ್ತಿದ್ದಾರೆ ಎಂದು ಬಿಂಬಿಸಿಕೊಂಡಿದ್ದರು. ಕಾಕತಳೀಯ ಎಂಬಂತೆ ಪಿಎಸ್‌ಐ ಕೆಲಸ ಕೊಡಿಸುವಂತೆ ಕೆಲವು ಅಭ್ಯರ್ಥಿಗಳು ಈ ಇಬ್ಬರು ನಾಯಕರನ್ನು ಸಂಪರ್ಕಿಸಿದ್ದಾರೆ ಎಂಬ ಮಾಹಿತಿ ಇದೆ.

ಕೆಲವು ಪಿಎಸ್‌ಐ ಆಕಾಂಕ್ಷಿಗಳು ಈ ಇಬ್ಬರು ಮಿನಿ ನಾಯಕರನ್ನು ಸಂಪರ್ಕಸಿ ಹಣ ಪಾವತಿಸಿದ್ದಾರೆ ಎಂದು ತೀರ್ಥಹಳ್ಳಿಯ ಬೀದಿ ಬೀದಿಯಲ್ಲೂ ಜನರು ಮಾತನಾಡುತ್ತಿದ್ದಾರೆ. ಗೃಹ ಸಚಿವರ ಹೆಸರಿನಲ್ಲಿ ಎತ್ತುವಳಿ ಮಾಡಿರುವ ವಿಚಾರ ಈಗಾಗಲೇ ಗೃಹ ಸಚಿವರ ಗಮನಕ್ಕೆ ಹೋಗಿದ್ದು, ವಿಚಾರಣೆ ನಡೆಸುವಂತೆ ಸೂಚನೆ ನೀಡಿದ್ದಾರೆ ಎಂಬ ಸುದ್ದಿಯೂ ಹಬ್ಬಿದೆ.

ಹೀಗಾಗಿ ಇಬ್ಬರನ್ನು ಸಿಐಡಿ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದರೂ ಅಚ್ಚರಿ ಪಡಬೇಕಿಲ್ಲ. ಹಣ ಪಡೆದು ಪಿಎಸ್‌ಐ ಹುದ್ದೆ ಕೊಡಿಸದೇ ಮೋಸ ಮಾಡಿದಲ್ಲಿ ಇದು ವಂಚನೆ ಹೆಸರಿನಲ್ಲಿ ಪ್ರತ್ಯೇಕ ಕೇಸು ದಾಖಲಾಗಿ ವಿಚಾರಣೆ ನಡೆಸಲಿದ್ದಾರೆ ಎಂದು ತಿಳಿದು ಬಂದಿದೆ.

ಪಿಎಸ್‌ಐ ನೇಮಕಾತಿ ಅಕ್ರಮಕ್ಕೆ ಸಂಬಂಧಿಸಿದಂತೆ ಸಿಐಡಿ ಅಧಿಕಾರಿಗಳು ಪಾರದರ್ಶಕ ತನಿಖೆ ನಡೆಸುತ್ತಿದ್ದಾರೆ. ಇದರಲ್ಲಿ ಯಾರೇ ಶಾಮೀಲಾಗಿದ್ದರೂ ಬಂಧಿಸದೇ ಬಿಡಲ್ಲ. ಮುಲಾಜಿಲ್ಲದೇ ಕಠಿಣ ಕ್ರಮ ಜರುಗಿಸಲು ಸೂಚಿಸಿದ್ದೇನೆ” ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿಕೆ ನೀಡಿದ್ದರು.

By admin

ನಿಮ್ಮದೊಂದು ಉತ್ತರ

error: Content is protected !!