ಶಿವಮೊಗ್ಗ: ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಅವರಿಗೆ ಕ್ಲೀನ್ ಚಿಟ್ ನೀಡಿದಂತೆ ಸಚಿವ ಅಶ್ವತ್ಥನಾರಾಯಣ ಅವರಿಗೂ ಸರ್ಕಾರ ರಕ್ಷಣೆ ಮಾಡಲು ಮುಂದಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಆರೋಪಿ ಸಿದರು.
ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೇ ಭ್ರಷ್ಟಾಚಾರ ಪ್ರಕರಣದಲ್ಲಿ ಈಶ್ವರಪ್ಪ ಪಾತ್ರವಿಲ್ಲ ಎಂದು ಹೇಳಿಕೆ ನೀಡುವ ಮೂಲಕ ಕ್ಲೀನ್‌ಚಿಟ್ ನೀಡಿದ್ದಾರೆ. ಈಗ ಪಿಎಸ್‌ಐ ನೇಮಕಾತಿ ಹಗರಣದಲ್ಲಿ ಸಚಿವ ಅಶ್ವತ್ ನಾರಾಯಣರದ್ದು ಹಾಗೆಯೇ ಮಾಡುತ್ತಾರೆ ಎಂದು ಟೀಕಿಸಿದರು.
ಸಚಿವ ಅಶ್ವತ್ಥನಾರಾಯಣ ನನ್ನ ಬಗ್ಗೆ ಸಲ್ಲದ ಆರೋಪ ಮಾಡಿದ್ದಾರೆ. ತಿಹಾರ್ ಜೈಲೇ ಅವರಿಗೆ ಗತಿ ಎಂದು ಹೇಳಿದ್ದಾರೆ. ಅವರು ತಿಹಾರ್ ಜೈಲಿಗಾದರೂ ಹಾಕಲಿ, ಪರಪ್ಪನ ಅಗ್ರಹಾರ ಜೈಲಿಗಾದರೂ ಹಾಕಲಿ. ಆದರೆ ಅವರು ಮಾಡಿರುವ ಹಗರಣಗಳು ಮುಚ್ಚಿ ಹೋಗುವುದಿಲ್ಲ ಎಂದು ಅಶ್ವತ್ಥನಾರಾಯಣ ಅವರಿಗೆ ತಿರುಗೇಟು ನೀಡಿದರು.
ಬಿಜೆಪಿ ಸರ್ಕಾರ ಈ ರಾಜ್ಯಕ್ಕೆ ದ್ರೋಹ ಬಗೆದಿದೆ. ಪಿಎಸ್‌ಐ ಹಗರಣ ಸೇರಿದಂತೆ ಎಲ್ಲಾ ನೇಮಕಾತಿಗಳಲ್ಲೂ ಅಕ್ರಮ ನಡೆದಿದೆ. ಉದ್ಯೋಗ ಬಯಸುವ ಯುವ ಆಕಾಂಕ್ಷಿಗಳಿಗೆ ದ್ರೋಹ ಮಾಡಿದೆ. ಪ್ರಶ್ನೆ ಪತ್ರಿಕೆಗಳ ಬಹಿರಂಗಗೊಂಡಿವೆ. ಪ್ರತಿಯೊಂದು ಹುದ್ದೆಗಳ ನೇಮಕಾತಿಯಲ್ಲಿ ಹಗರಣ ನಡೆದಿದೆ. ಆದರೆ, ಅದರ ರೂವಾರಿಗಳಾದ ಸಚಿವರ ಪಾತ್ರವನ್ನು ಮಾತ್ರ ರಾಝ್ಯ ಸರ್ಕಾರ ಮುಚ್ಚಿ ಹಾಕಿದೆ ಎಂದು ದೂರಿದರು.
ಉಪನ್ಯಾಸಕರ ನೇಮಕಾತಿಯಲ್ಲಿ ಫೋನ್ ಮೂಲಕವೇ ಅವ್ಯವಹಾರ ನಡೆದಿರುವುದು ಪತ್ತೆಯಾಗಿದ್ದರೂ ರಾಜ್ಯ ಸರ್ಕಾರ ಸುಮ್ಮನಿದೆ ಎಂದರು,
ಕಾಂಗ್ರೆಸ್ ಪಾದಯಾತ್ರೆ ಬಗ್ಗೆ ಹಗುರವಾಗಿ ಮಾತನಾಡಿದ ಗೃಹ ಸಚಿವ ಆರಗ ಜನೇಂದ್ರ ಅವರ ಹೇಳಿಕೆಗೆ ತಿರುಗೇಟು ನೀಡಿದ ಡಿ.ಕೆ. ಶಿವಕುಮಾರ್, ಇದು ಚುನಾವಣೆ ಗಿಮಿಕ್ ಅಲ್ಲ. ಹಾಗಾದರೆ ಹಿಂದೆ ಯಡಿಯೂರಪ್ಪನವರು ಮಾಡಿದ ಪಾದಯಾತ್ರೆ, ಲಾಲ್ ಕೃಷ್ಣ ಅಡ್ವಾಣಿಯವರ ರಥಯಾತ್ರೆ ಇವೆಲ್ಲವೂ ಗಿಮಿಕ್ಕೇ ಎಂದು ಪ್ರಶ್ನಿಸಿದರು.
ಶಿವಮೊಗ್ಗಕ್ಕೆ ವಿಶೇಷ ಭೇಟಿ ನೀಡಿರುವೆ. ಇದು ಸಂಸ್ಕೃತಿಯ ನಾಡು. ಇಂತಹ ಮಲೆನಾಡು ಜಿಲ್ಲೆಯನ್ನು ಗೃಹ ಸಚಿವರು, ಮಾಜಿ ಸಚಿವ ಈಶ್ವರಪ್ಪನವರು ಶಾಂತಿ ಕದಡುವ ಕೆಲಸ ಮಾಡಿದ್ದಾರೆ. ೧೪೪ ಸೆಕ್ಷನ್ ಉಲ್ಲಂಘನೆ, ಕೋಮು ಗಲಭೆ ನಡುವೆ ಶಿವಮೆಗ್ಗ ನಲುಗಿ ಹೋಗಿದೆ. ಶಿವಮೆಗ್ಗದಲ್ಲಿ ಹೊಸ ಉದ್ಯೋಗಗಳನ್ನು ಕಲ್ಪಿಸುವುದಾಗಿ ಬಿಜೆಪಿ ಸರ್ಕಾರ ಹೇಳಿತ್ತು. ಆದರೆ, ಇರುವ ಎರಡು ಕಾರ್ಖಾನೆಗಳು ಮುಚ್ಚಿ ಹೋಗಿವೆ. ಇವರು ಕೋಮುವಾದವನ್ನು ಅಭಿವೃದ್ಧಿಪಡಿಸುತ್ತಾರೆ ಹೊರತು ಅಭಿವೃದ್ಧಿ ಕಾರ್ಯಗಳನ್ನಲ್ಲ. ಇಲ್ಲಿ ಉದ್ಯೋಗಗಳನ್ನು ಸೃಷ್ಠಿಸಲಿ ಎಂದು ಹೇಳಿದರು.
ಮಸೀದಿ ಮತ್ತು ದೇವಸ್ಥಾನದ ಮೈಕ್ ಗಳಿಗೆ ಸಂಬಂಧಿಸಿದಂತೆ ಸರ್ಕಾರ ಆದೇಶ ನೀಡಿ ನಿರ್ಬಂಧ ತರುವ ಬದಲು ಹೊರಗಡೆ ನಡೆಯುವ ಪಾರ್ಟಿಗಳನ್ನು ತಡೆಯಲಿ ಎಂದು ಹೇಳಿದರು.